ಬೆಂಗಳೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಗಳು ವೀಣಾ ನಿರ್ದೇಶಕರಾಗಿರುವ ಎಕ್ಸಾಲಾಜಿಕ್ ಸಲೂಷನ್ಸ್ ವಿರುದ್ಧದ ತನಿಖೆಗೆ ಆದೇಶಿಸಿದ್ದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ. ಅಲ್ಲದೆ, ಅರ್ಜಿದಾರ ಸಂಸ್ಥೆಯ ವಿರುದ್ಧ ತನಿಖೆ ವೇಳೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿದೆ.
ತಮ್ಮ ಕಂಪೆನಿಯ ವಿರುದ್ಧ ತನಿಖೆ ನಡೆಸುವಂತೆ ಗಂಭೀರ ವಂಚನೆ ತನಿಖಾ ಅಧಿಕಾರಿಗಳಿಗೆ (ಎಸ್‌ಎಫ್‌ಐಒ) ಸೂಚನೆ ನೀಡಿದ್ದ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ವೀಣಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ವಿಚಾರಣೆ ಆಲಿಸಿ, ಆದೇಶವನ್ನು ಕಾಯ್ದಿರಿಸಿತು. ಅಲ್ಲದೆ, ಕಂಪನಿಯ ಎಲ್ಲ ವ್ಯವಹಾರದ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ಸಲ್ಲಿಸಬೇಕು. ಆದರೆ, ಅಧಿಕಾರಿಗಳು ಯಾವುದೇ ಕಠಿಣ ಕ್ರಮಕ್ಕೆ ಮುಂದಾಗಬಾರದು ಎಂದು ನ್ಯಾಯಪೀಠ ಸೂಚಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಕಂಪೆನಿ ಕಾಯಿದೆಯಡಿಯ ಸೆಕ್ಷನ್ 210ರ ಅಡಿಯಲ್ಲಿ ಈಗಾಗಲೇ ತನಿಖೆ ನಡೆಸಲಾಗುತ್ತಿದೆ. ಹೀಗಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕಂಪೆನಿ ಕಾಯಿದೆಯ ಸೆಕ್ಷನ್ 212 ರ ಅಡಿಯಲ್ಲಿ ಗಂಭೀರ ವಂಚನೆ ತನಿಖಾ ಅಧಿಕಾರಿಗಳಿಗೆ (ಎಸ್‌ಎಫ್‌ಐಒ) ತನಿಖೆಗೆ ಆದೇಶಿಸಿದೆ. ಎರಡೂ ರೀತಿಯಲ್ಲಿ ತನಿಖೆ ನಡೆಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ ಎಸ್‌ಎಫ್‌ಐಒ ತನಿಖೆ ನಿಲ್ಲಿಸಬೇಕು'' ಎಂದು ಮನವಿ ಮಾಡಿದರು.
''ಅತ್ಯಂತ ಕ್ರೂರವಾಗಿದ್ದ ಹಾಗೂ ದೊಡ್ಡ ಮಟ್ಟದ ಹಗರಣಗಳಲ್ಲಿ ಮಾತ್ರ ಎಸ್‌ಎಫ್‌ಐಒ ಅಧಿಕಾರಿಗಳಿಂದ ತನಿಖೆ ನಡೆಯುತ್ತದೆ. ಅಲ್ಲದೆ, ತನಿಖೆಯ ಸಂದರ್ಭದಲ್ಲಿ ಬಂಧನ ಮಾಡುವುದು ಮತ್ತು ಆಸ್ತಿಗಳ ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಅವಕಾಶವಿರಲಿದೆ. ಆದರೆ, ಪ್ರಸ್ತುತ ಪ್ರಕರಣ ಕೇವಲ 1.76 ಕೋಟಿ ರೂ.ಗಳ ಹಗರಣ ಆರೋಪವಾಗಿದ್ದು ತನಿಖೆ ನಡೆಸುವುದಕ್ಕೆ ಅವಕಾಶವಿರಲಿಲ್ಲ. ಅಲ್ಲದೆ, ಅರ್ಜಿದಾರ ಸಂಸ್ಥೆ ಸಾಫ್ಟ್ವೇರ್ ಸೇವೆಗಳ ಪೂರೈಕೆಗೆ ಸಂಬಂಧಿಸಿದಂತೆ ಸಿಎಂಆರ್‌ಎಲ್ ಎಂಬ ಕಂಪೆನಿಯೊಂದಿಗೆ ವ್ಯವಹಾರ ನಡೆಸಿದ್ದು, ಅದನ್ನು ದಾಖಲಿಸಿಲ್ಲ ಎಂಬುದು ಆರೋಪವಾಗಿದೆ. ಆದ್ದರಿಂದ ಪ್ರಸ್ತುತ ಪ್ರಕರಣದಲ್ಲಿ ಗಂಭೀರ ವಂಚನೆ ಆರೋಪದ ಲಕ್ಷಣಗಳಿಲ್ಲ. ಜೊತೆಗೆ, ಸೆಕ್ಷನ್ 210ರ ಅಡಿಯಲ್ಲಿ ಆರೋಪ ಸಂಬಂಧ ಮಧ್ಯಂತರ ವರದಿ ಸಲ್ಲಿಸಲಾಗಿದೆ, ಆದ್ದರಿಂದ ತನಿಖೆ ರದ್ದುಪಡಿಸಬೇಕು'' ಎಂದು ಕೋರಿದರು.
