ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಖಾನಾಪೂರ ತಾಲೂಕಿನ ಹಬ್ಬಾನಹಟ್ಟಿ ಗ್ರಾಮದಲ್ಲಿರುವ ಸ್ವಯಂಭೋ ಮಾರುತಿ ದೇವಸ್ಥಾನ ಮಲಪ್ರಭಾ ನದಿ ನೀರಿನಲ್ಲಿ ಮುಳುಗಡೆಯಾಗಿದೆ.
ಈ ದೇವಸ್ಥಾನಕ್ಕೆ ನಿತ್ಯ ನೂರಾರು ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. ಆದರೆ, ಕಳೆದ ಮೂರು ದಿನಗಳಿಂದ ಘಟ್ಟ ಪ್ರದೇಶದಲ್ಲಿ ಅಬ್ಬರಿಸುತ್ತಿರುವ ಮಳೆಯಿಂದಾಗಿ ಮಲಪ್ರಭಾ ನದಿ ಉಕ್ಕಿ ರಭಸವಾಗಿ ಹರಿಯುತ್ತಿದೆ. ನದಿ ತಟದಲ್ಲೇ ಇರುವ ಹನುಮಾನ್, ಈಶ್ವರ ಮಂದಿರಗಳು ಸಂಪೂರ್ಣವಾಗಿ ಮುಳುಗಿವೆ.
ಈ ಹಿನ್ನೆಲೆಯಲ್ಲಿ ಪೂಜಾ ಕೈಂಕರ್ಯಗಳು ಸ್ಥಗಿತಗೊಂಡಿವೆ. ದೇವರ ದರ್ಶನ ಸಿಗದೆ ಭಕ್ತರಿಗೆ ನಿರಾಸೆಯಾಗಿದೆ. ಭಕ್ತರು ದೂರದಲ್ಲೇ ನಿಂತು ದರ್ಶನ ಪಡೆಯುತ್ತಿದ್ದಾರೆ. ಅರ್ಚಕರು ಮೇಲ್ಭಾಗದಲ್ಲೇ ನಿಂತು ಪೂಜೆ ಸಲ್ಲಿಸುತ್ತಿದ್ದಾರೆ.
ಮಲಪ್ರಭಾ ನದಿಗೆ ಸವದತ್ತಿ ತಾಲೂಕಿನ ಮುನವಳ್ಳಿ ಬಳಿ ಅಡ್ಡಲಾಗಿ ನಿರ್ಮಿಸಿರುವ ನವೀಲುತೀರ್ಥ ಜಲಾಶಯಕ್ಕೆ 9,129 ಕ್ಯೂಸೆಕ್ ನೀರು ಒಳ ಹರಿವಿದ್ದು, 194 ಕ್ಯೂಸೆಕ್ ಹೊರ ಹರಿವಿದೆ.
ಜಲಾಶಯದ ಗರಿಷ್ಠ ನೀರಿನ ಮಟ್ಟ- 37.73 ಟಿಎಂಸಿ, ಇಂದಿನ ಮಟ್ಟ- 3.72 ಟಿಎಂಸಿ ಇತ್ತು.
ನಿರಂತರ ಮಳೆಯಿಂದಾಗಿ ಖಾನಾಪುರ ತಾಲೂಕಿನ ಜಲಪಾತಗಳಿಗೂ ಜೀವಕಳೆ ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ 10ಕ್ಕೂ ಅಧಿಕ ಜಲಪಾತಗಳಿಗೆ ಪ್ರವಾಸಿಗರ ಭೇಟಿಗೆ ಜಿಲ್ಲಾಡಳಿತ ಕಡಿವಾಣ ಹಾಕಿದೆ.
ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಧಾರಾಕಾರ ಮಳೆ: ಉಕ್ಕಿದ ನದಿಗಳು, ಹಲವೆಡೆ ಸಂಚಾರ ಬಂದ್ - Uttara Kannada Rain