ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದ ಮದರಸಾವೊಂದರ ಇಬ್ಬರು ಶಿಕ್ಷಕರ ವಿರುದ್ಧ ಪೊಲೀಸರಿಗೆ ದೂರು ನೀಡದ ಹಿನ್ನೆಲೆಯಲ್ಲಿ ಮದರಸಾ ಸ್ಥಾಪಕ ಟ್ರಸ್ಟಿ ವಿರುದ್ಧದ ದಾಖಲಾದ ಪ್ರಕರಣ ರದ್ದುಗೊಳಸಲು ಹೈಕೋರ್ಟ್ ನಿರಾಕರಿಸಿದೆ.
ಮಾಣಿಕ್ ಮಸ್ತಾನ್ ಮದರಸಾದ ಟ್ರಸ್ಟಿ ಮೊಹಮ್ಮದ್ ಅಮೀರ್ ರಾಜಾ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ) ಸೆಕ್ಷನ್ 21(ಪ್ರಕರಣ ದಾಖಲಿಸಿದ್ದಕ್ಕೆ ಶಿಕ್ಷೆ) ಪ್ರಕಾರ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಡೆಸಿದ ಕುರಿತ ಮಾಹಿತಿ ಗಮನಕ್ಕೆ ಬಂದ ತಕ್ಷಣ ದೂರು ದಾಖಲಿಸಬೇಕು ಎಂದು ತಿಳಿಸಲಾಗಿದೆ. ಆದರೆ, ಅರ್ಜಿದಾರರು ಮಾಹಿತಿಯಿದ್ದರೂ ದೂರು ದಾಖಲಿಸಲು ವಿಫಲರಾಗಿದ್ದಾರೆ ಎಂದು ಪೀಠ ತಿಳಿಸಿದೆ.
ಪೋಕ್ಸೋ ಕಾಯ್ದೆಯು ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ತಪ್ಪಿಸುವುದಕ್ಕಾಗಿ ಜಾರಿ ಮಾಡಲಾಗಿದೆ. ಕಾಯ್ದೆಯ ನಿಯಮಗಳನ್ನು ಸರಿಯಾದ ರೀತಿಯಲ್ಲಿ ಜಾರಿ ಮಾಡುವ ಅಗತ್ಯವಿದೆ. ಇಲ್ಲವಾದಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ ಅಪರಾಧಿಯು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳುವುದಕ್ಕೆ ಕಾರಣವಾಗಲಿದೆ. ಇದು ಕಾಯ್ದೆಯ ಉದ್ದೇಶವನ್ನೇ ವಿಫಲಗೊಳಿಸಲಿದೆ.
ಪ್ರಕರಣ ಸಂಬಂಧದ ದೂರು ಮತ್ತು ಆರೋಪ ಪಟ್ಟಿಯನ್ನು ಪರಿಶೀಲಿಸಿದ ನ್ಯಾಯಪೀಠ, ಪ್ರಕರಣದಲ್ಲಿ ಆರೋಪಿಗಳ (ಇಬ್ಬರು ಶಿಕ್ಷಕರು) ಕೃತ್ಯ ಅತ್ಯಂತ ಭಯಾನಕವಾಗಿದೆ. ಈ ರೀತಿಯ ಘೋರ ಅಪರಾಧ ಕೃತ್ಯಗಳು ಮಾಹಿತಿಯ ಕೊರತೆ ಮತ್ತು ಅಂತಹ ಕೃತ್ಯಗಳ ನಿಯಂತ್ರಣ ಮಾಡುವುದರಿಂದ ಹಲವಾರ ಕೃತ್ಯಗಳು ಬೆಳಕಿಗೆ ಬರುವುದಿಲ್ಲ. ಜತೆಗೆ, ಕಿರುಕುಳಕ್ಕೊಳಗಾದ ಸಂತ್ರಸ್ತರು ದೂರು ದಾಖಲಿಸುವುದಕ್ಕೆ ಮುಂದಾಗುವುದಿಲ್ಲ. ಹೀಗಾಗಿ ಅರ್ಜಿದಾರರು ಮಾಹಿತಿ ತಿಳಿದ ತಕ್ಷಣ ದೂರು ದಾಖಲಿಸದೆ ಇರುವುದು ಗಂಭೀರ ಆರೋಪವಾಗಲಿದೆ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ಪ್ರಕರಣದ ದೂರುದಾರ (ಸಂತ್ರಸ್ತರ ತಂದೆ)ನ ಸುಮಾರು 11 ವರ್ಷದ ಅಪ್ರಾಪ್ತ ಬಾಲಕ ಮದರಸಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಬಾಲಕ ಮದರಸಾಗೆ ಹೋಗುವುದಕ್ಕೆ ನಿರಾಕರಿಸಿದ್ದ. ಈ ಬಗ್ಗೆ ವಿಚಾರಣೆ ನಡೆಸಿದಾಗ, ಮದರಸಾದಲ್ಲಿ ಸೇವೆ ಸಲ್ಲಿಸುತ್ತಿದ್ದ ಇಬ್ಬರು ಶಿಕ್ಷಕರು ಅಪ್ರಾಪ್ತನ ಮೇಲೆ 2023ರ ಜೂನ್ ರಿಂದ 2023ರ ಸೆಪ್ಟಂಬರ್ ತಿಂಗಳ ನಡುವೆ ಅಪ್ರಾಪ್ತ ಬಾಲಕನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದರು ಎಂಬ ಅಂಶ ಬೆಳಕಿಗೆ ಬಂದಿತ್ತು.
