ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಸಬ ಹೊಬಳಿಯ ಆಲಗೇರಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳಿಂದ ಹತ್ತು ಗುಂಟೆ ಅರಣ್ಯ ಜಮೀನು ಒತ್ತುವರಿಯಾಗಿರುವ ವಿಚಾರ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಒತ್ತುವರಿ ತೆರವುಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸ್ಥಳೀಯ ಗ್ರಾಮಸ್ಥರಾದ ಜಿ.ವಿ.ಚಂದ್ರಶೇಖರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ಕೆ.ವಿ.ಅರವಿಂದ ಅವರಿದ್ದ ವಿಭಾಗೀಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.
ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ರಾಜ್ಯ ಸರ್ಕಾರ, ತೀರ್ಥಹಳ್ಳಿ ತಾಲೂಕು ತಹಸೀಲ್ದಾರ್, ಆಗುಂಬೆ ವಲಯ ಮೇಗರವಳ್ಳಿ ಅರಣ್ಯ ಸಂರಕ್ಷಣಾ ಅಧಿಕಾರಿ, ಶಿವಮೊಗ್ಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿಗೆ ನೋಟಿಸ್ ಜಾರಿಗೊಳಿಸಿತು. ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಿ ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಆಲಗೇರಿ ಗ್ರಾಮದ ಸರ್ವೇ ನಂಬರ್ 6ರಲ್ಲಿನ ಸರ್ಕಾರಿ ಸೊಪ್ಪಿನ ಬೆಟ್ಟ ಹಾಗೂ ಕಿರು ಅರಣ್ಯಕ್ಕೆ ಸೇರಿದ ಜಾಗದ 10 ಗುಂಟೆ ಜಾಗವನ್ನು ಗ್ರಾಮಸ್ಥ ಉಮಾಪತಿ ಎಂಬುವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಜಾಗದ ಸುತ್ತಲೂ ತಂತಿ ಬೇಲಿ ನಿರ್ಮಿಸಲಾಗಿದೆ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಬೇಕು ಹಾಗೂ ಒತ್ತುವರಿ ತೆರವುಗೊಳಿಸಬೇಕು ಎಂದು ಕೋರಿ ಆಗುಂಬೆ ವಲಯ ಅರಣ್ಯಾಧಿಕಾರಿ ಹಾಗೂ ತಹಸೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕ್ಷ್ಯಾಧಾರಗಳ ಸಹಿತ ದೂರು ನೀಡಲಾಗಿತ್ತು. ಆದರೆ, ಈವರೆಗೂ ಒತ್ತುವರಿ ತೆರವುಗೊಳಿಸಲು ಅವರು ಅಗತ್ಯ ಕ್ರಮ ಕೈಗೊಂಡಿಲ್ಲ'' ಎಂದು ನ್ಯಾಯಪೀಠದ ಗಮನಕ್ಕೆ ತಂದರು.
''ಪ್ರಕರಣದಲ್ಲಿ ನಡೆದಿರುವ ಒತ್ತುವರಿ ತೆರವುಗೊಳಿಸಿ ಸರ್ಕಾರದ ಜಮೀನನ್ನು ರಕ್ಷಣೆ ಮಾಡಬೇಕು ಮತ್ತು ಒತ್ತುವರಿದಾರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು'' ಎಂದು ಕೋರಿದರು.
ಇದನ್ನೂ ಓದಿ: ಪೆನ್‌ಡ್ರೈವ್ ಹಂಚಿಕೆ: ಬಂಧನ ಭೀತಿಯಲ್ಲಿದ್ದ ನವೀನ್ ಗೌಡ, ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ - High Court