ಚಿಕ್ಕಮಗಳೂರು : ಜಿಲ್ಲೆಯ ಮುತ್ತೋಡಿ ಅಭಯಾರಣ್ಯದ ಬಳಿ ಆಲಿಕಲ್ಲು ಮಳೆ ಆಗಿದೆ. ಮಲ್ಲಿಗೆ ಹೂವಿನಂತೆ ಸುರಿದ ಆಲಿಕಲ್ಲು ನೋಡಿ ಸ್ಥಳೀಯರು ಸಂಭ್ರಮಪಟ್ಟಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ವ್ಯಾಪ್ತಿಯಲ್ಲಿ ಮಳೆ ಸುರಿದಿದೆ. ಪ್ರವಾಸಿಗರ ಮೊಬೈಲ್ನಲ್ಲಿ ಆಲಿಕಲ್ಲು ಮಳೆ ಆರ್ಭಟ ಸೆರೆಯಾಗಿದೆ. ಮಳೆಗಿಂತಲೂ ಆಲಿಕಲ್ಲು ಹೆಚ್ಚು ಸುರಿದಿರುವುದರಿಂದ ಜನರು ಬೆಚ್ಚಿಬಿದ್ದಿದ್ದಾರೆ.
ತಾಲೂಕಿನ ಮುತ್ತೋಡಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಹೀಗಾಗಿ ಅರಣ್ಯ ಪ್ರದೇಶವು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಭಾರಿ ಗಾಳಿ ಮಳೆಗೆ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರ ಬಿದ್ದಿರುವಂತಹ ಘಟನೆ ವರದಿಯಾಗಿದೆ.
ಮೇಲ್ಪಾಲ್, ಕೊಪ್ಪ, ಬಾಳೆಹೊನ್ನೂರು ರಸ್ತೆ ಸಂಪರ್ಕ ಕಡಿತವಾಗಿದೆ. ಈ ಘಟನೆಯಿಂದ ಪ್ರಯಾಣಿಕರು, ಸ್ಥಳೀಯ ಗ್ರಾಮಸ್ಥರು ಪರದಾಟ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಎನ್ ಆರ್ ಪುರ ತಾಲೂಕಿನ ಅರಳಿ ಕೊಪ್ಪ ತಿರುವಿನಲ್ಲಿ ಈ ಘಟನೆ ನಡೆದಿದ್ದು, ಶಾಲಾ ಕಾಲೇಜಿಗೆ ವಿದ್ಯಾರ್ಥಿಗಳು ತೆರಳಲು ಮತ್ತು ಬರುವ ಮಾರ್ಗ ಸಂಪೂರ್ಣವಾಗಿ ಬಂದ್ ಆಗಿದೆ. ಬದಲಿ ಮಾರ್ಗದಲ್ಲಿ ಸುತ್ತಾಡಿ ವಿದ್ಯಾರ್ಥಿಗಳು ಸಂಚಾರ ನಡೆಸುತ್ತಿದ್ದಾರೆ.
ಒಂದೇ ಮಳೆಗೆ ಕೆರೆಕಟ್ಟೆಗಳು ಭರ್ತಿ : ಚಿಕ್ಕಮಗಳೂರು ತಾಲೂಕಿನ ಬಯಲುಸೀಮೆ ಭಾಗವಾದ ಕಳಸಾಪುರ
ವ್ಯಾಪ್ತಿಯಲ್ಲಿ ಭಾರಿ ಮಳೆ ಸುರಿದಿದೆ. ಒಂದೇ ದಿನ ಸುರಿದ ಮಹಾಮಳೆಗೆ ಗ್ರಾಮದ ಕೆರೆ ತುಂಬಿ ಭರ್ತಿಯಾಗಿರುವ ಘಟನೆ ನಡೆದಿದೆ. ರಸ್ತೆ ಮೇಲೆ ಹಳ್ಳದ ನೀರು ಉಕ್ಕಿ ಹರಿಯುತ್ತಿದ್ದು, ಭಾರಿ ಮಳೆಗೆ ಸಂಪೂರ್ಣವಾಗಿ ಕಟ್ಟೆ ತಿಮ್ಮಪ್ಪಯ್ಯನ ಕೆರೆ, ಗಾಳಿ ಹಳ್ಳಿಕೆರೆ ಭರ್ತಿಯಾಗಿದೆ. ಚಿಕ್ಕಮಗಳೂರು ತಾಲೂಕಿನ ಕಳಸಾಪುರ ಬಳಿಯ ಕೆರೆ ತುಂಬಿರುವುದರಿಂದ ಗ್ರಾಮಸ್ಥರು ಸಂತಸಗೊಂಡಿದ್ದಾರೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಸ್ತೆ ಮೇಲೆ ನದಿಯಂತೆ ಹಳ್ಳದ ನೀರು ಹರಿಯುತ್ತಿದ್ದು, ಹಳ್ಳದ ನೀರನ್ನು ನೋಡಲು ಜನ ಸಾಗರವೇ ಸ್ಥಳದಲ್ಲಿ ಸೇರಿದೆ. ಲಕ್ಯಾ ಗ್ರಾಮದಲ್ಲೂ ಭಾರಿ ಮಳೆ ಆಗುತ್ತಿದೆ. ಬತ್ತಿ ಹೋಗಿದ್ದ ಹಳ್ಳ ಕೊಳ್ಳಗಳು ಸಂಪೂರ್ಣ ಭರ್ತಿಯಾಗಿವೆ.
ಚಿಕ್ಕಮಗಳೂರು ತಾಲೂಕಿನ ಲಕ್ಯಾ ಗ್ರಾಮ ಸೇರಿದಂತೆ ಅಕ್ಕಪಕ್ಕದ ಕೆಲ ಹಳ್ಳಿಗಳಲ್ಲಿಯೂ ಉತ್ತಮ ಮಳೆಯಾಗಿದೆ. ಸತತ ಒಂದುವರೆ ಗಂಟೆ ಸುರಿದ ಭಾರಿ ಮಳೆಗೆ ಲಕ್ಯಾ ವ್ಯಾಪ್ತಿಯ ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿದೆ.
ಇದನ್ನೂ ಓದಿ : ಚಿಕ್ಕಮಗಳೂರು ಭಾಗದಲ್ಲಿ ಆರು ದಿನಗಳಿಂದ ಸುರಿಯುತ್ತಿರುವ ಮಳೆ: ನಿಧಾನವಾಗಿ ತುಂಬುತ್ತಿವೆ ಕೆರೆಕಟ್ಟೆಗಳು - RAIN IN CHIKKAMAGALURU