ಮಂಡ್ಯ/ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕೆ ಇಳಿದಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಮಂಡ್ಯದಲ್ಲಿ ನಾಮಪತ್ರ ಸಲ್ಲಿಸಿದರು. ಹೆಚ್ಡಿಕೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೋವಾ ಸಿಎಂ ಪ್ರಮೋದ್ ಸಾವಂತ್, ಮೈಸೂರು - ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಇತರರು ಸಾಥ್ ನೀಡಿದರು.
ಜಿಲ್ಲಾ ಚುನಾವಣಾ ಅಧಿಕಾರಿ ಡಾ.ಕುಮಾರ ಅವರಿಗೆ ನಾಮಪತ್ರ ಸಲ್ಲಿಸಿ ಹೊರಬಂದ ಹೆಚ್.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರಿಗೆ ಉಭಯ ಪಕ್ಷಗಳ ಕಾರ್ಯಕರ್ತರು ಜಯ ಘೋಷ ಕೂಗಿದರು.
ದೇವಾಲಯಗಳಲ್ಲಿ ವಿಶೇಷ ಪೂಜೆ: ಉಮೇದುವಾರಿಕೆ ಸಲ್ಲಿಕೆಗೂ ಮುನ್ನ ಟೆಂಪಲ್ ರನ್ ನಡೆಸಿದ ಕುಮಾರಸ್ವಾಮಿ, ಮಂಡ್ಯ ನಗರದ ಶ್ರೀ ಕಾಳಿಕಾಂಬ ಅಮ್ಮನವರ ದರ್ಶನ ಪಡೆದರು. ಅದಕ್ಕೂ ಮೊದಲು ಶ್ರೀ ಅರ್ಕೇಶ್ವರ ಸ್ವಾಮಿಯ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸಿದರು. ಜೊತೆಗೆ, ಸಕ್ಕರೆ ನಗರಿಯ ಶ್ರೀ ಲಕ್ಷ್ಮಿ ಜನಾರ್ದನ ದೇವರ ಸನ್ನಿಧಿಗೆ ತೆರಳಿ ಪೂಜೆ, ಪ್ರಾರ್ಥನೆ ಮಾಡಿದರು. ಬಳಿಕ ಕಾವೇರಿ ಭವನದ ಮುಂಭಾಗದಲ್ಲಿರುವ ಶ್ರೀ ಕಾವೇರಿ ಮಾತೆಗೆ ಪೂಜಿಸಿದರು. ಇದೇ ವೇಳೆ, ಶ್ರೀ ಜಯಚಾಮರಾಜೇಂದ್ರ ಒಡೆಯರ್ ಹಾಗೂ ಸರ್.ಎಂ. ವಿಶ್ವೇಶ್ವರಯ್ಯ ಅವರ ಪುತ್ಥಳಿಗೆ ಗೌರವ ಸಮರ್ಪಣೆ ಮಾಡಿದರು.
ತಂದೆ-ತಾಯಿ ಆಶೀರ್ವಾದ: ಇಂದು ನಾಮಪತ್ರ ಸಲ್ಲಿಕೆ ಮಾಡುವ ಹಿನ್ನೆಲೆಯಲ್ಲಿ ಮುನ್ನ ಕುಮಾರಸ್ವಾಮಿ ಅವರು, ಬೆಳಗ್ಗೆ ತಮ್ಮ ತಂದೆ ಹಾಗೂ ತಾಯಿಗಳ ಆಶೀರ್ವಾದ ಪಡೆದುಕೊಂಡಿದ್ದರು. ಬೆಂಗಳೂರಿನ ಪದ್ಮನಾಭನಗರದಲ್ಲಿ ದೇವೇಗೌಡರ ನಿವಾಸಕ್ಕೆ ಹೆಚ್ಡಿಕೆ ಭೇಟಿ ನೀಡಿದ್ದರು. ತಾಯಿ ಚನ್ನಮ್ಮ ಹಾಗೂ ತಂದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆದಿದ್ದರು. ಈ ವೇಳೆ, ದೇವೇಗೌಡರು ಬಿ ಫಾರಂ ಅನ್ನು ಕುಮಾರಸ್ವಾಮಿ ಅವರಿಗೆ ನೀಡಿ, ಅವರ ತಲೆ ಸವರಿ ಆಶೀರ್ವಾದ ಮಾಡಿದ್ದರು.
''ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ಪೂಜ್ಯ ತಂದೆ, ತಾಯಿ ಅವರ ಆಶೀರ್ವಾದ ಪಡೆದುಕೊಂಡೆ. ಇದೇ ವೇಳೆ, ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಂದ ಬಿ ಫಾರಂ ಸ್ವೀಕರಿಸಿದೆ'' ಎಂದು ಕುಮಾರಸ್ವಾಮಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದ್ದರು.
ಇದನ್ನೂ ಓದಿ: ಬಿಜೆಪಿ ರೆಬೆಲ್ ಈಶ್ವರಪ್ಪ ಭೇಟಿಗೆ ಅಮಿತ್ ಶಾ ನಿರಾಕರಣೆ: ಶಿವಮೊಗ್ಗದಲ್ಲಿ ಸ್ಪರ್ಧೆ ಖಚಿತವೆಂದ ಈಶ್ವರಪ್ಪ