ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕುಟುಂಬ ಒಡೆತನದ ಸಿದ್ಧಸಿರಿ ಎಥೆನಾಲ್ ಘಟಕವನ್ನು ಏಕಾಏಕಿ ಮುಚ್ಚುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹೊರಡಿಸಿರುವ ಆದೇಶಕ್ಕೆ ಕಾರಣ ತಿಳಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ.
ಕೆಎಸ್ಪಿಸಿಬಿಯಿಂದ ಎಥೆನಾಲ್ ಘಟಕ ಮುಚ್ಚುವಂತೆ ಆದೇಶ ಬಂದ ಬೆನ್ನಲ್ಲೇ ಇದನ್ನು ಪ್ರಶ್ನಿಸಿ ಯತ್ನಾಳ್ ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿಗಳಾದ ಎನ್.ವಿ. ಅಂಜಾರಿಯಾ ಹಾಗೂ ಕೃಷ್ಣ.ಎಸ್. ದೀಕ್ಷಿತ್ ಅವರ ವಿಭಾಗೀಯ ಪೀಠವು ವಿಚಾರಣೆ ನಡೆಸಿತು. ಅಲ್ಲದೇ, ಮೊದಲು ಎಥೆನಾಲ್ ಘಟಕ ಆರಂಭ ಮಾಡುವುದಕ್ಕೆ ಅನುಮತಿ ನೀಡಲಾಗಿದ್ದು, ಈಗ ಏಕಾಏಕಿ ಮುಚ್ಚಲು ಆದೇಶ ನೀಡಿದ ಬಗ್ಗೆ ಕಾರಣ ಕೊಡಬೇಕು. ನಿಮ್ಮ ತೀರ್ಮಾನದ ಹಿಂದಿನ ಕಾರಣ ಜನರಿಗೆ ತಿಳಿಯಬೇಕು ಎಂದು ಪೀಠ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಘಟಕ ಮುಚ್ಚುವುದಕ್ಕೆ ಕಾರಣ ಏನು ಎಂಬುದನ್ನು ಮಾಲಿನ್ಯ ನಿಯಂತ್ರಣ ಮಂಡಳಿಗೆ ಪೀಠ ಪ್ರಶ್ನಿಸಿತು. ಆಗ ಕೆಎಸ್‌ಪಿಸಿಬಿ ಅಧಿಕಾರಿಗಳು ಸಿದ್ಧಸಿರಿ ಎಥೆನಾಲ್ ಘಟಕಕ್ಕೆ ಪರಿಸರ ಅನುಮೋದನೆ ಹಿಂಪಡೆದಿರುವುದರಿಂದ, ಮುಚ್ಚುವಂತೆ ಆದೇಶ ನೀಡಲಾಗಿದೆ. ಈ ಘಟಕವನ್ನು ನಡೆಸಲು ಪರಿಸರ ಇಲಾಖೆ ಅನುಮತಿ ನೀಡಿಲ್ಲ ಎಂದು ಹೈಕೋರ್ಟ್‌ಗೆ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಯಿಸಿದ ನ್ಯಾಯಪೀಠ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸಿದ್ಧಸಿರಿ ಘಟಕವನ್ನು ಮುಚ್ಚಿಸಲು ತೆಗೆದುಕೊಂಡ ತೀರ್ಮಾನಕ್ಕೆ ಕಾರಣ ಒದಗಿಸಬೇಕು. ಸಂವಿಧಾನಿಕ ಸಂಸ್ಥೆ ಅನುಮತಿ ನೀಡದಿರುವುದಕ್ಕೆ ಕಾರಣ ನೀಡಬೇಕು. ನಮ್ಮಲ್ಲಿರುವುದು ಜನಕಲ್ಯಾಣ ಆಡಳಿತ, ಮೊಘಲ್ ಸರ್ಕಾರವಲ್ಲ. ತೀರ್ಮಾನದ ಹಿಂದಿನ ಕಾರಣ ಜನರಿಗೆ ತಿಳಿಯಬೇಕು ಎಂದು ಹೇಳಿ ವಿಚಾರಣೆಯನ್ನು ಜೂ.4 ಕ್ಕೆ ನಿಗದಿಪಡಿಸಿ ಮುಂದೂಡಿದೆ.
ಇದನ್ನೂ ಓದಿ: ಜಯಲಲಿತಾ ಚಿನ್ನಾಭರಣಗಳ ಹಸ್ತಾಂತರಕ್ಕೆ ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್ - Jayalalitha Jewellery
ಪ್ರಕರಣದ ಹಿನ್ನೆಲೆ ಏನು? ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿರುವ ಸಿದ್ಧಸಿರಿ ಎಥೆನಾಲ್ ಮತ್ತು ಪವರ್ ಘಟಕ ಮುಚ್ಚುವಂತೆ ಕಲಬುರಗಿ ವಲಯದ ಹಿರಿಯ ಪರಿಸರ ಅಧಿಕಾರಿ ಜನವರಿ 18ರಂದು ನೋಟಿಸ್ ಜಾರಿ ಮಾಡಿದ್ದರು. ಆ ನಂತರ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ(ಕೆಎಸ್ಪಿಸಿಬಿ) ಜನವರಿ 25ರಂದು ಆದೇಶ ಮಾಡಿತ್ತು. ಈ ಎರಡೂ ಆದೇಶವನ್ನು ರದ್ದುಮಾಡಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಮೊದಲು ಹೈಕೋರ್ಟ್ನಲ್ಲಿ ವಿಚಾರಣೆ ವೇಳೆ ಅರ್ಜಿದಾರರ ವಕೀಲರು, ಘಟಕವನ್ನು ರಾಜಕೀಯ ಉದ್ದೇಶದಿಂದ ಸ್ಥಗಿತಗೊಳಿಸಲು ಒತ್ತಾಯಿಸಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಕಾರ್ಖಾನೆಯನ್ನು ನಿಯಮದ ಪ್ರಕಾರವಾಗಿ ನಡೆಸಲಾಗುತ್ತಿಲ್ಲ. ಹೀಗಾಗಿ, ಕ್ರಮ ಕೈಗೊಳ್ಳಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ವಿವರಿಸಿದ್ದರು.
ಇದನ್ನೂ ಓದಿ: ಹೈಕೋರ್ಟ್ ಜಡ್ಜ್ ಮುಂದೆ ಕತ್ತಿಗೆ ಗಾಯ ಮಾಡಿಕೊಂಡ ವ್ಯಕ್ತಿಯ ವಿರುದ್ಧ ಕೇಸ್ ದಾಖಲು - KARNATAKA HIGH COURT