ಬೆಂಗಳೂರು/ನವದೆಹಲಿ: "ಯತ್ನಾಳ್ ವಿಚಾರ ಹೈಕಮಾಂಡ್ ಅಂಗಳದಲ್ಲಿದೆ. ಇದು ಸುಖ್ಯಾಂತವಾಗಲಿದೆ. ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ. ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರು ಪಾಲಿಸುವುದು ನನ್ನ ಕೆಲಸ" ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.
ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿಯಾಗಿ ಮಾತನಾಡಿದ ಅವರು, "ರಾಜ್ಯದಲ್ಲಿ ಮುಡಾ ಪ್ರಕರಣ ಪ್ರಚಲಿತದಲ್ಲಿದೆ. ಮುಡಾ ಮುಚ್ಚಿ ಹಾಕಲು ಸಮಾವೇಶ ಮಾಡುತ್ತಿದ್ದಾರೆ. ಸ್ವಾಭಿಮಾನ ಸಮಾವೇಶ ಹೋಗಿ ಡಿ.ಕೆ. ಶಿವಕುಮಾರ್ ಸಮಾವೇಶ ಆಗಿದೆ. ಅಗ್ರಿಮೆಂಟ್ ಬಗ್ಗೆಯೂ ಚರ್ಚೆ ಆಗುತ್ತಿದೆ. ದೇವೇಗೌಡರಿಗೆ ಟಾಂಗ್ ಕೊಡಲು ಹೋಗಿ ಅವರಿಬ್ಬರು ಪರಸ್ಪರ ಟಾಂಗ್ ಕೊಡ್ತಿದ್ದಾರೆ. ಇದು ಕೌಂಟರ್ಗಳ ಸಮಾವೇಶ ಆಗುತ್ತಿದೆ" ಎಂದು ಲೇವಡಿ ಮಾಡಿದರು.
"ಮುಡಾದಲ್ಲಿ ಸುಮಾರು 700 ಕೋಟಿ ರೂ.ಗಳ ಹಗರಣ ಆಗಿದೆ. ನನ್ನ ಪ್ರಕಾರ ಇದು ನಾಲ್ಕು ಸಾವಿರ ಕೋಟಿ ರೂ. ಹಗರಣ ಆಗಲಿದೆ. ನಾನು ಮುಡಾ 50:50 ಅನುಪಾತದ ನಿವೇಶನಗಳ ಹಂಚಿಕೆ ಸಂಬಂಧ ದಾಖಲೆ ಮಾಹಿತಿ ಕೋರಿದ್ದೇನೆ. ಇನ್ನು ಕೊಟ್ಟಿಲ್ಲ. 15 ದಿನ ಆಗಿದೆ ಆದರೂ ಮಾಹಿತಿ ಕೊಟ್ಟಿಲ್ಲ. ಹದಿನೇಳು ತಿಂಗಳ ಆಡಳಿತ ಕಾಂಗ್ರೆಸ್ ಸರ್ಕಾರದ ಹದಿನೇಳು ಅವತಾರ. ಹದಿನೆಂಟನೇ ತಿಂಗಳಿಗೆ ಹೊಸ ಅವತಾರ ಬರಲಿದೆ" ಎಂದರು.
"ದಾಖಲೆಗಳು ಒಂದು ಸಂಸ್ಥೆಯಿಂದ ಮತ್ತೊಂದು ಸಂಸ್ಥೆಗೆ ಹಂಚಿಕೊಳ್ಳುವುದು ಪರಸ್ಪರ ಪ್ರಕ್ರಿಯೆ. ಲೋಕಾಯುಕ್ತ ಸಂಸ್ಥೆಗೆ ಇ.ಡಿ. ತನಿಖಾ ವರದಿಯನ್ನು ಹಂಚಿಕೊಂಡಿದ್ದಾರೆ. ಅದು ಸಾಮಾನ್ಯ ಪ್ರಕ್ರಿಯೆ. ಕಾಂಗ್ರೆಸ್ ಸರ್ಕಾರ ಕೋವಿಡ್ ಮೇಲಿನ ಡಿಕುನ್ಹಾ ಆಯೋಗ ವರದಿಯನ್ನು ಸರಣಿ ರೂಪದಲ್ಲಿ ಸೋರಿಕೆ ಮಾಡಿದರಲ್ಲಾ? ಅದು ರಾಜಕೀಯ ಪ್ರೇರಿತ ಅಲ್ವಾ?" ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಶಾಂತವಾದರಾ ಯತ್ನಾಳ್?: ಶಿಸ್ತು ಸಮಿತಿ ಮುಂದೆ ಹಾಜರಾದ ಬೆನ್ನಲ್ಲೇ ಬಿಎಸ್ವೈ ಹೇಳಿಕೆಗೆ ಸ್ವಾಗತ!