ಬೆಂಗಳೂರು: ವನ್ಯಜೀವಿ ತಜ್ಞ ಉಲ್ಲಾಸ್ ಕಾರಂತರ ಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್ ಸಂಸ್ಥೆಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ 2010ರ ಅಡಿ ನೀಡಲಾಗಿದ್ದ ನೋಂದಣಿ ಪ್ರಮಾಣ ಪತ್ರವನ್ನು ಟ್ರಸ್ಟ್ ವಾದ ಆಲಿಸದೇ ರದ್ದುಗೊಳಿಸಿದ್ದ ಕೇಂದ್ರ ಗೃಹ ಇಲಾಖೆಯ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಟ್ರಸ್ಟ್ ಪರವಾಗಿ ಉಲ್ಲಾಸ್ ಕಾರಂತ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಶುಕ್ರವಾರ ಈ ಆದೇಶ ನೀಡಿದೆ.
ಅಲ್ಲದೆ, ನೋಂದಣಿ ಪತ್ರವನ್ನು ರದ್ದುಗೊಳಿಸುವುದಕ್ಕೂ ಮುನ್ನ ಪ್ರತಿವಾದಿಗಳ ಅಭಿಪ್ರಾಯವನ್ನು ಕೇಳಬೇಕು ಎಂಬುದಾಗಿ ಕಾಯಿದೆಯಲ್ಲಿ ತಿಳಿಸಲಾಗಿದೆ. ಇದಕ್ಕೆ ಶೋಕಾಸ್ ನೋಟಿಸ್ ನೀಡಿದರೆ ಸಾಕಾಗುವುದಿಲ್ಲ. ಬದಲಿಗೆ ಅವರ ಮನವಿ ಆಲಿಸಿ ಮುಂದಿನ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಪೀಠ ತಿಳಿಸಿದೆ.
ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ 2010ರ ಸೆಕ್ಷನ್ 14(3)ರ ಪ್ರಕಾರ ಒಂದು ಬಾರಿ ನೋಂದಣಿ ಪತ್ರ ರದ್ದಾದಲ್ಲಿ ಬಳಿಕ ಮೂರು ವರ್ಷಗಳ ಕಾಲ ಅದನ್ನು ಪಡೆದುಕೊಳ್ಳುವುದಕ್ಕೆ ಅವಕಾಶವಿಲ್ಲ ಎಂಬುದಾಗಿ ಹೇಳಲಾಗಿದೆ. ಹೀಗಾಗಿ ಗಂಭೀರವಾದ ಆರ್ಥಿಕ ಪರಿಣಾಮಗಳಿಗೆ ಕಾರಣವಾಗಲಿದೆ. ಆದ್ದರಿಂದ ಸೆಕ್ಷನ್ 14(2)ರ ಪ್ರಕಾರ ಪ್ರತಿವಾದಿಗಳ ಅಭಿಪ್ರಾಯವನ್ನು ಆಲಿಸಬೇಕು ಎಂಬ ನೈಸರ್ಗಿಕ ನ್ಯಾಯದ ಅಂಶವನ್ನು ಪರಿಗಣಿಸಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರರ ವಾದವನ್ನು ಆಲಿಸದೇ ನೀಡಿರುವ ಆದೇಶವು ಸಮರ್ಥನೀಯವಲ್ಲ ಎಂದು ತಿಳಿಸಿರುವ ಪೀಠ, ನೋಂದಣಿ ರದ್ದುಪಡಿಸಿರುವ ಕೇಂದ್ರ ಗೃಹ ಇಲಾಖೆಯ ಆದೇಶವನ್ನು ರದ್ದುಗೊಳಿಸಿ ಆದೇಶಿಸಿದೆ. ಆದರೆ, ಕಾನೂನಿನ ಪ್ರಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಕೇಂದ್ರಕ್ಕೆ ಸ್ವಾತಂತ್ರ್ಯವಿರಲಿದೆ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್, ವನ್ಯಜೀವಿಗಳು, ನೈಸರ್ಗಿಕ ಆವಾಸ ಸ್ಥಾನಗಳ ಕುರಿತು ವೈಜ್ಞಾನಿಕವಾಗಿ ಅಧ್ಯಯನ ಮತ್ತು ಸಂರಕ್ಷಣೆಗೆ ಸಂಬಂಧಿಸಿ ಶ್ರಮಿಸುತ್ತಿದೆ. ಅಲ್ಲದೇ, ಅಳಿವಿನಂಚಿನಲ್ಲಿರುವ ಪ್ರಾಣಿಗಳು, ಪರಿಸರ ವ್ಯವಸ್ಥೆ ಮತ್ತು ಸಸ್ಯಗಳ ಪುನರ್ವಸತಿ ಯೋಜನೆಗಳನ್ನು ಕೈಗೊಳ್ಳುತ್ತಿದೆ. ಈ ಟ್ರಸ್ಟ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ವಿಜ್ಞಾನಿಗಳು ಅಂತಾರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಈ ಟ್ರಸ್ಟ್‌ನ ನಿರ್ವಹಣೆಗಾಗಿ ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ 2010ರ ಅಡಿ ನೋಂದಾಯಿಸಿಕೊಂಡಿದೆ. ಆದರೆ, ಟ್ರಸ್ಟ್‌ಗೆ ಬರುವ ದೇಣಿಗೆಗಳನ್ನು ಸ್ವೀಕರಿಸುವುದು ಮತ್ತು ನಿರ್ವಹಣೆ ಮಾಡುವ ಸಲುವಾಗಿ ಪ್ರಾರಂಭಿಸಿದ್ದ ಬ್ಯಾಂಕ್ ಖಾತೆ ಬದಲಾವಣೆಗಾಗಿ ಅನುಮತಿ ಕೇಳಿ 2021ರಲ್ಲಿ ಕೇಂದ್ರ ಸರ್ಕಾರಕ್ಕೆ ಸಂಸ್ಥೆಯಿಂದ ಅರ್ಜಿ ಸಲ್ಲಿಸಲಾಗಿತ್ತು. ಅದರಂತೆ ಟ್ರಸ್ಟ್‌ಗೆ ಬರುತ್ತಿರುವ ದೇಣಿಗೆಯಲ್ಲಿ ಶೇ.20 ರಷ್ಟು ಹಣವನ್ನು ಕಚೇರಿ ವೆಚ್ಚಗಳಿಗಾಗಿ ವಿನಿಯೋಗಿಸಲು ಪ್ರತ್ಯೇಕ ಖಾತೆ ನಿರ್ವಹಣೆ ಮಾಡುತ್ತಿರುವುದಾಗಿ ಟ್ರಸ್ಟ್ ತಿಳಿಸಿತ್ತು.
ಆದರೆ, ವಿದೇಶಿ ದೇಣಿಗೆ ದುರುಪಯೋಗದ ಆರೋಪದಲ್ಲಿ ಕೇಂದ್ರ ಸರ್ಕಾರ 2021ರ ಮಾರ್ಚ್ 21ರಂದು ಟ್ರಸ್ಟ್‌ನ್ನು ಆರು ತಿಂಗಳ ಅವಧಿಗೆ ಅಮಾನತು ಮಾಡಿ ಆದೇಶಿಸಲಾಗಿತ್ತು. ಈ ಆದೇಶಕ್ಕೆ ಪ್ರತಿಯಾಗಿ ಅರ್ಜಿದಾರರು ವಿವರವಾದ ಪ್ರತಿಕ್ರಿಯೆಯನ್ನು ನೀಡಿದ್ದರು. ಬಳಿಕ ಕೇಂದ್ರ ಸರ್ಕಾರ ಟ್ರಸ್ಟ್‌ನ ನೋಂದಣಿಯನ್ನು ಏಕೆ ರದ್ದುಗೊಳಿಸಬಾರದು ಎಂದು ಕಾರಣ ಕೇಳಿ ಅರ್ಜಿದಾರ ಸಂಸ್ಥೆಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಈ ಕುರಿತು ಟ್ರಸ್ಟ್ ವಿವರವಾದ ಪ್ರತಿಕ್ರಿಯೆ ನೀಡಿದ್ದರೂ ಪರಿಗಣಿಸದೇ ಟ್ರಸ್ಟ್‌ನ ನೋಂದಣಿಯನ್ನು ರದ್ದುಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಟ್ರಸ್ಟ್ ಹೈಕೋರ್ಟ್ ಮೆಟ್ಟಿಲೇರಿತ್ತು.
ಇದನ್ನೂ ಓದಿ: ಸರ್ಕಾರದ ಪ್ರಾಧಿಕಾರಗಳು, ಅಧಿಕಾರಿಗಳು ಕನ್ನಡ ಭಾಷೆ ಬಳಸಿ ಪ್ರೋತ್ಸಾಹಿಸಬೇಕು: ಹೈಕೋರ್ಟ್ - Kannada Language