ಸರ್ಕಾರದ ಪರ ವಾದ ಮಂಡಿಸಿದ ವಕೀಲರು, ''ಕೊಚ್ಚಿನ್ ಮಿನರಲ್ಸ್ ರುಟೈಲ್ ಲಿಮಿಟೆಡ್ (ಸಿಎಂಆರ್‌ಎಲ್)ವಿವಿಧ ರಾಜಕೀಯ ಕಾರ್ಯಕತ್ರಿಗೆ 135 ಕೋಟಿ ನೀಡಿರುವ ಆರೋಪವಿದೆ. ಈ ಸಂಸ್ಥೆಗೆ ಅರ್ಜಿದಾರರು ಯಾವುದೇ ಸಾಫ್ಟ್ವೇರ್ ಒದಗಿಸದಿದ್ದರೂ 1.72 ಕೋಟಿ ರೂ.ಗಳನ್ನು ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ(ಕೆಎಸ್‌ಐಡಿಸಿ) ಪಾವತಿಸಿದೆ. ಈ ಪ್ರಕ್ರಿಯೆಯಲ್ಲಿ 135 ಕೋಟಿ ರೂ.ಗಳ ವಹಿವಾಟು ನಡೆಸಿದ್ದ ದೊಡ್ಡ ಮಟ್ಟದ ವ್ಯವಹಾರವಾಗಿದ್ದು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಆದ್ದರಿಂದ ಅತ್ಯಂತ ಶಿಸ್ತಿನ ತನಿಖಾ ಸಂಸ್ಥೆಯಾಗಿರುವ ಎಸ್ಎಫ್ಐಒಗೆ ತನಿಖೆಗೆ ವಹಿಸಿದೆ. ಈ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆಯಾಗಿಲ್ಲ'' ಎಂದರು.
ಪ್ರಕರಣದ ಹಿನ್ನೆಲೆ: ಪಿಣಿರಾಯಿ ವಿಜಯನ್ ಪುತ್ರಿ ವೀಣಾ ನಿರ್ದೇಶಕರಾಗಿರುವ ಎಕ್ಸಾಲಾಜಿಕ್ ಸಲೂಷನ್ಸ್ ಕಂಪೆನಿಯು ಕೊಚ್ಚಿನ್ ಮಿನರಲ್ಸ್ ರುಟೈಲ್ ಲಿಮಿಟೆಡ್ (ಸಿಎಂಆರ್‌ಎಲ್) ಮತ್ತು ಅರ್ಜಿದಾರರ ನಡುವಿನ ವ್ಯವಹಾರಗಳಿಗೆ ಸಂಬಂಧಿಸಿ 2021ರಲ್ಲಿ ಪರಿಶೀಲಿಸಿದ ಸಂದರ್ಭದಲ್ಲಿ ಕಂಪೆನಿ ಕಾಯಿದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ತನಿಖೆ ನಡೆಸಬೇಕು ಎಂದು ಬೆಂಗಳೂರಿನ ಕಂಪೆನಿಗಳ ರಿಜಿಸ್ಟ್ರಾರ್ ಅವರಿಂದ ಅರ್ಜಿದಾರರಿಗೆ ಪತ್ರ ಬರೆಯಲಾಗಿತ್ತು.
ಈ ಸಂಬಂಧ ಪ್ರತಿಕ್ರಿಯಿಸಿದ್ದ ಅರ್ಜಿದಾರರು ಕಂಪೆನಿ ರಿಜಿಸ್ಟ್ರಾರ್ ಕೇಳಿದ್ದ ಎಲ್ಲ ಮಾಹಿತಿಗಳನ್ನು ದಾಖಲೆಗಳೊಂದಿಗೆ ಸಲ್ಲಿಸಿದ್ದರು. ಆದರೆ, ಕಂಪೆನಿಗಳ ರಿಜಿಸ್ಟ್ರಾರ್ ಅವರು 2021ರ ಅ. 1ರಂದು ಮತ್ತೊಂದು ಪತ್ರ ಬರೆದು, ಈವರೆಗೂ ಸಲ್ಲಿಸಿರುವ ದಾಖಲೆಗಳು ಸರಿಯಿಲ್ಲ. ಹಾಗಾಗಿ, ಮುಂದಿನ ಏಳು ದಿನಗಳಲ್ಲಿ ಎಲ್ಲ ಸಮರ್ಪಕವಾದ ದಾಖಲೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದ್ದರು.
