ಬೆಂಗಳೂರು: ನಾಮಪತ್ರ ಸಲ್ಲಿಕೆ ವೇಳೆ ಸಹಕಾರ ನೀಡುವಂತೆ ಅಕ್ಕ ಅವರ ಸಹಕಾರ ಕೋರಿದ್ದೇನೆ. 3ರಂದು ಕಾರ್ಯಕರ್ತರ ಅಭಿಪ್ರಾಯ ಪಡೆದು ನಿರ್ಧಾರ ಪ್ರಕಟಿಸುವುದಾಗಿ ಸುಮಲತಾ ಅಂಬರೀಶ್ ತಿಳಿಸಿದ್ದು, ಅವರ ಜೊತೆ ಮುಕ್ತವಾಗಿ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡಿದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಜೆ.ಪಿ ನಗರದಲ್ಲಿರುವ ಸಂಸದೆ ಸುಮಲತಾ ಅಂಬರೀಶ್ ಅವರ ನಿವಾಸಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಂಡ್ಯ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಿದರು. ಅವರನ್ನು ಹೂಗುಚ್ಛ ನೀಡಿ ಸುಮಲತಾ ಮತ್ತು ಪುತ್ರ ಅಭಿಶೇಕ್ ಬರಮಾಡಿಕೊಂಡರು. ನಂತರ ಸುಮಲತಾ ಅವರ ಜೊತೆ ಕುಮಾರಸ್ವಾಮಿ 30 ನಿಮಿಷಗಳ ಕಾಲ ರಾಜಕೀಯ ವಿಚಾರದ ಕುರಿತು ಮಾತುಕತೆ ನಡೆಸಿದರು. ಚುನಾವಣೆಯಲ್ಲಿ ಸಹಕಾರ ನೀಡುವಂತೆ ಇದೇ ವೇಳೆ ಮನವಿ ಮಾಡಿಕೊಂಡರು.
ಸುಮಲತಾ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಇಂದಿನ ಭೇಟಿ ಅತ್ಯಂತ ಸೌಹಾರ್ದಯುತವಾಗಿ ಆಗಿದೆ. ನನಗೆ ಅಂಬರೀಶ್ ಅವರ ಮನೆ ಹೊಸತಲ್ಲ. ಹಲವಾರು ವರ್ಷ ಜೊತೆಗೂಡಿ ಕೆಲಸ ಮಾಡಿದ್ದವರು. ಏಪ್ರಿಲ್ 4 ರಂದು ಮಂಡ್ಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ. ಅಕ್ಕ ಅವರ ಸಹಕಾರ ಕೇಳಲು ಅವರ ಮನೆಗೆ ಬಂದಿದ್ದೇನೆ. ಹಲವಾರು ವಿಷಯಗಳ ಕುರಿತು ಚರ್ಚಿಸಿದ್ದಾರೆ. ಅವರ ಹಿತೈಷಿಗಳು, ಅಭಿಮಾನಿಗಳ ಭಾವನೆಯೂ ಮುಖ್ಯ. ಏಪ್ರಿಲ್ 3ರಂದು ನಿರ್ಧಾರ ಪ್ರಕಟಿಸುವುದಾಗಿ ನಿನ್ನೆ ಹೇಳಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಅವರ ಉಪಸ್ಥಿತಿ ಬಯಸಿದ್ದೇನೆ ಎಂದರು.
ಸುಮಲತಾ ಸಹ ಬಿಜೆಪಿ ಜೊತೆ ಒಳ್ಳೆಯ ಬಾಂಧವ್ಯ ಇರಿಸಿಕೊಂಡಿದ್ದಾರೆ. ಕಳೆದ ಬಾರಿ ಬಿಜೆಪಿ ಬೆಂಬಲ ಕೊಟ್ಟಿತ್ತು. ಈ ಬಾರಿಯೂ ಹೈಕಮಾಂಡ್ ಮಾತುಕತೆ ನಡೆಸಿದೆ. ವಿಜಯೇಂದ್ರ ಅವರೂ ಕೂಡ ಸುಮಲತಾರ ನಿವಾಸಕ್ಕೆ ಬಂದು ಮಾತುಕತೆ ಮಾಡಿದ್ದಾರೆ. ನಾನು ಕೂಡ ಇಂದು ಬಂದು ಸಹಕಾರ ಕೇಳಿದ್ದೇನೆ. ಎಲ್ಲಾ ವಿಷಯಗಳನ್ನು ಚರ್ಚಿಸಿದ್ದೇವೆ. ಅದನ್ನು ಇಲ್ಲಿ ಹೇಳಲು ಆಗುವುದಿಲ್ಲ. ಅವರನ್ನು ಬೆಳೆಸಿದ ಅಂಬರೀಶ್ ಅಭಿಮಾನಿಗಳಿದ್ದಾರೆ. ಅವರ ಜೊತೆ ಮಾತನಾಡಿ ನಿರ್ಧಾರ ಮಾಡಲಿದ್ದಾರೆ ಎಂದರು.
