ಬೆಂಗಳೂರು : ರಾಜಧಾನಿಯ ಹಲವೆಡೆ ಗಾಳಿ, ಆಲಿಕಲ್ಲು ಸಹಿತ ಭಾರಿ ಮಳೆ ಸುರಿಯುತ್ತಿದೆ. ನಗರದ ಶಾಂತಿನಗರ, ರಿಚ್ಮಂಡ್ ಸರ್ಕಲ್, ಕೆ. ಆರ್ ಮಾರ್ಕೆಟ್, ಕಾರ್ಪೊರೇಷನ್, ರೇಸ್ ಕೋರ್ಸ್ ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಇಳಿ ಸಂಜೆಯಲ್ಲಿ ನಗರಕ್ಕೆ ಮಳೆರಾಯ ಎಂಟ್ರಿ ಕೊಟ್ಟ ಪರಿಣಾಮ ಆಫೀಸ್ಗಳಿಂದ ಮನೆಗೆ ಹೋಗುವವರಿಗೆ ಸಮಸ್ಯೆ ಉಂಟಾಯಿತು.
ವರುಣನ ಆರ್ಭಟದಿಂದ ಜನರು ತತ್ತರಿಸುವಂತಾಗಿದೆ. ಗಾಳಿಯ ಪ್ರಮಾಣವು ವಿಪರೀತವಾಗಿ ಹೆಚ್ಚಾಗಿದೆ. ಆದರೆ, ಬಿಸಿಲಿನಿಂದ ಬಸವಳಿದಿದ್ದ ರಾಜಧಾನಿ ಜನರಿಗೆ ಮಳೆರಾಯ ತಂಪೆರೆಯುತ್ತಿದ್ದಾನೆ. ಇದು ಅಲ್ಲಿನ ನಿವಾಸಿಗಳ ಸಂತಸಕ್ಕೂ ಕಾರಣವಾಗಿದೆ.
ಬಿ.ಇ.ಎಲ್ ಸರ್ಕಲ್, ಜಾಲಹಳ್ಳಿ ಭಾಗದಲ್ಲೂ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಬಸವನಗುಡಿ ಬಳಿ ರಸ್ತೆಯಲ್ಲಿ ಬಿರುಗಾಳಿಗೆ ತೆಂಗಿನ ಮರ ನೆಲಕ್ಕುರುಳಿದೆ. ರಾಮಕೃಷ್ಣ ಆಶ್ರಮದಿಂದ ಲಾಲ್ ಬಾಗ್ ಕಡೆ ತೆರಳುವ ರಸ್ತೆ ಬಂದ್ ಆಗಿದೆ.
ರಾಜಾಜಿನಗರ ಇ.ಎಸ್.ಐ ಆಸ್ಪತ್ರೆ ಬಳಿ ಬಸ್ ಮೇಲೆ ಮರದ ಕೊಂಬೆ ವಾಲಿಬಿದ್ದಿದೆ. ಅದೃಷ್ಟವಶಾತ್ ಸ್ವಲ್ಪದರಲ್ಲಿಯೇ ಅನಾಹುತ ತಪ್ಪಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ರಾಜಾಜಿನಗರ ಸಂಚಾರಿ ಪೊಲೀಸ್ ಅಧಿಕಾರಿಗಳು, ಬಿಬಿಎಂಪಿ ಸಿಬ್ಬಂದಿ ತೆರವು ಕಾರ್ಯ ನಡೆಸಿದ್ದಾರೆ. ನಂತರ ರಸ್ತೆ ಸಂಚಾರ ಸುಗಮವಾಗಿದೆ.
ಕಾರ್ಡ್ ರೋಡ್ ಆಸ್ಪತ್ರೆ ಬಳಿ ಮರದ ಕೊಂಬೆ ಮುರಿದು ಬಿದ್ದಿವೆ. ಸ್ಥಳಕ್ಕೆ ಪಾಲಿಕೆ ಆಡಳಿತ ಪಕ್ಷದ ಮಾಜಿ ನಾಯಕ ಎಂ.ಶಿವರಾಜು, ಸಂಚಾರಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಬಿಬಿಎಂಪಿ ಸಿಬ್ಬಂದಿಯ ಸಹಕಾರದಿಂದ ತೆರವು ಕಾರ್ಯಾಚರಣೆ ನಡೆಸಿ, ಸುಗಮ ವಾಹನ ಸಂಚಾರ ಅನುವು ಮಾಡಿಕೊಡಲಾಗಿದೆ.

ಗುಟ್ಟಳ್ಳಿಯಲ್ಲಿ ಅತಿ ಹೆಚ್ಚು ಮಳೆ: ಮುಖ್ಯವಾಗಿ ಪಾಲಿಕೆ ಪಶ್ಚಿಮ ವಿಭಾಗದ ರಾಜ್ಮಹಲ್ ಗುಟ್ಟಳ್ಳಿಯಲ್ಲಿ 39.5 ಮಿ.ಮೀ., ದಯಾನಂದ ನಗರದಲ್ಲಿ 32.5 ಮಿ.ಮೀ., ದಕ್ಷಿಣ ವಿಭಾಗದ ವಿದ್ಯಾಪೀಠದಲ್ಲಿ 30.5 ಮಿ.ಮೀ. ಮತ್ತು ಆರ್ ಆರ್ ನಗರದ ಕೊಟ್ಟಿಗೆಪಾಳ್ಯದಲ್ಲಿ 27.5 ಮಿ.ಮೀ. ಮಳೆ ಸುರಿದಿದೆ. ಬಾಣಸವಾಡಿಯಲ್ಲಿ 25 ಮಿ.ಮೀ., ಕಾಟನ್ ಪೇಟೆಯಲ್ಲಿ 22.5 ಮಿ.ಮೀ., ರಾಜಾಜಿನಗರದಲ್ಲಿ 22 ಮಿ.ಮೀ. ಹಾಗೂ ಗೊತ್ತಿಗೆರೆಯಲ್ಲಿ 20 ಮಿ.ಮೀ. ಮಳೆಯಾಗಿದೆ.
ನಾಳೆಯೂ ಮಳೆ ಮುನ್ಸೂಚನೆ: ಮುಂದಿನ 24 ಗಂಟೆಗಳಲ್ಲಿ ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಕೊಡಗು, ಮೈಸೂರು ಮತ್ತು ಮಂಡ್ಯದಲ್ಲಿ ಕೆಲವೆಡೆ ಭಾರೀ ಮಳೆ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ರಾಯಚೂರು, ಯಾದಗಿರಿ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ವಿಜಯನಗರ ಮತ್ತು ತುಮಕೂರು ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ : Rain Alert : ಈ ರಾಜ್ಯದ ಜನರಿಗೆ ಸಿಕ್ತು ಸಿಹಿ ಸುದ್ದಿ, ಮುಂದಿನ 6 ದಿನಗಳ ಕಾಲ ವರುಣನ ಆರ್ಭಟ - Rain Alert