ಬೆಳಗಾವಿ: ಈ ಬಾರಿಯ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ವಿಳಾಸವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೇಳುತ್ತಿದ್ದಾರೆ. ಆದರೆ ಚುನಾವಣೆ ಬಳಿಕ ಶೆಟ್ಟರ್ ಕೇಂದ್ರ ಸಚಿವರಾದಾಗ ಅವರ ಅಡ್ರೆಸ್ ಹುಡುಕುವ ಪರಿಸ್ಥಿತಿ ಬರಲಿದೆ ಎನ್ನುವ ಮೂಲಕ ಶಾಸಕ ಬಾಲಚಂದ್ರ ಜಾರಕಿಹೊಳಿ ತಿರುಗೇಟು ಕೊಟ್ಟಿದ್ದಾರೆ.
ಬೆಳಗಾವಿಯಲ್ಲಿ ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ರಾಜ್ಯದ ಮಾಜಿ ಮುಖ್ಯಮಂತ್ರಿ. ಅವರ ಬಗ್ಗೆ ಹಗುರವಾಗಿ ಮಾತಾಡುವುದು ಸರಿಯಲ್ಲ. ಈಗ ಅಡ್ರೆಸ್ ಕೇಳುತ್ತಿರುವ ಹೆಬ್ಬಾಳ್ಕರ್ ಅವರೇ ಮುಂದೆ ಶೆಟ್ಟರ್ ಅವರ ಅಡ್ರೆಸ್ ಹುಡುಕಿಕೊಂಡು ಹೋಗುವ ಪ್ರಸಂಗ ಬರಲಿದೆ ಎಂದು ಕುಟುಕಿದರು.
ಚುನಾವಣೆ ಪ್ರಚಾರದ ಸಂದರ್ಭದಲ್ಲಿ ರಾಜಕೀಯವಾಗಿ ಮಾತನಾಡಲಿ. ಆದರೆ, ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ. ಗೋಕಾಕ್, ಅರಭಾವಿಯಲ್ಲಿ ಈಗಾಗಲೇ ಶೆಟ್ಟರ್ ಅವರು ಪ್ರಚಾರ ನಡೆಸಿದ್ದು, ಅವರಿಗೆ ಈಗಾಗಲೇ ಬೆಂಬಲ ಸಿಕ್ಕಿದೆ. ರಾಮದುರ್ಗ, ಸವದತ್ತಿಯಲ್ಲೂ ಬಿಜೆಪಿಗೆ ಬೆಂಬಲ ವ್ಯಕ್ತವಾಗಿದೆ. ಶೆಟ್ಟರ್ ಪರವಾಗಿ ಗೋಕಾಕ್ ಹಾಗೂ ಅರಭಾವಿಯಲ್ಲಿ ಏ.7ರಂದು ಬಿಜೆಪಿ ಬೃಹತ್ ಸಮಾವೇಶ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಇದೇ ವೇಳೆ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಪಕ್ಷ ಸೂಚಿಸಿದರೆ ಚಿಕ್ಕೋಡಿಗೂ ಹೋಗಿ ನಾನು ಮತ್ತು ಸಹೋದರ ರಮೇಶ್ ಜಾರಕಿಹೊಳಿ ಪ್ರಚಾರ ನಡೆಸುತ್ತೇವೆ. ಆದರೆ, ನಮ್ಮ ಕ್ಷೇತ್ರಗಳು ಬೆಳಗಾವಿ ಕ್ಷೇತ್ರದ ವ್ಯಾಪ್ತಿಗೆ ಬರುವುದರಿಂದ ಈ ಕ್ಷೇತ್ರದಲ್ಲಿಯೇ ಹೆಚ್ಚು ಪ್ರಚಾರ ಕಾರ್ಯ ನಡೆಸಲಿದ್ದೇವೆ ಎಂದು ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಪಂಚಮಸಾಲಿ ಸಮುದಾಯದ ಮತ: ಪಂಚಮಸಾಲಿ ಸಮುದಾಯದ ಮತ ಬೇಟೆಗೆ ಕಾಂಗ್ರೆಸ್ ಮುಂದಾಗಿರುವುದು ಸಹಜ. ಆದರೆ, ಮತದಾರರ ಒಲವು ಯಾರ ಕಡೆ ಇದೆ ಎಂಬುದು ಗೊತ್ತಾಗುವುದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಜಾತಿ ಮತ್ತು ಬೇರೆ ಬೇರೆ ವಿಚಾರ ನಡೆದಿದೆ. ಆದರೆ, ಇದು ದೇಶದ ಚುನಾವಣೆ. ಮೋದಿಯವರ ಅಲೆಯಿರುವ ಚುನಾವಣೆ. ಹೀಗಾಗಿ, ಬಿಜೆಪಿ ಪರ ಹೆಚ್ಚಿನ ಒಲವು ಇದೆ. ಈ ಚುನಾವಣೆಯಲ್ಲಿ ಜಾತಿ ನಡೆಯೋದಿಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಹೊರಗಿನವರು ಎಂಬುದು ಅಪ್ರಸ್ತುತ ವಿಚಾರ. ನಮ್ಮ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಸದಸ್ಯ ಗೆದ್ದು ಆಡಳಿತ ಪಕ್ಷದಲ್ಲಿ ಕುಳಿತರೆ ಒಳ್ಳೆಯದು. ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬಾರದೆಂದು ನಾನು ಕ್ಷೇತ್ರದ ಮತದಾರರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.