ಬೆಂಗಳೂರು: ವಿದ್ಯಾಭ್ಯಾಸ ಮುಂದುವರಿಸಲು ಆರ್ಥಿಕ ನೆರವು ಕೋರಿ ಇಬ್ಬರು ಕಟ್ಟಡ ಕಾರ್ಮಿಕರ ಮಕ್ಕಳು ಸಲ್ಲಿಸಿದ್ದ ಅರ್ಜಿಯನ್ನು ಹತ್ತು ತಿಂಗಳಾದರೂ ಪರಿಗಣಿಸದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಆ ಇಬ್ಬರು ವಿದ್ಯಾರ್ಥಿಗಳಿಗೆ ಕೂಡಲೇ ಆರ್ಥಿಕ ನೆರವು ನೀಡುವಂತೆ ಆದೇಶಿಸಿದೆ.
ಶೈಕ್ಷಣಿಕ ಧನಸಹಾಯ ನೀಡಲು ನಿರ್ದೇಶನ ನೀಡುವಂತೆ ಕೋರಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಫೆಡರೇಶನ್ ಹಾಗೂ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿತು.
ಸರ್ಕಾರ ಹೊಸ ಅಧಿಸೂಚನೆ ಹೊರಡಿಸುವ ಮುನ್ನ ಅರ್ಜಿದಾರರಾದ ಇಬ್ಬರು ವಿದ್ಯಾರ್ಥಿನಿಯರು ಮಂಡಳಿ ಹಿಂದೆ ನೀಡುತ್ತಿದ್ದ 30,000 ಹಾಗೂ 35.000 ರೂ ಶೈಕ್ಷಣಿಕ ಧನಸಹಾಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಹತ್ತು ತಿಂಗಳಾದರೂ ಕಲ್ಯಾಣ ಮಂಡಳಿ ಈ ಅರ್ಜಿಗಳನ್ನು ಇತ್ಯರ್ಥ ಪಡಿಸದಿರುವುದು ಸರಿಯಲ್ಲ. ಆ ವಿದ್ಯಾರ್ಥಿನಿಯರ ಅರ್ಜಿ ಶೈತ್ಯಾಗಾರದಲ್ಲಿಟ್ಟಿರುವ ಕ್ರಮ ಖಂಡನೀಯ ಎಂದು ಪೀಠ ಹೇಳಿದೆ.
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕ್ರಮವಾಗಿ ಎಲ್‌ಎಲ್‌ಬಿ ಹಾಗೂ ಎಂಬಿಎ ಓದುತ್ತಿರುವ ವಿದ್ಯಾರ್ಥಿನಿಯರಿಗೆ 30 ಸಾವಿರ ಹಾಗೂ 35 ಸಾವಿರ ರೂ. ಶೈಕ್ಷಣಿಕ ಧನಸಹಾಯವನ್ನು ದಂಡಸಹಿತ ಪಾವತಿಸುವಂತೆ ಆದೇಶಿಸಲಾಗಿದೆ. ಒಂದು ವೇಳೆ ಕಲ್ಯಾಣ ಮಂಡಳಿಯು ದಂಡಸಹಿತ ಹಣವನ್ನು ವಿದ್ಯಾರ್ಥಿಗಳ ಖಾತೆಗೆ ನಿಗದಿತ ಅವಧಿಯೊಳಗೆ ಪಾವತಿಸಲು ವಿಫಲವಾದರೆ ಬಳಿಕ ಪ್ರತಿ ದಿನಕ್ಕೆ 500 ರೂ. ಪ್ರತಿ ವಿದ್ಯಾರ್ಥಿನಿಯರಿಗೆ ದಂಡದ ರೂಪದಲ್ಲಿ ಪಾವತಿಸಬೇಕಾಗುತ್ತದೆ ಎಂದು ಪೀಠ ಎಚ್ಚರಿಸಿದೆ.
ಸರ್ಕಾರಿ ನೌಕರರಿಗೆ ಸಿಗುವ ಯಾವೊಂದು ಭತ್ಯೆಗಳೂ ಇಲ್ಲದೆ ಬಿಸಿಲಿನಲ್ಲಿ ಬೆವರು ಸುರಿಸುವ ಬಡ ಕಾರ್ಮಿಕರ ಕುರಿತಾಗಿ ಅವರದ್ದೇ ಶ್ರಮದಿಂದ ಸಂಗ್ರಹವಾಗಿರುವ 8,200 ಕೋಟಿ ಕಲ್ಯಾಣ ನಿಗಮ ಇರುವಾಗಲೂ ಅವರ ಮಕ್ಕಳಿಗೆ ನ್ಯಾಯಬದ್ಧವಾಗಿ ದೊರಕಬೇಕಾದ ಶೈಕ್ಷಣಿಕ ಧನಸಹಾಯ ನಿರಾಕರಿಸುವುದು ಒಪ್ಪುವಂಥದಲ್ಲ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.
ಅಲ್ಲದೆ, ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ದಂಡಸಹಿತ ಪಾವತಿಸಬೇಕು. ಇಬ್ಬರು ವಿದ್ಯಾರ್ಥಿನಿಯರಿಗೆ ಅವರು ತುಂಬಿರುವ ಕಾಲೇಜು ಶುಲ್ಕವನ್ನು ನಾಲ್ಕು ವಾರದೊಳಗೆ ಅವರ ಖಾತೆಗೆ ಪಾವತಿಸಬೇಕು ಎಂದು ಮಧ್ಯಂತರ ಆದೇಶ ನೀಡಿರುವ ನ್ಯಾಯಾಲಯ ವಿಚಾರಣೆಯನ್ನು ಜೂ. 7ಕ್ಕೆ ಮುಂದೂಡಿದೆ.
ಅರ್ಜಿದಾರರ ಪರ ವಕೀಲರು, ಈ ಹಿಂದಿನ ನ್ಯಾಯಾಲಯದ ಆದೇಶದಂತೆ ಕಲ್ಯಾಣ ಮಂಡಳಿಯೂ ಯಾವುದೇ ಕ್ರಮ ವಹಿಸಿಲ್ಲ. ವಿದ್ಯಾರ್ಥಿಗಳ ಖಾತೆಗೆ ಹಣ ಪಾವತಿಸಲಿಲ್ಲ ಎಂದು ಮಕ್ಕಳ ಪೊಷಕರ ಬ್ಯಾಂಕ್ ಖಾತೆ ವಿವರ ಸಹಿತ ದಾಖಲೆಗಳನ್ನು ಪೀಠದ ಮುಂದಿಟ್ಟರು.
ಕಲ್ಯಾಣ ಮಂಡಳಿ ಪರ ವಾದ ಮಂಡಿಸಿದ ವಕೀಲರು ಹಿಂದಿನ ತೀರ್ಮಾನದಂತೆ ಕೇವಲ 10 ಸಾವಿರ ರೂ. ಹಾಗೂ 11 ಸಾವಿರ ರೂ. ಮಾತ್ರವೇ ಆರ್ಥಿಕ ನೆರವು ನೀಡಲು ಸಾಧ್ಯ ಎಂದರು.
ಇದನ್ನೂ ಓದಿ: ಅಂಗವೈಕಲ್ಯವಿರುವ ಪತಿ ತನ್ನ ಪತ್ನಿಗೆ ಜೀವನಾಂಶ ಕೊಡಬೇಕಿಲ್ಲ: ಹೈಕೋರ್ಟ್ - High Court