ಮೈಸೂರು : ಕೇರಳದ ವಯನಾಡಿನಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಕಬಿನಿ ಜಲಾಶಯಕ್ಕೆ 54 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದ ಜಲಾಶಯದಿಂದ ಕಪಿಲಾ ನದಿಗೆ 80 ಸಾವಿರಕ್ಕೂ ಹೆಚ್ಚಿನ ಕ್ಯೂಸೆಕ್ ನೀರನ್ನ ಕಪಿಲಾ ನದಿಗೆ ಬಿಡಲಾಗಿದೆ. ಪರಿಣಾಮ ಕಪಿಲಾ ನದಿ ಉಕ್ಕಿ ಹರಿಯುತ್ತಿದ್ದು, ಇದರಿಂದ ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಜಲದಿಗ್ಬಂಧನ ಉಂಟಾಗಿದೆ.
![Heavy rains Kabini and KRS dam Flood Situation Mysuru](https://etvbharatimages.akamaized.net/etvbharat/prod-images/31-07-2024/ka-mys-01-31-07-2024-wayanadu-rain-effect-7208092_31072024124034_3107f_1722409834_270.jpg)
ಕಪಿಲೆಯ ಅಬ್ಬರಕ್ಕೆ ನಂಜನಗೂಡಿನ ಮಲ್ಲನ ಮೂಲೆಮಠ, ಬಸವೇಶ್ವರ ಲಿಂಗದ ಗುಡಿ, ಕಾಶಿ ವಿಶ್ವನಾಥ ದೇವಾಲಯ, ಚಾಮುಂಡೇಶ್ವರಿ ದೇವಾಲಯ, ಅಯ್ಯಪ್ಪ ಸ್ವಾಮಿ ದೇವಾಲಯ, ದತ್ತಾತ್ರೇಯ ದೇವಾಲಯ ಹಾಗೂ ಪರುಶುರಾಮ ದೇವಾಲಯಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಅಷ್ಟೇ ಅಲ್ಲ, ಐತಿಹಾಸಿಕ 16 ಕಾಲು ಮಂಟಪ ಮತ್ತು ಹಳೆಯ ವೆಲ್ಲೆಸ್ಲಿ ಸೇತುವೆಗಳು ಮುಳುಗಡೆಯಾಗಿದ್ದು, ತಗ್ಗು ಪ್ರದೇಶದ ಜಮೀನುಗಳಿಗೆ ಹಾಗೂ ಸ್ಮಶಾನಕ್ಕೆ ಕಪಿಲಾ ನದಿ ಪ್ರವಾಹದ ನೀರು ನುಗ್ಗಿದೆ. ಇನ್ನೊಂದು ಕಡೆ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಹತ್ತಿರಕ್ಕೂ ನೀರು ನುಗ್ಗಿದ್ದು, ದೇವಾಲಯದ ಬಳಿಯ ಮುಡಿಕಟ್ಟೆ, ಸೋಪಾನದ ಕಟ್ಟೆ, ದಾಸೋಹ ಭವನ, ಪಾರ್ಕಿಂಗ್ ಸ್ಥಳ ಹಾಗೂ ಹಳ್ಳದ ಕೇರಿಗೂ ನೀರು ಬಂದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಂದು ನಂಜನಗೂಡಿನ ತಾಲೂಕು ಆಡಳಿತ ಎಲ್ಲಾ ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಿದೆ.
![Heavy rains Kabini and KRS dam Flood Situation Mysuru](https://etvbharatimages.akamaized.net/etvbharat/prod-images/31-07-2024/ka-mys-01-31-07-2024-wayanadu-rain-effect-7208092_31072024124034_3107f_1722409834_297.jpg)
ಗಂಜಿ ಕೇಂದ್ರಕ್ಕೆ ಸಂತ್ರಸ್ತರು ಸ್ಥಳಾಂತರ: ಕಬಿನಿ ಜಲಾಶಯದಿಂದ ಹೆಚ್ಚಿನ ನೀರನ್ನ ಕಪಿಲಾ ನದಿಗೆ ಬಿಡುತ್ತಿರುವ ಹಿನ್ನೆಲೆ ನಂಜನಗೂಡು ಬಳಿಯ ವರುಣಾ ಕ್ಷೇತ್ರದ ಬೊಕ್ಕ ಹಳ್ಳಿ ಗ್ರಾಮಕ್ಕೆ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಗ್ರಾಮದ ಜನರನ್ನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದರು. ಟಿ. ನರಸೀಪುರ ತಾಲ್ಲೂಕಿನ ತಲಕಾಡು ಹೋಬಳಿಯ ತಡಿ ಮಲಂಗಿ ಗ್ರಾಮದ ಜನರನ್ನ ಜಿಲ್ಲಾಡಳಿತ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದು, ಕಾಳಜಿ ಕೇಂದ್ರದಲ್ಲಿ ಜನರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಕಪಿಲಾ ನದಿಯಲ್ಲಿ ನೀರು ಕಡಿಮೆಯಾದ ತಕ್ಷಣ ಪುನಃ ಜನರನ್ನ ವಾಪಾಸ್ ಮನೆಗಳಿಗೆ ಕಳಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿ ಜಿ.ಲಕ್ಮ್ಮೀಕಾಂತ್ ರೆಡ್ಡಿ ಮಾಹಿತಿ ನೀಡಿದರು.