ಡಿಕೆ ಶಿವಕುಮಾರ್ ನನ್ನ ದೊಡ್ಡ ಹಿತೈಷಿ. ಅವರಷ್ಟು ಹಿತೈಷಿ ಯಾರೂ ಇಲ್ಲ. ಐದು ವರ್ಷದ ಸರ್ಕಾರವನ್ನು ಸಂಪೂರ್ಣವಾಗಿ ನಡೆಸಲು ಸಹಕಾರ ಕೊಡುವುದಾಗಿ ಹೇಳಿದ್ದೆವು ಎಂದು ಪದೇ ಪದೇ ಹೇಳುತ್ತಾರೆ. ದೊಡ್ಡ ಪಕ್ಷವಾದರೂ ಸಣ್ಣ ಪಕ್ಷಕ್ಕೆ ಅಧಿಕಾರ ಕೊಟ್ಟೆವು ಎನ್ನುತ್ತಾರೆ. ಆದರೆ ನನಗೆ ಕೊಟ್ಟ ಹಿಂಸೆ, ಪ್ರತಿ ದಿನ ಯಾವ ರೀತಿ ಅವಮಾನ ಮಾಡಿದ್ದೀರೆನ್ನುವುದು ನನಗೆ ಗೊತ್ತು. ಒಂದು ದಿನವೂ ನನಗೆ ಸಿಎಂ ಆಗಿ ಕೆಲಸ ಮಾಡಲು ಬಿಡದೇ ತೊಂದರೆ ಕೊಟ್ಟಿದ್ದು ನಿಮ್ಮ ಸಹಕಾರವೇ? ಚಳಿ ಮಳೆ ಗಾಳಿಗೆ ಸಹಕಾರ ಕೊಟ್ಟರು. ಅದಕ್ಕೆ ಮೈತ್ರಿ ಸರ್ಕಾರ 14 ತಿಂಗಳಿಗೆ ಬಿತ್ತು ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದರು.
ಮುಖ್ಯಮಂತ್ರಿಯಾಗಿ ನನ್ನ ಪ್ರಮಾಣವಚನ ಆದ ನಂತರ ಜಾರ್ಜ್ ಅವರ ಹೋಟೆಲ್ಗೆ ಕರೆಸಿ ಕಾರಿಡಾರ್ನಲ್ಲಿ ನಿಲ್ಲಿಸಿದ್ದರು, ಒಳಗೆ ಬಿಡಲಿಲ್ಲ, ಯಾಕೆ ಎಂಬುದು ಗೊತ್ತಿಲ್ಲ. ಐದು ವರ್ಷ ಸಹಕಾರ ಎಂದಿದ್ದರು. ಯಾರು ಹಿತೈಷಿಗಳು ಎಂದು ಗೊತ್ತಾಗಲಿದೆ. ರಾಮನಗರದಲ್ಲಿ ಬಿಲ ತೋಡಿ ಒಳಗೆ ಬಂದರು. ನನ್ನ ಕಾರ್ಯಕರ್ತರನ್ನು ಕೊಂಡುಕೊಳ್ಳುತ್ತಿದ್ದಾರೆ. ಇವರು ನನ್ನ ಹಿತೈಷಿಗಳು ಎಂದು ಹೆಚ್ಡಿಕೆ ಟೀಕಿಸಿದರು.
