ಬೆಂಗಳೂರು: ಉಗಾಂಡದಲ್ಲಿ ಗಂಡು ಮಗುವನ್ನು ದತ್ತು ಪಡೆದಿರುವ ದಂಪತಿಗೆ ಎನ್ಒಸಿ ನೀಡುವ ಮೂಲಕ ಅವರ ಮನವಿಯನ್ನು ಪರಿಗಣಿಸುವಂತೆ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರಕ್ಕೆ (ಸಿಎಆರ್ಎ) ನಿರ್ದೇಶನ ನೀಡಿ ಹೈಕೋರ್ಟ್ ಆದೇಶಿಸಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಆ ಮೂಲಕ ಕೀನ್ಯಾದಲ್ಲಿ ವಾಸಿಸುತ್ತಿರುವ ಭಾರತೀಯ ದಂಪತಿಯ ರಕ್ಷಣೆಗೆ ಮುಂದಾಗಿದೆ.
ಗಡಿಯಾಚೆಗಿನ ದತ್ತು ಸ್ವೀಕಾರದ ಕುರಿತಂತೆ ಸುಪ್ರೀಂ ಕೋರ್ಟ್, ಕೇರಳ ಮತ್ತು ಮದ್ರಾಸ್ ಹೈಕೋರ್ಟ್ಗಳ ತೀರ್ಪುಗಳನ್ನು ನ್ಯಾಯಪೀಠ ಉಲ್ಲೇಖಿಸಿತು. ಪಕ್ಷಗಳ ಹಕ್ಕುಗಳನ್ನು ಉಗಾಂಡಾದ ನ್ಯಾಯಾಲಯಗಳು ನಿರ್ಣಾಯಕವಾಗಿ ನಿರ್ಧರಿಸಿವೆ ಮತ್ತು ಅರ್ಜಿದಾರರು ಕೋರಿರುವ ಪರಿಹಾರಕ್ಕೆ ಅರ್ಹರಾಗಿದ್ದಾರೆ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು?: ಅರ್ಜಿದಾರರು ಭಾರತೀಯ ಪಾಸ್ ಪೋರ್ಟ್ ಹೊಂದಿದ್ದು, ನೈರೋಬಿಯಲ್ಲಿ ನೆಲೆಸಿದ್ದರು. 2011 ರಂದು 2018ರ ನಡುವೆ ಕೀನ್ಯಾದಿಂದ ಉಗಾಂಡ ದೇಶಕ್ಕೆ ಸ್ಥಳಾಂತರಗೊಂಡಿದ್ದರು. 2014 ರಲ್ಲಿ ಗಂಡು ಮಗು ದತ್ತು ಪಡೆದರು ಮತ್ತು ಕಂಪಾಲಾದ ಮಾಕಿಂಡ್ಯೆಯಲ್ಲಿರುವ ನ್ಯಾಯ ವ್ಯಾಪ್ತಿಯ ಕುಟುಂಬ ಮತ್ತು ಮಕ್ಕಳ ನ್ಯಾಯಾಲಯವು ಅವರ ಪರವಾಗಿ ಮಗು ನೋಡಿಕೊಳ್ಳಲು ಅನುಮತಿ ನೀಡಿತ್ತು. ಉಗಾಂಡಾದ ಹೈಕೋರ್ಟ್ ಮುಂದಿನ ವರ್ಷ ಅವರಿಗೆ ಮಗುವಿನ ಪೋಷಕತ್ವವನ್ನೂ ನೀಡಿತ್ತು. ನಂತರ ಅವರು ಉಗಾಂಡಾದ ಹೈಕೋರ್ಟ್ ಮುಂದೆ ಔಪಚಾರಿಕ ದತ್ತು ಪಡೆಯಲು ಅರ್ಜಿ ಸಲ್ಲಿಸಿದರು, ನ್ಯಾಯಾಲಯ ಅವರಿಗೆ ಮಗುವಿನ ಮೇಲೆ ಎಲ್ಲ ಪರಿಣಾಮಾತ್ಮಕ ಹಕ್ಕುಗಳನ್ನು ಮಂಜೂರು ಮಾಡಿತ್ತು.