![Heavy rains Kabini and KRS dam Flood Situation Mysuru](https://etvbharatimages.akamaized.net/etvbharat/prod-images/31-07-2024/ka-mys-01-31-07-2024-wayanadu-rain-effect-7208092_31072024124034_3107f_1722409834_667.jpg)
ಕೊಡಗಿನಲ್ಲಿ ರೆಡ್ ಅಲರ್ಟ್: ಕೊಡಗಿನಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಪ್ರಮಾಣದ ನೀರು ಕೆಆರ್ಎಸ್ಗೆ ಹರಿದು ಬರುತ್ತಿದೆ. ಕೆಆರ್ಎಸ್ನಿಂದ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನ ಕಾವೇರಿ ನದಿಗೆ ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮಂಡ್ಯ ಹಾಗೂ ಮೈಸೂರು ಜಿಲ್ಲಾಡಳಿತ ಎಲ್ಲಾ ರೀತಿಯಾ ವ್ಯವಸ್ಥೆ ಮಾಡಿಕೊಂಡಿದೆ. ಅಗ್ನಿಶಾಮಕ ದಳ, ಅರಣ್ಯ ಇಲಾಖೆ ತಂಡಗಳು ನದಿ ಪಾತ್ರದಲ್ಲಿ ಗಸ್ತು ತಿರುಗುತ್ತಿವೆ. ಭಾರೀ ಮಳೆಗೆ ಜನಜೀವನ ಅಸ್ತವಸ್ಯವಾಗಿದ್ದು, ಕೊಡಗಿನ ಭಾಗಮಂಡಲ ಸಂಪೂರ್ಣ ಜಲಾವೃತವಾಗಿದೆ. ಕೊಡಗಿನಲ್ಲಿ ಎರಡು ದಿನ ರೆಡ್ ಆಲರ್ಟ್ ಘೋಷಿಸಿದ್ದು, ಮುಂಜಾಗ್ರತ ಕ್ರಮವಾಗಿ ಎರಡು ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ.
ಕಾವೇರಿ ನೀರಾವರಿ ನಿಗಮ ಪ್ರಕರಣೆ: ವಯನಾಡು ಹಾಗೂ ಕೊಡಗಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕಬಿನಿ ಜಲಾಶಯದಿಂದ 80 ಸಾವಿರಕ್ಕೂ ಹೆಚ್ಚು ಹಾಗೂ ಕೊಡಗಿನಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್ ಜಲಾಶಯಕ್ಕೆ ಒಂದು ಲಕ್ಷಕ್ಕೂ ಹೆಚ್ಚಿನ ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ಕಬಿನಿ ಹಾಗೂ ಕಾವೇರಿ ನದಿಗೆ ಎರಡು ಲಕ್ಷಕ್ಕೂ ಹೆಚ್ಚಿನ ಕ್ಯೂಸೆಕ್ ನೀರನ್ನ ನದಿಗೆ ಬಿಡಲಾಗುತ್ತಿದೆ. ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಜನರು ಸುರಕ್ಷಿತವಾಗಿ ಇರಬೇಕು. ನದಿ ಪಾತ್ರದಲ್ಲಿ ಇರುವ ಜನ-ಜಾನವಾರು ಹಾಗೂ ತಮ್ಮ ಆಸ್ತಿ-ಪಾಸ್ತಿಗಳ ರಕ್ಷಣೆ ವಹಿಸಿಕೊಂಡು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ಸುರಕ್ಷಿತ ಸ್ಥಳಗಳಿಗೆ ತಲುಪಬೇಕು ಎಂದು ಕಾವೇರಿ ನೀರಾವರಿ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.