ನಂತರ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಕುಮಾರಸ್ವಾಮಿ ಇಂದು ನಮ್ಮ ನಿವಾಸಕ್ಕೆ ಆಗಮಿಸಿ ಚುನಾವಣೆಯಲ್ಲಿ ಸಹಕಾರ ನೀಡುವಂತೆ ಕೇಳಿದರು. ನಾನು ನಿನ್ನೆ ಹೇಳಿದಂತೆಯೇ ನನ್ನ ಕಾರ್ಯಕರ್ತರು, ಹಿತೈಷಿಗಳ ಒಪ್ಪಿಗೆ ಪಡೆಯದೇ ನಿರ್ಧಾರ ಮಾಡಲಾಗಲ್ಲ ಎಂದಿದ್ದೇನೆಂದು ತಿಳಿಸಿದರು.
ಸಭೆಯಲ್ಲಿ ನಟ ದರ್ಶನ್ ಮತ್ತು ಅಭಿಶೇಕ್ ಮಾತ್ರ ಇರಲಿದ್ದಾರೆ. ಇದನ್ನು ರಾಜಕೀಯ ಸಭೆ ಎನ್ನಲ್ಲ. ನನ್ನ ನಿರ್ಧಾರ, ಬದ್ಧತೆ ಏನಿದೆ ಎಂದು ಮಂಡ್ಯ ಅಭಿಮಾನಿಗಳು, ಜನತೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದೇನೆ. ಹಾಗಾಗಿ ಆ ಸಭೆಯಲ್ಲಿ ಯಾವುದೇ ರಾಜಕಾರಣಿಗಳಿರಲ್ಲ ಎಂದರು.
ಮಂಡ್ಯದಲ್ಲಿ ನನ್ನ ಸ್ಪರ್ಧೆ ಬಗ್ಗೆ ಇಬ್ಬರೂ ಮಾತನಾಡಲ್ಲ. ಆದರೆ ಮೋದಿ ಕೈ ಬಲಪಡಿಸೋಣ ಎಂದಿದ್ದಾರೆ. ಮತ್ತೊಂದು ಸುತ್ತು ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಬೇಕಿದೆ. ನಂತರ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿ ನಿರ್ಧಾರ ಮಾಡುತ್ತೇನೆ. 2019ರ ಮೊದಲು ರಾಜಕೀಯ ಅನುಭವ ಇರಲಿಲ್ಲ. ಐದು ವರ್ಷದಲ್ಲಿ ಪಾಠ ಕಲಿಸಿದೆ. ಇದು ಚದುರಂಗದ ಆಟ. ನಾನು ಇಲ್ಲಿ ಕೊಟ್ಟ ಮಾತು ನಿಭಾಯಿಸಿಕೊಂಡು ಬಂದಿದ್ದೇನೆ. ನನ್ನ ನಡೆನುಡಿಯಲ್ಲಿ ಬದಲಾವಣೆ ಇರಲ್ಲ. ಹಾಗಾಗಿ ನಾನು ಎಚ್ಚರಿಕೆಯಿಂದ ನಿರ್ಧಾರ ಮಾಡಬೇಕು. ಜಿಲ್ಲೆಯ ಜನತೆಗೆ ಒಳ್ಳೆಯದಾಗಬೇಕು. ಅಂತಹ ನಿರ್ಧಾರ ಮಾಡಲಿದ್ದೇನೆ ಎಂದರು.
