ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಧಾರಾಕಾರ ಮಳೆ ಸುರಿಯಲು ಪ್ರಾರಂಭ ಮಾಡಿದೆ. ತಾಲೂಕಿನ ಶಿರವಾಸೆ, ಮುತ್ತೋಡಿ, ಮಲ್ಲಂದೂರು ಸುತ್ತಮುತ್ತ ಭಾರಿ ಮಳೆ ಆಗುತ್ತಿದೆ. ಗುಡುಗು ಸಿಡಿಲು, ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಶಿರವಾಸೆ ಗ್ರಾ.ಪಂ ವ್ಯಾಪ್ತಿಯ ಹತ್ತಾರು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ನಿರಂತರ ಮಳೆಯ ಕಾರಣ ಜನಜೀವನ ಅಸ್ತವ್ಯಸ್ತವಾಗಿದ್ದು, ಕೂಲಿ ಕಾರ್ಮಿಕರು ಪರದಾಟ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳಸ ತಾಲೂಕಿನ ಹಲವು ಭಾಗಗಳಲ್ಲಿಯೂ ಮಳೆ ಸುರಿದಿದೆ. ನಿರಂತರ ಮಳೆಯಿಂದಾಗಿ ರೈತರು, ಕಾಫಿ ಬೆಳೆಗಾರರಲ್ಲಿ ಸಂತಸ ಮನೆ ಮಾಡಿದೆ.
ಈ ವರ್ಷ ಸರಿಯಾದ ಸಮಯಕ್ಕೆ ಮಳೆ ಬಾರದೆ ಮಲೆನಾಡು ಭಾಗದ ಜನ ಕಂಗಾಲಾಗಿದ್ದರು. ಮಳೆ ಬೇಕು ಎಂದು ಕಾಯುತ್ತಾ ಕುಳಿತ್ತಿದ್ದರು. ಹಲವಾರು ಭಾಗಗಳಲ್ಲಿ ತಾವು ಮಕ್ಕಳಂತೆ ಸಾಕಿದ ಬೆಳೆಗಳು ಹಾಳಾಗಿ ಹೋಗಿದ್ದವು. ಈಗ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೆಲ ಭಾಗದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಮಳೆ ನಿರಂತರವಾಗಿ ಹೀಗೆ ಸುರಿಯಲಿ ಎಂದು ಭಗವಂತನಲ್ಲಿ ಬೇಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಚುರುಕು; ಈ ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ - RAIN IN KARNATAKA