ಇದಕ್ಕೆ ಉತ್ತರಿಸಿದ್ದ ಅರ್ಜಿದಾರರು, ತಮ್ಮ ವಾದವನ್ನು ಆಲಿಸಬೇಕು ಎಂದು ಮನವಿ ಮಾಡಿದ್ದರು. ಅದರಂತೆ 2022ರ ಜೂನ್ 24ರಂದು ಅರ್ಜಿದಾರರು ತಮ್ಮ ಪ್ರತಿನಿಧಿಗಳೊಂದಿಗೆ ಖುದ್ದು ಹಾಜರಾಗಿ ಅಗತ್ಯವಿರುವ ದಾಖಲೆಗಳೊಂದಿಗೆ ಎಲ್ಲ ವಿವರಣೆ ಮತ್ತು ಸ್ಪಷ್ಟೀಕರಣಗಳನ್ನು ನೀಡಿದ್ದರು. ಆದರೆ, ಅರ್ಜಿದಾರ ಕಂಪೆನಿಯ ನಿರ್ದೇಶಕರ ತಂದೆಯ ಅಧೀನದಲ್ಲಿರುವ ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ (ಕೆಎಸ್‌ಐಡಿಸಿ)ವು ಕೊಚ್ಚಿನ್ ಮಿನರಲ್ಸ್ ಮತ್ತು ರುಟೈಲ್ ಲಿಮಿಟೆಡ್‌ಯಲ್ಲಿ ಶೇ.13.4ರಷ್ಟು ಷೇರುಗಳನ್ನು ಹೊಂದಿದೆ ಎಂದು ಆರೋಪಿಸಿ ಕಂಪನಿಗಳ ರಿಜಿಸ್ಟ್ರಾರ್ ಅವರು 2023ರ ಆಗಸ್ಟ್ ತಿಂಗಳಲ್ಲಿ ಶೋಕಾಸ್ ನೋಟೀಸ್ ಜಾರಿ ಮಾಡಿದ್ದರು. ನೋಟಿಸ್‌ಗೆ ಸಂಬಂಧಿಸಿದಂತೆ ಅರ್ಜಿದಾರ ಕಂಪೆನಿ ವಿವರಣೆಯನ್ನು ನೀಡಿತ್ತು.
ಆದರೆ, ಕೈಗಾರಿಕಾ ಅಭಿವೃದ್ಧಿ ನಿಗಮ (ಕೆಎಸ್‌ಐಡಿಸಿ)ವು ಕೊಚ್ಚಿನ್ ಮಿನರಲ್ಸ್ ಮತ್ತು ರುಟೈಲ್ ಲಿಮಿಟೆಡ್ ವ್ಯವಹಾರಗಳ ಕುರಿತಂತೆ ತನಿಖೆಯನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರದಿಂದ ಆದೇಶ ಹೊರಡಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಕೆ.ಪ್ರಭು ಎಂಬುವರು ನೋಟಿಸ್ ನೀಡಿದ್ದರು. ಈ ಕುರಿತಂತೆ ಅರ್ಜಿದಾರರು ದಾಖಲೆಗಳನ್ನು ಒದಗಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು.
ಈ ನಡುವೆ ಎಕ್ಸಾಲಾಜಿಕ್ ಸಲೂಷನ್ಸ್ ವಿರುದ್ಧ ಕೇಂದ್ರ ಕೇಂದ್ರ ಕಾಪೋರೇಟ್ ವ್ಯವಹಾರಗಳ ಸಚಿವಾಲಯ ಕಂಪೆನಿ ಕಾಯ್ದೆ ಸೆಕ್ಷನ್ 212 ಅಡಿಯ ತನಿಖೆ ನಡೆಸುವಂತೆ ಜನವರಿ 31ರಂದು ಕೇಂದ್ರ ಸರ್ಕಾರ ಆದೇಶಿಸಿತ್ತು. ಕೇಂದ್ರ ಸರ್ಕಾರದ ಈ ಆದೇಶವು ದೋಷಪೂರಿತವಾಗಿದೆ. ಸೂಕ್ತ ಕಾರಣವಿಲ್ಲದೆ ತನಿಖೆಗೆ ಆದೇಶಿಸಿದ್ದು, ಸ್ವಾಭಾವಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದರು. ಅಲ್ಲದೆ, ಕೇಂದ್ರ ಸರ್ಕಾರವು ತನಿಖೆಗೆ ಹೊರಡಿಸಿರುವ ಆದೇಶ ಮತ್ತು ಅದರ ಮುಂದಿನ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಬೇಕು ಎಂದು ಹೈಕೋರ್ಟ್ ಮೇಟ್ಟಿಲೇರಿದರು.
ಇದನ್ನೂ ಓದಿ: ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿರುವಾಗ ಜೀವನಾಂಶ ನೀಡಲು ನಿರಾಕರಿಸುವಂತಿಲ್ಲ : ಹೈಕೋರ್ಟ್