ಬೆಂಗಳೂರು: ರಾಜಧಾನಿ ಬೆಂಗಳೂರು ನಗರದ ಬೀದಿನಾಯಿಗಳಿಗೆ ಮೈಕ್ರೋಚಿಪ್ ಅಳವಡಿಸುವ ಸಲುವಾಗಿ ಬಿಬಿಎಂಪಿ ಸೂಕ್ತ ಕ್ರಮಗಳನ್ನು ಅನುಸರಿಸದೇ, ಟೆಂಡರ್ ಕರೆದಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ನಗರದ ಹೆಬ್ಬಾಳ ನಿವಾಸಿ ಎಸ್. ಪ್ರಿಯದರ್ಶಿನಿ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ತ್ ಯಾದವ್ ಹಾಗೂ ವೆಂಕಟೇಶ್ ಟಿ.ನಾಯ್ಕ ಅವರಿದ್ದ ರಜಾಕಾಲದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪಶು ಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಜೂನ್ ಮೊದಲ ವಾರಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಬಿಬಿಎಂಪಿಯೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸದೇ, ಬೀದಿನಾಯಿಗಳ ಆರೋಗ್ಯ ಹಾಗೂ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ. ಈ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಬೇಕು. ಅಲ್ಲದೆ, ಹಲವೆಡೆ ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಿ ಚಿಪ್ ಅಳವಡಿಸಲಾಗುತ್ತಿದ್ದು, ಈ ಪ್ರಕ್ರಿಯೆಗೆ ತಡೆ ನೀಡಬೇಕು'' ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಅರ್ಜಿಯಲ್ಲಿ ಏನಿದೆ?: ನಗರದಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆಗೊಳಪಡಿಸಿದ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆಗೆ ಬಿಬಿಎಂಪಿ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಟೆಂಡರ್ ಕರೆದಿದೆ. ಆದರೆ, ಕಾನೂನು ವ್ಯಾಪ್ತಿಯಲ್ಲಿ ನಾಯಿಗಳಿಗೆ ಮೈಕ್ರೋಚಿಪ್ ಅಳವಡಿಕೆ ಮಾಡಲು ಅವಕಾಶವಿಲ್ಲ. ಅಲ್ಲದೆ, ಈ ಬಗ್ಗೆ ಟೆಂಡರ್ ಕರೆಯುವ ಅಧಿಕಾರವನ್ನು ಕೂಡ ಬಿಬಿಎಂಪಿ ಹೊಂದಿಲ್ಲ. ಇದನ್ನು ಮೀರಿ ಬಿಬಿಎಂಪಿ ಟೆಂಡರ್ ಕರೆದಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಅಲ್ಲದೆ, ಲಸಿಕೆ ಮತ್ತು ಮೈಕ್ರೊಚಿಪಿಂಗ್ ಅಳವಡಿಸುವ ಯೋಜನೆಗೆ ಸರ್ಕಾರದಿಂದ ಅನುಮೋದನೆ ಪಡೆದಿದೆಯೇ ಎನ್ನುವ ಬಗ್ಗೆ ತಿಳಿಸಿಲ್ಲ. ಈ ವಿಚಾರವಾಗಿ ಬಿಬಿಎಂಪಿ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಪ್ರಮಾಣಿತ ಕಾರ್ಯಾಚರಣೆ ವಿಧಾನ ಅನುಸರಿಸಿಲ್ಲ. ಚಿಪ್ ಅಳವಡಿಕೆಯ ಕುರಿತು ಸಾರ್ವಜನಿಕ ವಲಯದಲ್ಲಿ ಎದುರಾದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸದೆ ಟೆಂಡರ್ ಪ್ರಕ್ರಿಯೆಯನ್ನು ಮುಂದುವರೆಸಲಾಗಿದೆ ಎಂದು ವಿವರಿಸಲಾಗಿದೆ.
ಇಲ್ಲಿಯವರೆಗೆ ಈ ಬಗ್ಗೆ ನಡೆಸಿದ ಪ್ರಾಯೋಗಿಕ ಅಧ್ಯಯನದ ಯಾವುದೇ ವರದಿಯನ್ನು ಪ್ರತಿಕ್ರಿಯಿಸಿದವರು ಸಾರ್ವಜನಿಕಗೊಳಿಸಿಲ್ಲ. ಪಶುವೈದ್ಯರು ಲಸಿಕೆ ಮತ್ತು ಮೈಕ್ರೊಚಿಪ್ಪಿಂಗ್ ಕಾರ್ಯವಿಧಾನಗಳ ಪ್ರತಿಕೂಲ ಪರಿಣಾಮಗಳನ್ನು ತಿಳಿದುಕೊಳ್ಳಲು ಅಳವಡಿಕೆಯ ನಂತರ ಮೇಲ್ವಿಚಾರಣೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಆದರೆ, ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಬಿಬಿಎಂಪಿ ಯಾವುದೇ ತಯಾರಿ ಮಾಡಿಲ್ಲ. ಅಲ್ಲದೇ, ಸಮರ್ಪಕ ಅಧ್ಯಯನ ಮಾಡದೇ ಪ್ರಕ್ರಿಯೆ ಕಾರ್ಯಗತಗೊಳಿಸಲಾಗಿದೆ. ಇಲ್ಲಿ ಸಾರ್ವಜನಿಕ ಹಣ ವ್ಯರ್ಥ ಮಾಡುವ ಜೊತೆಗೆ ಮುಗ್ಧ ಪ್ರಾಣಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಹಾಗಾಗಿ, ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.
ಅಲ್ಲದೆ, ಚುಚ್ಚುಮದ್ದು ಮತ್ತು ಮೈಕ್ರೋಚಿಪ್ ಅಳವಡಿಕೆಯ ನಂತರ ನಾಯಿಗಳು ಹೆಚ್ಚು ಆಕ್ರಮಣಕಾರಿಯಾಗಬಹುದು ಮತ್ತು ಪ್ರತಿಸ್ಪಂದಕರ ಮೇಲೆ ಅನಗತ್ಯ ದಾಳಿ ನಡೆಸಬಹುದು. ಹೀಗಾಗಿ, ಕಾನೂನಿನ ಯಾವುದೇ ನಿಬಂಧನೆ ಇಲ್ಲದೇ ದೊಡ್ಡ ಪ್ರಮಾಣದಲ್ಲಿ ಚಿಪ್ ಮತ್ತು ಲಸಿಕೆ ಹಾಕುವುದು ಅತ್ಯಂತ ಅಪಾಯಕಾರಿ. ಇದು ನಾಯಿಗಳಿಗೆ ಅಗಾಧವಾದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಮುಗ್ಧ ಬೀದಿನಾಯಿಗಳನ್ನು ಮನುಷ್ಯರು ಸಹಾನುಭೂತಿಯಿಂದ ನಡೆಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಇದನ್ನೂ ಓದಿ: ವಿದೇಶಿ ಕಾರ್ಮಿಕರಿಗೆ ಇಪಿಎಫ್, ಇಪಿ ಸೌಲಭ್ಯ ಅಸಾಂವಿಧಾನಿಕ: ಹೈಕೋರ್ಟ್ - EPF EP For Foreign Workers