ಬೆಂಗಳೂರು : ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮಾಲೀಕತ್ವದ ರಾಕ್‌ಲೈನ್ ಮಾಲ್‌ಗೆ ಹಾಕಲಾಗಿರುವ ಬೀಗವನ್ನು ತಕ್ಷಣವೇ ತೆರವುಗೊಳಿಸುವಂತೆ ಹೈಕೋರ್ಟ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಆದೇಶಿಸಿದೆ.
ಬಾಕಿ ತೆರಿಗೆ ಪಾವತಿಸದ ಕಾರಣ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ಬರುವ ಮಾಲ್‌ಗೆ ಬೀಗ ಹಾಕಿದ್ದ ಕ್ರಮವನ್ನು ಪ್ರಶ್ನಿಸಿ ರಾಕ್‌ಲೈನ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಎನ್.ಪ್ರಕಾಶ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ವಿಚಾರಣೆ ವೇಳೆ ರಾಕ್‌ಲೈನ್ ವೆಂಕಟೇಶ್ ಪರ ಹಿರಿಯ ವಕೀಲ ಎಂ. ಶ್ಯಾಮಸುಂದರ್, ''ಮಾಲ್ ಅನ್ನು ಲಾಕ್ ಮಾಡಲು ಬಿಬಿಎಂಪಿಯ ಪ್ರತ್ಯೇಕ ಕಾಯ್ದೆಯಲ್ಲಾಗಲಿ ಅಥವಾ ಕೆಎಂಸಿ ಕಾಯ್ದೆಯಲ್ಲಾಗಲಿ, ಎಲ್ಲಿಯೂ ಅವಕಾಶವಿಲ್ಲ. ಈ ಹಿಂದೆ ಇದೇ ಹೈಕೋರ್ಟ್‌ನ ಮತ್ತೊಂದು ಪೀಠ, ಮಂತ್ರಿಮಾಲ್ ಪ್ರಕರಣದಲ್ಲಿ ಇದನ್ನು ಸ್ಪಷ್ಟಪಡಿಸಿದೆ. ತೆರಿಗೆ ಸಂಗ್ರಹಿಸಲು ಬಿಬಿಎಂಪಿಗೆ ಪರ್ಯಾಯ ಮಾರ್ಗಗಳಿವೆ. ಆದ್ದರಿಂದ, ರಾಕ್‌ಲೈನ್ ಮಾಲ್ ಬೀಗ ತೆರೆಯಲು ಆದೇಶಿಸಬೇಕು'' ಎಂದು ಕೋರಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ''ನೀವೇಕೆ ಈ ಹಿಂದೆ ಹೈಕೋರ್ಟ್‌ನ ಮತ್ತೊಂದು ಪೀಠ ನೀಡಿರುವ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿಲ್ಲ'' ಎಂದು ಪ್ರಶ್ನಿಸಿತು. ಅಲ್ಲದೆ, ''ರಾಕ್ ಲೈನ್ ಮಾಲ್‌ಗೆ ಹಾಕಲಾಗಿರುವ ಬೀಗ ತೆಗೆಯುವಂತೆ'' ಸೂಚನೆ ನೀಡಿದೆ. ಜೊತೆಗೆ, ತೆರಿಗೆ ಪಾವತಿಸದ ಕುರಿತಂತೆ ಪ್ರತ್ಯೇಕವಾಗಿ ಕ್ರಮ ಕೈಗೊಳ್ಳಬಹುದಾಗಿ ಎಂದು ಪೀಠ ವಿವರಿಸಿದೆ.
ಪ್ರಕರಣದ ಹಿನ್ನೆಲೆ : ರಾಕ್‌ಲೈನ್ ಮಾಲ್‌ನ ತೆರಿಗೆ ಬಾಕಿ ಕುರಿತಂತೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿತ್ತು. ಆದರೆ, ಈ ಸಂಬಂಧ ರಾಕ್‌ಲೈನ್ ಮಾಲ್‌ನ ಮಾಲೀಕರು ತೆರಿಗೆ ಪಾವತಿ ಮಾಡದ ಹಿನ್ನೆಲೆಯಲ್ಲಿ 2024 ರ ಫೆಬ್ರವರಿ 14 ರಂದು ಬಿಬಿಎಂಪಿ ಅಧಿಕಾರಿಗಳು ಮಾಲ್‌ಗೆ ಬೀಗ ಹಾಕಿ ವಶಕ್ಕೆ ಪಡೆದುಕೊಂಡಿದ್ದರು. ಇದನ್ನು ಪ್ರಶ್ನಿಸಿ ಮಾಲ್ ಹೈಕೋರ್ಟ್ ಮೆಟ್ಟಿಲೇರಿತ್ತು.
ಇದನ್ನೂ ಓದಿ: ಸಿದ್ದರಾಮಯ್ಯ ಕ್ಷೇತ್ರದ ಇವಿಎಂ, ವಿವಿಪ್ಯಾಟ್ ಲೋಕಸಭೆ ಚುನಾವಣೆಗೆ ಬಳಸಲು ಹೈಕೋರ್ಟ್ ಅನುಮತಿ