ಇದನ್ನೂ ಓದಿ: ತಾಯಿ ಹತ್ಯೆ ಮಾಡಿದ್ದ ಆರೋಪಿಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆ ರದ್ದುಪಡಿಸಿದ ಹೈಕೋರ್ಟ್ - High Court quashed death penalty
ಈ ನಡುವೆ ವಿದೇಶ ಮಗುವನ್ನು ದತ್ತು ಸ್ವೀಕರಿಸಲು ಭಾರತೀಯ ನಿಯಮಗಳನ್ನು ಪೂರೈಸುವುದಕ್ಕಾಗಿ ಸಿಎಆರ್ಎಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಹಾಯಕ ಸಾಲಿಸಿಟರ್ ಜನರಲ್ ಶಾಂತಿಭೂಷಣ್, 1995 ರ ಹೇಗ್ ಕನ್ವೆನ್ಶನ್ ಅಡಿ ಅಂತರ ದೇಶ ದತ್ತು ಸ್ವೀಕಾರ ಅವಕಾಶವಿದೆ. ಉಗಾಂಡಾ ಈ ಸಮಾವೇಶಕ್ಕೆ ಸಹಿ ಹಾಕದ ಕಾರಣ, ಸಿಎಆರ್ಎ ನಿಯಮಗಳು ಅಥವಾ ಬಾಲಾಪರಾಧಿ ನ್ಯಾಯ ಕಾಯ್ದೆಯು ಭಾರತದಲ್ಲಿ ದತ್ತು ಪ್ರಕ್ರಿಯೆಯನ್ನು ಕ್ರಮಬದ್ಧಗೊಳಿಸುವ ಪ್ರಕ್ರಿಯೆಗೆ ಅಡ್ಡಿಯಾಗುವುದಿಲ್ಲ. ಉಗಾಂಡಾದ ನ್ಯಾಯಾಲಯಗಳು ದತ್ತು ಸ್ವೀಕಾರವನ್ನು ಕಾನೂನು ಬದ್ಧಗೊಳಿಸಿರುವುದರಿಂದ, ಅರ್ಜಿದಾರರು ಭಾರತೀಯ ನಾಗರಿಕರಾಗಿದ್ದರೆ, ಆ ಆದೇಶಗಳನ್ನು ಭಾರತೀಯ ಕಾನೂನುಗಳ ಪ್ರಕಾರ ಜಾರಿಗೆ ತರಬಹುದು ಎಂದು ಕೇಂದ್ರ ಒಪ್ಪಿಕೊಂಡಿದೆ ಎಂದು ತಿಳಿಸಿದರು.
ಅಲ್ಲದೆ, ಅರ್ಜಿದಾರರ ಹಕ್ಕುಗಳನ್ನು ಅಪಾಯಕ್ಕೆ ತಳ್ಳಲು ಅಥವಾ ಮಗುವನ್ನು ಕಾನೂನುಬಾಹಿರವಾಗಿಸಲು ಸರ್ಕಾರ ಬಯಸುವುದಿಲ್ಲ. ಪೋಷಕರಿಗೆ ಬೆಂಬಲ ಪತ್ರ ನೀಡಿ ದೇಶಕ್ಕೆ ಪ್ರವೇಶಿಸಲು ಮತ್ತು ನಿರ್ಗಮಿಸಲು ಅವಕಾಶ ಲಭ್ಯವಾಗಲಿದೆ. ಎಲ್ಲ ಕಾರ್ಯವಿಧಾನವನ್ನು ಸರಿಯಾಗಿ ಅನುಸರಿಸಿದರೆ, ಅಂತಹ ದತ್ತು ಸ್ವೀಕಾರಕ್ಕಾಗಿ ಸಕ್ಷಮ ಪ್ರಾಧಿಕಾರದಿಂದ ಎನ್ಒಸಿ ನೀಡಲಾಗುವುದು ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಇದನ್ನೂ ಓದಿ: ನೈರ್ಮಲ್ಯವಿಲ್ಲದ ಸ್ಥಳದಲ್ಲಿ ಐಸ್ ಕ್ರೀಂ, ಬಾದಾಮ್ ಹಾಲು ತಯಾರಿಕೆ: ಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ - High Court