2019ರಲ್ಲಿಯೂ ಜನ ಹೇಳಿದಂತೆ ಕೇಳಿದ್ದೇನೆ. ಜನಾದೇಶವೇ ಮುಖ್ಯ. ಈಗಲೂ ಕೂಡ ಜನಾದೇಶವೇ ಮುಖ್ಯ ಆಗಲಿದೆ. ಹಾಗಾಗಿ ನಾನು ಮಂಡ್ಯ ಜನತೆಯನ್ನು ನೋಯಿಸುವ ನಿರ್ಧಾರ ಮಾಡಲ್ಲ. ಹಿಂದಿನ ಚುನಾವಣೆ ಎದುರಿಸಿದ್ದೂ ಕೂಡ ಜನರಿಗಾಗಿಯೇ? ಈಗಲೂ ಅವರ ಹಿತಕ್ಕೆ ತಕ್ಕ ನಿರ್ಧಾರ ಮಾಡಲಿದ್ದೇನೆ. ನನ್ನ ಜೊತೆಯಲ್ಲಿದ್ದವರ ಕೈಬಿಡುವ ಪ್ರಶ್ನೆಯೇ ಇಲ್ಲ. ಎಲ್ಲವನ್ನೂ ಗಮನಿಸಿಯೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಇದನ್ನೂ ಓದಿ: ಡ್ರಗ್ಸ್ ಪ್ರಕರಣ: ತಮಿಳು ನಿರ್ಮಾಪಕ ಜಾಫರ್ ಅರೆಸ್ಟ್, ನಿರ್ದೇಶಕ ಅಮೀರ್ಗೆ ಸಮನ್ಸ್ - Drugs Case
ಚುನಾವಣೆಗೆ ನಿಂತು ಸೋತಿದ್ದರೆ ಬೇರೆ ಮಾತು, ಬಿಜೆಪಿ ಸೀಟು ಉಳಿಸಿಕೊಂಡಿದ್ದರೆ ಬೇರೆ ಮಾತೆ ಇತ್ತು. ಆದರೆ ಜೆಡಿಎಸ್ಗೆ ಬಿಟ್ಟು ಕೊಟ್ಟಿದೆ. ಇದನ್ನು ಜರ್ನಿಯ ರಸ್ತೆ ನಡುವೆ ಬರುವ ರೋಡ್ ಹಂಪ್ ಎಂದುಕೊಂಡಿದ್ದೇನೆ. ಸ್ವಲ್ಪ ನಿಧಾನಿಸಿ ಮುಂದುವರೆಯುತ್ತೇನೆ. ಅಲ್ಲದೇ ಸಾಕಷ್ಟು ಅವಕಾಶವನ್ನು ಬಿಜೆಪಿ ನೀಡಿತ್ತು. ಬೇರೆ ಕಡೆ ಸ್ಪರ್ಧಿಸುವ ಆಫರ್ ನೀಡಿತ್ತು. ಬಿಜೆಪಿ ನನ್ನ ಸೈಡ್ ಲೈನ್ ಮಾಡಿಲ್ಲ ಎಂದು ಸುಮಲತಾ ಸ್ಪಷ್ಟಪಡಿಸಿದ್ದಾರೆ.
ಡಿಕೆಶಿಗೆ ಸುಮಲತಾ ಟಾಂಗ್: ಇದೇ ವೇಳೆ, ವಿಷ- ವೈರಿ ಎಂಬ ಹೇಳಿಕೆಗೆ ಸಂಬಂಧಿಸಿ ಟಾಂಗ್ ನೀಡಿದ ಸಂಸದೆ ಸುಮಲತಾ ಅಂಬರೀಷ್, ''ಡಿಕೆ ಶಿವಕುಮಾರ್ ಹೇಳಿಕೆ ಆಶ್ಚರ್ಯ ಮೂಡಿಸಿದೆ. ಹಾಗಿದ್ದರೆ ಕಾಂಗ್ರೆಸ್ಗೆ ಪ್ರಶ್ನೆ ಕೇಳುವುದಕ್ಕೆ ಇಷ್ಟಪಡುತ್ತೇನೆ. ಅಂಬರೀಶ್ ಕಾಂಗ್ರೆಸ್ಗೆ ಏನು ಅನ್ಯಾಯ ಮಾಡಿದ್ದರು? 25 ವರ್ಷ ನಮ್ಮ ಕುಟುಂಬ, ಅಂಬರೀಶ್ ಕಾಂಗ್ರೆಸ್ಗೆ ಸೇವೆ ಸಲ್ಲಿಸಿದ್ದೇವೆ. ಈ ಐದು ವರ್ಷದಲ್ಲಿ ಕಾಂಗ್ರೆಸ್ ನಾಯಕರಿಗೆ ಅದು ನೆನಪಾಗಲಿಲ್ವಾ? ನಾನೂ ಹಾಗೆಯೇ ಪ್ರಶ್ನೆ ಮಾಡಬಹುದಲ್ವಾ? ಡಿಕೆ ಶಿವಕುಮಾರ್ ಈಗ ಈ ವಿಷಯ ಮಾತಾಡಿದ್ದು ಯಾಕೆ? ಕಾಂಗ್ರೆಸ್ ನಾಯಕರು ಯಾರು ಯಾರು ಸಂಪರ್ಕ ಮಾಡಿದ್ದಾರೆ, ಮಾಡುತ್ತಿದ್ದಾರೆ ಎಂಬುದನ್ನು ನಿಮ್ಮ ಊಹೆಗೇ ಬಿಡುತ್ತೇನೆ'' ಎಂದರು.