ಹಾವೇರಿ: ಸರ್ಕಾರಿ ಕರ್ತವ್ಯದಲ್ಲಿ ಹಲವು ಲೋಪಗಳ ಆರೋಪ ಹಿನ್ನೆಲೆಯಲ್ಲಿ ಹಾವೇರಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಹೆಗಡೆ ಅವರನ್ನು ಸರ್ಕಾರಿ ಸೇವೆಯಿಂದ ಅಮಾನತು ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಬಾಲಪ್ಪ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಹಾವೇರಿ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಹೆಗಡೆ ಅವರನ್ನು ಆಡಳಿತಾತ್ಮಕ ಹಿತದೃಷ್ಠಿಯಿಂದ ದಾಂಡೇಲಿ ತಾಲೂಕು ಪಂಚಾಯತ್ ಇಒ ಎಂದು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಜು.30ರಂದು ಬಿಡುಗಡೆ ಮಾಡಲಾಗಿತ್ತು. ಅವರ ಹುದ್ದೆಗೆ ಸವಣೂರ ತಾ.ಪಂ ಇಒ ನವೀನ ಪ್ರಸಾದ ಅವರಿಗೆ ಹೆಚ್ಚುವರಿ ಪ್ರಭಾರದ ಜವಾಬ್ದಾರಿ ನೀಡಿ ಆದೇಶಿಸಲಾಗಿತ್ತು.
ಆದರೆ ಭರತ್ ಹೆಗಡೆ ತಮ್ಮ ವರ್ಗಾವಣೆ ಆದೇಶಕ್ಕೆ ಕರ್ನಾಟಕ ಆಡಳಿತ ನ್ಯಾಯಮಂಡಳಿಯಿಂದ ತಡೆಯಾಜ್ಞೆ ತಂದು ಇದರ ಮಾಹಿತಿಯನ್ನು ಮೇಲಧಿಕಾರಿಗಳ ಗಮನಕ್ಕ ತರದೇ ಆ.1ರಂದು ಮತ್ತೆ ಹಾವೇರಿ ತಾ.ಪಂ ಇಒ ಹುದ್ದೆಗೆ ಸ್ವಯಂ ವರದಿ ಮಾಡಿಕೊಂಡಿದ್ದರು.
ಅಲ್ಲದೇ ಜಿಲ್ಲೆಯಲ್ಲಿ ಮಳೆಯಿಂದ ವಿವಿಧ ಹಾನಿ ಮತ್ತು ಸಮಸ್ಯೆಗಳು, ಪ್ರಕೃತಿ ವಿಕೋಪ ಸಂಭವಿಸಿದಾಗ್ಯೂ ಕೇಂದ್ರಸ್ಥಾನದಲ್ಲಿ ಇರದೇ ಇರುವುದರಿಂದ ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ವಿಷಾಧ ವ್ಯಕ್ತಪಡಿಸಿದ್ದರು.
ಇಷ್ಟೇ ಅಲ್ಲದೆ ಈ ಹಿಂದೆ ಅಂದರೆ 2023ರ ನವೆಂಬರ್ 7ರಂದು ನಡೆದ ಜಿಲ್ಲಾಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಗೂ ಪೂರ್ವಾನುಮತಿ ಇಲ್ಲದೇ ಗೈರಾಗಿದ್ದರು. ಇದಕ್ಕೆ ಕಾರಣ ಕೇಳಿ ನೋಟಿಸ್ ನೀಡಿದಾಗ್ಯೂ, ಸಮಂಜಸ ಉತ್ತರ ನೀಡಿಲ್ಲ. ಈ ಎಲ್ಲಾ ಕಾರಣಗಳನ್ನು ಪರಿಗಣಿಸಿ ಬೇಜವಾಬ್ದಾರಿ ವರ್ತನೆ, ಸರ್ಕಾರಿ ನೌಕರರಿಗೆ ತರವಲ್ಲದ ದುರ್ನಡತೆ ತೋರಿದ್ದಾರೆ ಆರೋಪ ಕೇಳಿಬಂದಿತ್ತು. ಅವರ ಮೇಲೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಸರ್ಕಾರಿ ಸೇವೆಯಿಂದ ಅಮಾನತು ಮಾಡಿ ಆದೇಶಿಸಲಾಗಿದೆ.
ಇದನ್ನೂ ಓದಿ: ಸಾಧಕ ಕ್ರೀಡಾ ಪಟುಗಳಿಗೆ ವಿವಿಧ ಇಲಾಖೆ ನೇಮಕಾತಿಗೆ ಆಫರ್ ಲೆಟರ್ ವಿತರಿಸಿದ ಸಿಎಂ - offer letter to sports achievers