ತಕ್ಷಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪೋಕ್ಸೋ ಕಾಯ್ದೆ ಸೆಕ್ಷನ್ 17 (ಕೃತ್ಯಕ್ಕೆ ಪ್ರಚೋದನೆ) ಮತ್ತು 21 (ಪ್ರಕರಣ ಸಂಬಂಧ ದೂರು ದಾಖಲಿಸುವಲ್ಲಿ ವಿಫಲಕ್ಕೆ ಶಿಕ್ಷೆ) ಮತ್ತು ಐಪಿಸಿ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪೊಲೀಸರು ಅರ್ಜಿದಾರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮದರಸಾ ಶಿಕ್ಷಕರ ನಡೆಸಿರುವ ಕೃತ್ಯ ಕ್ಷಮಿಸಲಾಗುವುದಿಲ್ಲ. ಆದರೆ, ಅರ್ಜಿದಾರರಿಗೆ ಘಟನೆ ಏನಾಗಿದೆ ಎಂಬುದು ತಿಳಿಸಿರಲಿಲ್ಲ. ತಿಳಿದ ನಂತರ ಅವರು ದೂರು ದಾಖಲಿಸುವುದಕ್ಕೆ ಮುಂದಾಗಿದ್ದರು. ಹೀಗಾಗಿ ಅವರ ವಿರುದ್ಧದ ಪ್ರಕರಣ ಮತ್ತು ಅದರ ಸಂಬಂಧದ ವಿಚಾರಣೆ ನಡೆಸುವುದಕ್ಕೆ ಅವಕಾಶವಿಲ್ಲ. ಆದ್ದರಿಂದ ಅರ್ಜಿಯನ್ನು ಪುರಸ್ಕರಿಸಬೇಕು ಎಂದು ಕೋರಿದರು.
ಅರ್ಜಿದಾರರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲರು, ಮದರಸಾಕ್ಕೆ ಅರ್ಜಿದಾರರ ಸಂಸ್ಥಾಪಕ ಟ್ರಸ್ಟಿ ಆಗಿದ್ದ, ಅಲ್ಲಿ ಏನು ನಡೆಯುತ್ತಿದೆ ಎಂಬ ಅಂಶಗಳು ಸಂಪೂರ್ಣ ಮಾಹಿತಿ ಇರಲಿದೆ. ಆದರೂ, ಪ್ರಕರಣ ಸಂಬಂಧ ಪೊಲೀಸರಿಗೆ ದೂರು ನೀಡಿಲ್ಲ. ಇದೇ ಕಾರಣದಿಂದ ಆರೋಪಿತ ಶಿಕ್ಷಕರು ಸಂತ್ರಸ್ತ ಬಾಲಕನಿಗೆ ಪದೇ ಪದೇ ಕಿರುಕುಳ ನೀಡಿದ್ದಾರೆ. ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು.
ಇದನ್ನೂ ಓದಿ: ಸರ್ಕಾರಿ ಅತಿಥಿ ಗೃಹದ ಸಾಮಗ್ರಿ ನಾಪತ್ತೆ ಕೇಸ್: ರೋಹಿಣಿ ಸಿಂಧೂರಿ ವಿರುದ್ಧದ ಪ್ರಕರಣ ಮುಕ್ತಾಯ