ಬೆಂಗಳೂರು : ರಾಜ್ಯಾದ್ಯಂತ ಈ ಬಾರಿ ಮಳೆ ಹೆಚ್ಚಾಗುತ್ತಿದೆ. ಹೀಗಾಗಿ ಅಲ್ಲಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಗಳು ಹೆಚ್ಚಾಗಿವೆ. ಇದರಿಂದ ಡೆಂಗ್ಯೂ ಪ್ರಕರಣ ದಿನೇ ದಿನೆ ರಾಜ್ಯದಲ್ಲಿ ಡೆಂಗ್ಯೂ ಜ್ವರ ಪ್ರಕರಣ ಹೆಚ್ಚಾಗುತ್ತಿವೆ. ಈ ಕುರಿತು ವಿಧಾನ ಪರಿಷತ್ನಲ್ಲಿ ಇಂದು ಪ್ರತಿಪಕ್ಷದ ಸದಸ್ಯರು ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದಾರೆ. ಇದಕ್ಕೆ ಆರೋಗ್ಯ ಸಚಿವರು ಉತ್ತರ ನೀಡಿದ್ದಾರೆ.
ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ: ರೋಗ ಉಲ್ಬಣವಾಗದಂತೆ ಸೂಕ್ತ ಮುಂಜಾಗ್ರತ ಕ್ರಮ ಕೈಗೊಳ್ಳಲಾಗುತ್ತಿದೆ. ಒಂದೇ ಪ್ರದೇಶದಲ್ಲಿ ಎರಡು ಡೆಂಗ್ಯೂ ಜ್ವರ ಪ್ರಕರಣಗಳು ವರದಿಯಾದರೆ ಆ ಪ್ರದೇಶವನ್ನ ಹಾಟ್ ಸ್ಪಾಟ್ ಎಂದು ಘೋಷಿಸಿ ಫಿವರ್ ಕ್ಲಿನಿಕ್ ತೆರೆಯಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸದನಕ್ಕೆ ಮಾಹಿತಿ ನೀಡಿದರು.
ರಾಜ್ಯದೆಲ್ಲೆಡೆ ಡೆಂಗ್ಯೂ ಕಾಯಿಲೆ ವ್ಯಾಪಕವಾಗಿ ಹರಡುತ್ತಿದ್ದು, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿಯಮ 330ರ ಮೇರೆಗೆ ಬಿಜೆಪಿ ಸದಸ್ಯರಾದ ಡಾ. ಧನಂಜಯ ಸರ್ಜಿ, ಎಸ್. ವಿ ಸಂಕನೂರು, ಕೆ. ಎ ತಿಪ್ಪೇಸ್ವಾಮಿ, ಶಶೀಲ್ ಜಿ. ನಮೋಶಿ, ಗೋವಿಂದರಾಜು ಹಾಗೂ ತಳವಾರ್ ಸಾಬಣ್ಣ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಡೆಂಗ್ಯೂ ಜ್ವರ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ರಾಜ್ಯದಲ್ಲಿ ಇದುವರೆಗೆ 16,632 ಡೆಂಗ್ಯೂ ಜ್ವರ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 3400 ಪ್ರಕರಣಗಳು ಸಕ್ರಿಯವಾಗಿವೆ. ಆಸ್ಪತ್ರೆಗಳಲ್ಲಿ 5 ಸಾವಿರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, 13 ಮಂದಿ ಐಸಿಯುನಲ್ಲಿದ್ದಾರೆ. 10 ಮಂದಿ ಸಾವನ್ನಪ್ಪಿದ್ದಾರೆ.
ಡೆಂಗ್ಯೂ ವಿರೋಧಿ ತಿಂಗಳು; ಜುಲೈ ತಿಂಗಳನ್ನು ಡೆಂಗ್ಯೂ ವಿರೋಧಿ ತಿಂಗಳಾಗಿ ಘೋಷಿಸಲಾಗಿದೆ. ಡೆಂಗ್ಯೂ ವಾರ್ ರೂಮ್ ತೆರೆಯಲಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನ ಬಳಸಿಕೊಂಡು ಸಾರ್ವಜನಿಕ ಪ್ರದೇಶಗಳಲ್ಲಿ ತಿಳುವಳಿಕೆ ಮೂಡಿಸಲಾಗುತ್ತಿದೆ. ಒಂದೇ ಏರಿಯಾದಲ್ಲಿ ಎರಡು ಡೆಂಗ್ಯೂ ಪ್ರಕರಣ ದಾಖಲಾದರೆ ಹಾಟ್ ಸ್ಪಾಟ್ ಎಂದು ಘೋಷಿಸಿ, ಸಮೀಪದಲ್ಲೇ ಫಿವರ್ ಕ್ಲಿನಿಕ್ ತೆರೆಯಲಾಗಿದೆ ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಡೆಂಗ್ಯೂ ರಕ್ತಪರೀಕ್ಷೆ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆ ಹಾಗೂ ಖಾಸಗಿ ಲ್ಯಾಬ್ಗಳಲ್ಲಿ ಡೆಂಗ್ಯೂ ಪರೀಕ್ಷೆಗೆ 300 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ನಿಗದಿತ ದರಕ್ಕಿಂತ ಹೆಚ್ಚು ದರ ವಿಧಿಸಿದ 30 ಹೆಲ್ತ್ ಸೆಂಟರ್ಗಳಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಹೆಚ್ಚಳ: ಸರ್ಕಾರದಿಂದ ಪರೀಕ್ಷೆ ಉಚಿತವಾಗಿ ಮಾಡಿ; ಆರ್.ಅಶೋಕ್ ಆಗ್ರಹ - R Ashok