ಶಿವಮೊಗ್ಗ: ''ಸಂಸದ ಪ್ರಜ್ವಲ್ ರೇವಣ್ಣ ಅಮಾನತು ಮಾಡುವ ಬಗ್ಗೆ ನಿನ್ನೆಯೇ ತೀರ್ಮಾನ ಆಗಿತ್ತು. ನಾಳೆ ಈ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಶಿಫಾರಸು ಆಗಬೇಕಿತ್ತು. ಇದರ ಆದೇಶವು ದೆಹಲಿಯಿಂದ ಆಗಬೇಕು. ಈ ಬಗ್ಗೆ ನಾನೇ ದೇವೇಗೌಡರಿಗೆ ಶಿಫಾರಸು ಮಾಡಿದ್ದೇನೆ. ಆದರೆ ಬಹಳ ಜನರು ಈ ವಿಚಾರದಲ್ಲಿ ಆತುರ ತೋರುತ್ತಿದ್ದಾರೆ'' ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ನಗರದಲ್ಲಿಂದು ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ನಾನು ನಿನ್ನೆಯೇ ಈ ವಿಚಾರದ ಬಗ್ಗೆ ತಿಳಿಸಿದ್ದೇನೆ. ಇದನ್ನು ದೊಡ್ಡದಾಗಿ ಮಾಡಲು ಕಾಂಗ್ರೆಸ್ನವರು ಎಲ್ಲಾ ರೀತಿಯ ಕುತಂತ್ರ ನಡೆಸಿದ್ದಾರೆ. ಇಲ್ಲಿ ಪ್ರಶ್ನೆ ಅಮಾನತು ಮಾಡುವುದಷ್ಟೇ ಅಲ್ಲ. ಎಸ್ಐಟಿ ತನಿಖೆ ಜೊತೆಗೆ ಹಲವು ವಿಷಯಗಳ ತನಿಖೆಯಾಗಬೇಕಿದೆ. ಪೆನ್ಡ್ರೈವ್ ಸೃಷ್ಟಿಯಾದ ಬಗ್ಗೆಯೂ ತನಿಖೆ ನಡೆಯಬೇಕು'' ಎಂದು ಆಗ್ರಹಿಸಿದರು.
''ಪ್ರಜ್ವಲ್ ರೇವಣ್ಣ ಅವರದ್ದು ಇದರಲ್ಲಿ ವಾಸ್ತವಾಂಶ ಇದ್ದರೆ ತನಿಖೆ ಕೈಗೊಳ್ಳುವಂತೆ ನಾನು ನಿನ್ನೆಯೇ ಹೇಳಿದ್ದೇನೆ. ಆದರೆ ಈ ಬಗ್ಗೆ ಅವರ ಮೇಲೆ ಯಾರೂ ಕೂಡ ನೇರವಾಗಿ ಆರೋಪ ಮಾಡಿಲ್ಲ. ತಪ್ಪು ಮಾಡಿದವರು ನೀರು ಕುಡಿಯಲೇಬೇಕು, ತಪ್ಪು ಮಾಡಿದವರಿಗೆ ಈ ನೆಲದ ಕಾನೂನಿನಡಿ ಶಿಕ್ಷೆ ಆಗಲೇಬೇಕೆಂದು ಹೇಳಿದ್ದೇನೆ. ಇದರಲ್ಲಿ ಪ್ರಜ್ವಲ್ ರೇವಣ್ಣ ಅವರ ತಪ್ಪಿದ್ದರೆ, ಯಾವುದೇ ರಾಜಿಗೊಳಗಾಗುವ ಪ್ರಶ್ನೆಯೇ ಇಲ್ಲ. ಕಾನೂನಿನ ಉಲ್ಲಂಘನೆ ಆಗಿದ್ದರೆ, ಬಲವಂತ ಆಗಿದ್ದರೆ ಕ್ರಮಕ್ಕೆ ನಮ್ಮ ಕುಟುಂಬದ ಸಮ್ಮತಿ ಇದೆ'' ಎಂದರು.
