ಬೆಂಗಳೂರು: ಸಚಿವ ದಿನೇಶ್ ಗುಂಡೂರಾವ್ ಮನೇಲಿ ಅರ್ಧ ಪಾಕಿಸ್ತಾನವಿದೆ ಎಂದು ಹೇಳಿಕೆ ನೀಡಿದ ಆರೋಪದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದಾಖಲಾಗಿರುವ ಮಾನಹಾನಿ ಪ್ರಕರಣಕ್ಕೆ ತಡೆ ನೀಡಲು ನಿರಾಕರಿಸಿರುವ ಹೈಕೋರ್ಟ್, ಯತ್ನಾಳ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು. "ಪತ್ನಿ ಮುಸ್ಲಿಂ ಎಂದ ಮಾತ್ರಕ್ಕೆ ಈ ರೀತಿ ಹೇಳಿಕೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿರುವ ಪೀಠ, ನಿರ್ದಿಷ್ಟ ಸಮುದಾಯವನ್ನು ನೀವು ಹಾಗೆ ವ್ಯಾಖ್ಯಾನಿಸಲಾಗದು" ಎಂದು ಮೌಖಿಕವಾಗಿ ಕಿಡಿಕಾರಿತು.
ಗಾಂಧಿನಗರ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಪತ್ನಿ ತಬಸ್ಸುಮ್ ರಾವ್ ಅವರು ಹೂಡಿರುವ ಮಾನಹಾನಿ ಪ್ರಕರಣ ರದ್ದುಪಡಿಸುವಂತೆ ಕೋರಿ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ಆರಂಭವಾಗಿಗುತ್ತಿದ್ದಂತೆ ಪೀಠ, "ನಿಮಗೆ(ಯತ್ನಾಳ್) ಎಷ್ಟು ಬಾರಿ ಹೇಳಲಾಗಿದೆ? ಇದೆಲ್ಲಾ ಏಕೆ ಬೇಕು? ಇದೆಲ್ಲವನ್ನು ನೀವೇಕೆ ಮಾತನಾಡಬೇಕು? ನಿಮ್ಮ ಮನಸ್ಸಿಗೆ ಬಂದಿದ್ದೆಲ್ಲವನ್ನೂ ಮಾತನಾಡುತ್ತೀರಲ್ಲ. ಅರ್ಧ ಪಾಕಿಸ್ತಾನ ಎಂದರೆ ಏನರ್ಥ? ಅದೆಲ್ಲವನ್ನೂ ನೀವೇಕೆ ಹೇಳಿದ್ದೀರಿ? ನಿರ್ದಿಷ್ಟ ಸಮುದಾಯವನ್ನು ನೀವು ಹಾಗೆ ವ್ಯಾಖ್ಯಾನಿಸಲಾಗದು. ಆ ಸಮುದಾಯ ಈ ದೇಶದಲ್ಲಿದೆ. ಪ್ರತಿ ಬಾರಿಯೂ ಪ್ರತಿ ಪ್ರಕರಣದಲ್ಲೂ ನಾನು ಹೇಳುತ್ತಿದ್ದೇನೆ. ಕೆಸರು ಎರಚುವುದು ನಿಲ್ಲಬೇಕು. ಇದರಿಂದ ಏನು ಸಿಗುತ್ತದೆ?" ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿತು.
"ಇದು ಮಾತನಾಡುವ ರೀತಿಯಲ್ಲ. ಇದು ಸರಿಯಲ್ಲ. ನೀವು ವೈಯಕ್ತಿಕ ಹೇಳಿಕೆ ಏಕೆ ನೀಡುತ್ತೀರಿ? ನಾನು ಇದಕ್ಕೆ ತಡೆ ನೀಡುವುದಿಲ್ಲ. ನೀವು ಎಲ್ಲರನ್ನೂ ಹಾಗೆ ವ್ಯಾಖ್ಯಾನಿಸುವುದು ಸರಿಯಲ್ಲ. ಸ್ವಲ್ಪ ತಡೆ ಹಿಡಿದು ಮಾತನಾಡಿ ಅಂಥ ಹೇಳಿದ್ದೇವೆ. ನಾವು ಇಲ್ಲಿ ಸಲಹೆ ನೀಡಲು ಕುಳಿತಿಲ್ಲ. ದೂರುದಾರರು ಏನೂ ಕಡಿಮೆ ಇಲ್ಲ" ಎಂದು ಹೇಳಿತು. ಅದಕ್ಕೆ ಪ್ರತಿಕ್ರಿಯಿಸಿದ ದೂರುದಾರರ ಪರ ವಕೀಲರು, "ಅರ್ಜಿದಾರರು ರಾಜಕೀಯದಲ್ಲಿಲ್ಲ. ಆದರೂ ಈ ರೀತಿಯ ಹೇಳಿಕೆ ನೀಡಲಾಗಿದೆ" ಎಂದರು.
