ಬೆಂಗಳೂರು: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ಇಲ್ಲಿ ನಡೆದ ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಸಮನ್ವಯ ಸಮಿತಿ ಸಭೆಯ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುವಾಗ ಮೂಗಿನಿಂದ ರಕ್ತಸ್ರಾವವಾಗಿದೆ. ತಕ್ಷಣವೇ ಅವರನ್ನು ಜಯನಗರ ಬಡಾವಣೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಸಭೆ ನಡೆಸಲಾಯಿತು. ಬಳಿಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಜೊತೆಗೂಡಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಿದ್ದ ವೇಳೆ ದಿಢೀರ್ ಆಗಿ ಮೂಗಿನಿಂದ ರಕ್ತಸ್ರಾವವಾಗಿದೆ. ಅವರ ಬಿಳಿ ಅಂಗಿಯ ಮೇಲೆಲ್ಲ ರಕ್ತ ಚಿಮ್ಮಿದ್ದು ಕಂಡುಬಂದಿತು.
#WATCH | Karnataka: Union Minister HD Kumaraswamy was taken to hospital after his nose started bleeding while he was attending a press conference in Bengaluru. pic.twitter.com/yGX1pOwGVZ
— ANI (@ANI) July 28, 2024
ರಕ್ತ ಬಂದಿದ್ದರಿಂದ ಸ್ಥಳದಲ್ಲಿದ್ದ ನಾಯಕರು ಗಾಬರಿಯಾದರು. ಈ ವೇಳೆ ಅಲ್ಲಿಯೇ ಇದ್ದ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ತಂದೆಯನ್ನು ತಕ್ಷಣವೇ ಅಲ್ಲಿಂದ ಆಸ್ಪತ್ರೆಗೆ ಕರೆದೊಯ್ದರು. ರಕ್ತ ಸುರಿಯುತ್ತಿದ್ದರೂ ತೀರಾ ಗಾಬರಿಯಾಗದ ಕುಮಾರಸ್ವಾಮಿ ಅವರು ಯಡಿಯೂರಪ್ಪ ಅವರಿಗೆ ಮಾತನಾಡಲು ಹೇಳುತ್ತ ಅಲ್ಲಿಂದ ಆಸ್ಪತ್ರೆಗೆ ಸಾಗಿದರು.
ಸರಣಿ ಸಭೆಗಳಲ್ಲಿ ಹೆಚ್ಡಿಕೆ ಭಾಗಿ: ಇದಕ್ಕೂ ಮೊದಲು ಕೇಂದ್ರ ಸಚಿವರು, ಬೆಳಗ್ಗೆಯಿಂದಲೇ ಸರಣಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ನಂಜನಗೂಡು ಪಟ್ಟಣದ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ, ಮೈಸೂರಿಗೆ ಆಗಮಿಸಿ ಸಭೆ ನಡೆಸಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ್ದರು. ಬಳಿಕ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ಸಭೆಯಲ್ಲಿ ಪಾಲ್ಗೊಂಡಿದ್ದರು.
''ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಅತಿಯಾದ ಉಷ್ಣದಿಂದ(ಹೀಟ್) ಮೂಗಿನಲ್ಲಿ ರಕ್ತ ಬಂದಿದೆ. ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಕೆಲವೇ ಸಮಯದಲ್ಲಿ ಆಸ್ಪತ್ರೆಯಿಂದ ಮನೆಗೆ ತೆರಳಲಿದ್ದಾರೆ'' ಎಂದು ಜೆಡಿಎಸ್ ನಾಯಕರು ತಿಳಿಸಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ ಮುಚ್ಚಿ ಹಾಕಲು ನ್ಯಾ.ದೇಸಾಯಿ ಆಯೋಗ ರಚನೆ: ಹೆಚ್.ಡಿ. ಕುಮಾರಸ್ವಾಮಿ - HDK outrage against Siddaramaiah