ಬೆಂಗಳೂರು: ನಾವು ಡಿ.ಕೆ.ಶಿವಕುಮಾರ್ ತರಹ ಸೀರೆ, ಕುಕ್ಕರ್, ಪ್ರಿಡ್ಜ್ ಹಂಚಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಆದಿಚುಚನಗಿರಿ ಮಠದ ಬಳಿ ಮಾತನಾಡಿದ ಅವರು, ಇಂದು ಕುಮಾರಸ್ವಾಮಿ ನಿವಾಸದಲ್ಲಿ ಹೊಸ ತೊಡಕು ಕಾರ್ಯಕ್ರಮಕ್ಕೆ ಡಿಕೆಶಿ ಆಕ್ಷೇಪ ವಿಚಾರವಾಗಿ ಪ್ರತಿಕ್ರಿಯಿಸಿದರು, ಯುಗಾದಿ ಹಬ್ಬದ ಮರು ದಿನ ಹಳ್ಳಿಗಳ ಕಡೆ ಹೊಸ ತೊಡಕು ಮಾಡುತ್ತೇವೆ. ಇದು ಮನೆಯ ಕಾರ್ಯಕ್ರಮ. ಇಲ್ಲಿ ನಾವು ಬಾವುಟ ಹಾಕಿ ರಾಜಕೀಯ ಮಾಡಲ್ಲ. ಡಿ.ಕೆ. ಶಿವಕುಮಾರ್ ಹಾಗೆ ಸೀರೆ ಕುಕ್ಕರ್, ಫ್ರಿಡ್ಜ್ , ಫ್ಯಾನ್ ಹಂಚುತ್ತೇವಾ ಎಂದು ಕಿಡಿ ಕಾರಿದರು.
ಬಳಿಕ ಮಾಧ್ಯಮದ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರಿಗೆ ಈಗ ಒಕ್ಕಲಿಗರು ನೆನಪಾಗಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರ ಮತಗಳನ್ನ ಸೆಳೆಯಲು ಸಿಎಂ ಮುಂದಾಗಿದ್ದಾರೆ. ನಮ್ಮ ಪಾರ್ಟಿಯಲ್ಲಿ ಇದ್ದಾಗ ಹೇಗೆ ನಡೆದುಕೊಂಡರು ಗೊತ್ತಿದೆ. ಸಿದ್ದರಾಮಯ್ಯರಿಗೆ ಅಸ್ಥಿರತೆ ಕಾಡ್ತಾ ಇದೆ. ಈಗ ನೀಡಿರುವ ಗ್ಯಾರಂಟಿಯೇ ಸಾಕಾಗಿದೆ. ಈಗ ಮತ್ತೆ ಗ್ಯಾರಂಟಿ ಘೋಷಣೆ ಮಾಡಿದ್ದೀರಿ ಎಂದು ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದರು.
ಡಿಕೆಶಿ ಅವರು ಮೇಕೆದಾಟು ಪಾದಯಾತ್ರೆ ಮಾಡಿದ್ರು. ನಮ್ಮ ನೀರು ನಮ್ಮ ಹಕ್ಕು ಎಂದರು. ಮಹಾದಾಯಿ ಏನು ಮಾಡಿದ್ರಿ ಈಗ ಹೇಳಿ? ನೋಡೋಣ. ನಮ್ಮ ನೀರು ನಮ್ಮ ಹಕ್ಕು ಎಂದರು. ಆದರೆ, ಈಗ ನಮ್ಮ ಹಕ್ಕು ತಮಿಳುನಾಡಿಗೆ ನೀರು ಆಗಿದೆ. ಜನರು ಅಧಿಕಾರ ಕೊಟ್ಟಿದ್ದಾರೆ. ಬೆಂಗಳೂರಲ್ಲಿ ಕುಡಿಯುವ ನೀರಿಲ್ಲ, ಮಂಡ್ಯದಲ್ಲಿ ಕಬ್ಬು ಒಣಗಿದೆ. ಗ್ಯಾರಂಟಿಗಳಿಂದ ಸರ್ಕಾರ ನಡೆಸಲು ಅವರಿಂದ ಆಗ್ತಾ ಇಲ್ಲ. ನಾನು 25 ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದಾಗ ಕೇಂದ್ರ ಸರ್ಕಾರದಿಂದ ಪರಿಹಾರ ಕೇಳಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಪರಿಹಾರ ಕೇಳುವುದಕ್ಕೂ ಇತಿಮಿತಿ ಇರಬೇಕು: ಬರ ಪರಿಹಾರ ಕೇಳುವುದಕ್ಕೂ ಒಂದು ಇತಿ ಮಿತಿ ಬೇಡವೇ?. ಹಣಕಾಸು ಆಯೋಗದ ವರದಿಯನ್ವಯ, ಎಸ್ಡಿಆರ್ಎಫ್, ಎನ್ಡಿಆರ್ಎಫ್ ನಿಯಮದಂತೆ ಪರಿಹಾರ ನೀಡಲಾಗುತ್ತದೆ. ಇವರು 18,000 ಕೋಟಿ ರೂ. ಬರ ಪರಿಹಾರ ಕೇಳಿದ್ದಾರೆ. ಅಷ್ಟು ಪರಿಹಾರ ಎಂದಾದರು ಕೊಡುತ್ತಾರಾ?. ಹೋಗಲಿ ಯುಪಿಎ ಸರ್ಕಾರ ಇದ್ದಾಗ ಇಷ್ಟು ಹಣ ಕೊಟ್ಟಿತ್ತಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಆದಿಚುಂಚನಗಿರಿ ಮಠಕ್ಕೆ ಒಟ್ಟಾಗಿ ಆಗಮಿಸಿದ ಬಿಜೆಪಿ, ಜೆಡಿಎಸ್ ನಾಯಕರು - BJP JDS Leaders