ಇದಕ್ಕೆ ಯತ್ನಾಳ್ ಪರ ವಕೀಲರು, "ದಿನೇಶ್ ಗುಂಡೂರಾವ್ ಹೇಳಿಕೆಗೆ ಪ್ರತಿ ಹೇಳಿಕೆ ನೀಡಲಾಗಿದೆಯಷ್ಟೇ. ಮಾರನೇಯ ದಿನ ಸ್ಪಷ್ಟನೆಯನ್ನೂ ನೀಡಲಾಗಿದೆ. ಉದ್ದೇಶಪೂರ್ವಕವಾಗಿ ಆ ಹೇಳಿಕೆ ನೀಡಿಲ್ಲ. ನಾಳೆಗೆ ವಿಚಾರಣಾಧೀನ ನ್ಯಾಯಾಲಯದ ಮುಂದೆ ಹಾಜರಾಗಬೇಕಿದೆ. ಅದಕ್ಕೆ ತಡೆ ನೀಡಬೇಕು" ಎಂದು ಕೋರಿದರು.
ಈ ವೇಳೆ ಪೀಠ, "ಪ್ರಕರಣಕ್ಕೆ ತಡೆ ನೀಡುವುದಕ್ಕೆ ಸಾಧ್ಯವಿಲ್ಲ. ಬಿಎನ್‌ಎಸ್‌ಎಸ್ ಸೆಕ್ಷನ್ 200ರ ಅಡಿ ಸಂಜ್ಞೆ ಪರಿಗಣಿಸುವುದಕ್ಕೂ ಮುನ್ನ ಆರೋಪಿಯ ವಾದವನ್ನು ಆಲಿಸಬೇಕು. ಇಲ್ಲಿ ಪ್ರಕ್ರಿಯೆ ಲೋಪ ಕಾಣುತ್ತಿದೆ. ಹಾಗಾಗಿ, ಸೆಪ್ಟೆಂಬರ್ 23ರಂದು ಹೊಸದಾಗಿ ನಿಯಮದ ಪ್ರಕಾರ ಸಂಜ್ಞೆ ಪರಿಗಣಿಸಲು ಅಧೀನ ನ್ಯಾಯಾಲಯಕ್ಕೆ ಪ್ರಕರಣವನ್ನು ಮರಳಿಸಲಾಗುವುದು" ಎಂದು, ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ ಏನು?: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಮನೇಲಿ ಅರ್ಧ ಪಾಕಿಸ್ತಾನವಿದೆ. ದೇಶವಿರೋಧಿ ಹೇಳಿಕೆ ನೀಡುವುದು ಚಟವಾಗಿದೆ ಎಂದು ಆರೋಪಿಸಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿತ್ತು. "ನನ್ನನ್ನು ದೇಶವಿರೋಧಿ ಎಂದು ಹೇಳಿರುವ ಯತ್ನಾಳ್ ಅವರ ಹೇಳಿಕೆಯಿಂದ ನನಗೆ ನೋವಾಗಿದೆ" ಎಂದು ಆರೋಪಿಸಿ ತಬಸ್ಸುಮ್ ಅವರು, ಯತ್ನಾಳ್ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ಈ ದೂರನ್ನು ಪರಿಗಣಿಸಿರುವ ನ್ಯಾಯಾಲಯವು ಆರೋಪಿ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಲು ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿ ಯತ್ನಾಳ್ ಹೈಕೋರ್ಟ್ ಮೆಟ್ಟಿಲೇರಿದ್ದರು.