ದೇವೇಗೌಡರಾಗಲಿ, ನಾನಾಗಲಿ ಲಕ್ಷಾಂತರ ಕುಟುಂಬದವರಿಗೆ ಸಹಾಯ ಮಾಡಿದ್ದೇವೆ. ಲಕ್ಷಾಂತರ ಕುಟುಂಬಗಳ ಮನೆ ದೀಪ ಬೆಳಗಿದ್ದೇವೆ. ಆ ರೀತಿಯಲ್ಲಿ ನಾವು ಬದುಕಿದ್ದೇವೆ. ಆದರೆ ಚುನಾವಣೆಗೆ ಮೂರು ದಿನ ಮುಂಚೆ ಗಲ್ಲಿ ಗಲ್ಲಿಗಳಲ್ಲಿ ಪೆನ್ಡ್ರೈವ್ ಹಂಚಲಾಗಿದ್ದು, ಇದರ ಬಗ್ಗೆಯೂ ತನಿಖೆ ನಡೆಯಬೇಕು. ತಪ್ಪಿತಸ್ಥರ ಜೊತೆಗೆ, ಎಸ್ಐಟಿ ಇದರ ಬಗ್ಗೆಯೂ ತನಿಖೆ ನಡೆಸಬೇಕು. ಪೆನ್ಡ್ರೈವ್ ಹಂಚಿಕೆ ಮಾಡಿದವರೂ ಕೂಡ ಅದಕ್ಕಿಂತ ದೊಡ್ಡ ಕೆಟ್ಟ ಅಪರಾಧ ಮಾಡಿದಂತಾಗಿದೆ. ಅದರ ಬಗ್ಗೆಯೂ ಎಲ್ಲ ಸತ್ಯ ಹೊರಬರಬೇಕಿದೆ'' ಎಂದು ಒತ್ತಾಯಿಸಿದರು.
ದೇವೇಗೌಡರ ಕುಟುಂಬ ಎಂಬ ವಿಚಾರ ಬರಲ್ಲ: ''ಇದರಲ್ಲಿ ದೇವೇಗೌಡರ ಕುಟುಂಬ ಎಂಬ ವಿಚಾರ ಬರುವುದಿಲ್ಲ. ಇದು ಕುಟುಂಬದ ವಿರುದ್ಧವಲ್ಲ. ರೇವಣ್ಣ ಕುಟುಂಬವೆಂದರೆ ರೇವಣ್ಣ, ಅವರ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ನಾವು ಈಗಾಗಲೇ ಡಿವೈಡ್ ಆಗಿದ್ದು, ಬೇರೆ ಬೇರೆ ವಾಸಿಸುತ್ತಿದ್ದೇವೆ. ನಮ್ಮ ಬೇರೆ ಬೇರೆ ವ್ಯವಹಾರಗಳೂ ಇವೆ. ರಾಜಕೀಯವಾಗಿ ಸಭೆಗಳಲ್ಲಿ ಭಾಗವಹಿಸುತ್ತೇವೆ. ಆದರೆ ಕಾಂಗ್ರೆಸ್ನವರು ನಮ್ಮ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಇದರಲ್ಲಿ ನನಗೂ ಅದಕ್ಕೂ ಸಂಬಂಧವೇನು? ದೇವೇಗೌಡರ ಮುಖ ಬಳಸಿ ಅಣಕು ಪ್ರದರ್ಶನ ಮಾಡಿದ್ದಾರೆ. ದೇವೇಗೌಡರಿಗೂ ಈ ಪ್ರಕರಣಕ್ಕೂ ಸಂಬಂಧವೇನು? ದಿನಾಲೂ ನಾವು ಯಾರು ಎಲ್ಲಿಗೆ ಹೋಗುತ್ತಾರೆಂದು ಕಾಯುತ್ತ ಕುಳಿತುಕೊಳ್ಳುವುದಕ್ಕಾಗುತ್ತಾ? ವಯಸ್ಸಿನಲ್ಲಿ ಬೆಳೆದಿರುವ ಮಕ್ಕಳು. ಹಲವಾರು ರೀತಿಯ ಅವರದ್ದೇ ಆದ ಸಮಸ್ಯೆಗಳಿರುತ್ತವೆ'' ಎಂದು ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: ಪೆನ್ಡ್ರೈವ್ ವಿಡಿಯೋ ಕೇಸ್, ಹೆಚ್ಡಿಕೆ ನಿಲುವೇ ನಮ್ಮ ನಿಲುವು: ಆರ್.ಅಶೋಕ್ - R Ashok React