ಬೆಂಗಳೂರು: ಅತ್ಯಾಚಾರವೆಸಗಿದ ಆರೋಪದಲ್ಲಿ ಹಾಸನದ ಮಾಜಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳ ಕುರಿತು ಆಕ್ಷೇಪಣೆ ಸಲ್ಲಿಸಲು ಸರ್ಕಾರ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಹೈಕೋರ್ಟ್ ವಿಚಾರಣೆ ಮುಂದೂಡಿತು.
ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿರುವ ಮತ್ತು ಬೆಂಗಳೂರು ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠಕ್ಕೆ ಸರ್ಕಾರ ಕಾಲಾವಕಾಶ ಕೋರಿತು.
ವಿಚಾರಣೆ ವೇಖೆ ವಿಶೇಷ ತನಿಖಾ ದಳದ (ಎಸ್ಐಟಿ) ವಿಶೇಷ ಸರ್ಕಾರಿ ಅಭಿಯೋಜಕರಾದ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್, ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಎಫ್ಐಆರ್ ರದ್ದು ಅರ್ಜಿ ವಿಚಾರಣೆ ಮುಂದೂಡಿಕೆ: ಅತ್ಯಾಚಾರ ಸಂತ್ರಸ್ತೆಯನ್ನು ಅಪಹರಣ ಮಾಡಿಸಿದ ಆರೋಪ ಸಂಬಂಧ ಮೈಸೂರು ಜಿಲ್ಲೆಯ ಕೆ.ಆರ್.ನಗರ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಇದೇ ವೇಳೆ ಹೈಕೋರ್ಟ್ ಮುಂದೂಡಿತು.
ಅರ್ಜಿದಾರರ ಪರವಾಗಿ ಹಾಜರಾಗಿದ್ದ ವಕೀಲ ಜಿ.ಅರುಣ್, ಎಸ್ಐಟಿಯು ಸಂಬಂಧಿತ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. ನಮಗೆ ಇನ್ನೂ ಸರ್ಟಿಫೈಡ್ ಆರೋಪ ಪಟ್ಟಿ ಸಿಕ್ಕಿಲ್ಲ. ಹೀಗಾಗಿ, ವಿಚಾರಣೆ ಮುಂದೂಡಬೇಕು ಎಂದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ನ್ಯಾಯಪೀಠ, ವಿಚಾರಣೆಯನ್ನು ಆಗಸ್ಟ್ 29ಕ್ಕೆ ಮುಂದೂಡಿತು.
ರೇವಣ್ಣ ರಿಪಬ್ಲಿಕ್- ಪ್ರೊ.ಕುಮಾರ್ ಸಮರ್ಥನೆ: ಕಳೆದ ವಿಚಾರಣೆ ವೇಳೆಯಲ್ಲಿ ಹಾಸನ ಜಿಲ್ಲೆ ಕುರಿತಂತೆ ರೇವಣ್ಣ ರಿಪಬ್ಲಿಕ್ ಎಂದು ತಿಳಿಸಿದ್ದ ವಿಚಾರಣೆ ಸಂಬಂಧ ಸ್ಪಷ್ಟನೆ ನೀಡಿದ ಪ್ರೊ.ಕುಮಾರ್, ಮನೆ ಕೆಲಸ ಮಾಡಿಕೊಂಡಿದ್ದ ಸಂತ್ರಸ್ತೆಗೆ ಅಪ್ಪ ಮಕ್ಕಳು (ರೇವಣ್ಣ-ಪ್ರಜ್ವಲ್) ಏನು ಮಾಡುತ್ತಿದ್ದರು ಎಂಬುದನ್ನು ಸಂತ್ರಸ್ತೆ ವಿವರಿಸಿದ್ದಾರೆ. ನನ್ನ ಮೇಲೆ ಅನೇಕ ಬಾರಿ ಲೈಂಗಿಕ ಕಿರುಕುಳ ದಾಳಿ ನಡೆದಿತ್ತು. ಹೀಗಾಗಿ, ನಾನು ಹೆದರಿ ಓಡುತ್ತಿದ್ದೆ. ಇದನ್ನು ಬೇರೆ ಯಾರಿಗಾದರೂ ಹೇಳಿಕೊಳ್ಳೋಣ ಎಂದರೆ ನನ್ನ ಮೇಲೆ ಕಳಂಕ ಮತ್ತು ಕಳ್ಳತನದ ಆರೋಪ ಮಾಡುತ್ತಾರೆ ಎಂದು ಅಲ್ಲಿ ಕೆಲಸ ಮಾಡುತ್ತಿದ್ದವರು ಬೆದರಿಕೆ ಹಾಕುತ್ತಿದ್ದರು. ಹೀಗಾಗಿ, ಕೆಲಸ ಬಿಟ್ಟಿದ್ದೆ ಎಂದು ತಿಳಿಸಿರುವುದಾಗಿ ವಾದದಲ್ಲಿ ವಿವರಿಸಿದರು.
ಅಲ್ಲದೆ, ಸಂತ್ರಸ್ತೆಗೆ ಆಶ್ರಯ ಯೋಜನೆ ಅಡಿಯಲ್ಲಿ ಮಂಜೂರಾಗಿದ್ದ ಮನೆಯನ್ನು ಕಸಿದು, ಹೊರಗೆ ಹಾಕಿಸಿ ಕಿರುಕುಳ ಕೊಟ್ಟಿದ್ದಾರೆ. ಆ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಹಾಗೂ ಒಡವೆಗಳನ್ನೂ ಸಂತ್ರಸ್ತೆಗೆ ಕೊಟ್ಟಿರುವುದಿಲ್ಲ. ಸಂತ್ರಸ್ತೆಯನ್ನು ಮನೆಯಿಂದ ಹೊರಗೆ ಹಾಕಿದ್ದಕ್ಕೆ ಹೊಳೆನರಸೀಪುರ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ದೂರು ಸ್ವೀಕರಿಸರಿಲಿಲ್ಲ. ಆನಂತರ ಹಾಸನ ಜಿಲ್ಲಾಧಿಕಾರಿಗೂ ಮಹಿಳೆ ದೂರು ನೀಡಿದ್ದರು. ಇದೇ ಕಾರಣಕ್ಕಾಗಿ ನಾನು ರೇವಣ್ಣ ರಿಪಬ್ಲಿಕ್ ಎಂದು ಹೇಳಿದ್ದೆ ಎಂದು ಅವರು ಪೀಠಕ್ಕೆ ತಿಳಿಸಿದರು.
ಇದನ್ನೂ ಓದಿ: ಮದುವೆಯಾದ ದಿನವೇ ಗಲಾಟೆ, ಹೊಡೆದಾಟ: ನಿನ್ನೆ ಪತ್ನಿ ಇಂದು ಪತಿ ಸಾವು - Newly Married Couple Dies