ಮೈಸೂರು : ಮಂಡ್ಯದಲ್ಲಿ ನಾನು ಗೆಲ್ತಿನೋ ಇಲ್ಲವೋ ಎಂದು ಜನ ತೀರ್ಮಾನ ಮಾಡುತ್ತಾರೆ. ನನ್ನನ್ನ ಮಂಡ್ಯದ ಜನ ಒತ್ತಡ ಹಾಕಿ ನಿಲ್ಲಿಸಿದ್ದಾರೆ. ಇದಕ್ಕೆ ಮಂಡ್ಯದ ಜನ ರಾಜಕೀಯವಾಗಿ ನನಗೆ ಶಕ್ತಿ ತುಂಬುತ್ತಾರೆ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಜಾಣ್ಮೆಯ ಉತ್ತರವನ್ನು ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಅವರು ನೀಡಿದರು.
ಇಂದು ಮೈಸೂರಿಗೆ ಆಗಮಿಸಿದ ಹೆಚ್. ಡಿ ಕುಮಾರಸ್ವಾಮಿ ಮೈಸೂರಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ನ ಮೊದಲ ಕೋರ್ ಕಮಿಟಿ ಸಭೆಗೆ ಆಗಮಿಸುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದರು. ಲೋಕಸಭೆ ಚುನಾವಣೆಯ ಪ್ರಕ್ರಿಯೆಗಳು ಆರಂಭವಾಗಿದೆ. ಬಿಜೆಪಿ ಜೆಡಿಎಸ್ ಮೈತ್ರಿಯ ಪ್ರಕ್ರಿಯೆಗಳು ಶುರುವಾಗಿದ್ದು, ತಾಯಿ ಚಾಮುಂಡೇಶ್ವರಿಯ ಸನ್ನಿಧಾನದಲ್ಲಿ ಮೈತ್ರಿಯ ಮೊದಲ ಸಮನ್ವಯ ಸಭೆ ಮಾಡುತ್ತಿದ್ದೇವೆ. ತಾಯಿ ಆಶೀರ್ವಾದದಿಂದ ಯಾವುದೇ ವಿಶ್ವಾಸ ಕೊರತೆ ಇಲ್ಲದೆ 28ಕ್ಕೆ 28 ಸ್ಥಾನ ಗೆಲ್ಲಲು ಗುರಿ ಇಟ್ಟುಕೊಂಡಿದ್ದು. ಇಲ್ಲಿ ತಾಯಿ ಸನ್ನಿದಾನದಿಂದ ಪ್ರಾರಂಭ ಮಾಡಿದ್ದಾರೆ. ಒಳ್ಳೆಯ ಫಲಿತಾಂಶ ಬರುತ್ತದೆ ಎಂದರು.
ಸಿಎಂ ಹೇಳಿಕೆಗೆ ತಿರುಗೇಟು : ಜೆಡಿಎಸ್ ಬಿಜೆಪಿ ಮೈತ್ರಿ ಕಾಂಗ್ರೆಸ್ಗೆ ವರದಾನವಾಗುತ್ತದೆ ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಹೆಚ್ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಅದೇ ಗುಂಗಿನಲ್ಲಿ ಇರಲಿ. ಚುನಾವಣೆ ಫಲಿತಾಂಶ ಬರಲಿದೆಯೇ? ಅವರಿಗೆ ಏನೆಂದು ಗೊತ್ತಾಗಲಿದೆಯೇ? ಎಂದರು. ಮಂಡ್ಯದಲ್ಲಿ ಹೆಚ್ಡಿಕೆ ಸೋಲುವುದು ಖಚಿತ ಎಂಬ ಸಿಎಂ ಹೇಳಿಕೆಗೆ ಇದೇ ಸಂದರ್ಭದಲ್ಲಿ ತಿರುಗೇಟು ನೀಡಿದ ಅವರು, ಸಿಎಂ ಹೊರಗೂ, ಒಳಗೂ, ಏನು ಬೇಕಾದರೂ ಪ್ಲೆ ಮಾಡಿಕೊಳ್ಳಲಿ. ಮಂಡ್ಯದ ಜನರು ನನಗೆ ಒತ್ತಡ ಹಾಕಿದ್ದಾರೆ. ನಾನು ಒಬ್ಬ ಕನ್ನಡಿಗ. ರಾಜಕೀಯವಾಗಿ ಶಕ್ತಿ ತುಂಬುವುದು ಮಂಡ್ಯ ಜಿಲ್ಲೆ ಎಂದರು.
ಕಳೆದ ಬಾರಿ ಮಗನ ಸೋಲಿಗೆ ಕಾಂಗ್ರೆಸ್ ಅವರ ಪಾಲು ಇದೆ. ನಾವು ಅವರ ಜೊತೆ ಇದ್ದೆವು. ಆ ವಿಚಾರ ಅವರಿಗೆ ಎಲ್ಲಾ ಗೊತ್ತಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಮೈಸೂರಿನಲ್ಲಿ ಸೋಲಲಿಲ್ಲವಾ ಎಂದು ಪ್ರಶ್ನೆ ಮಾಡಿದ ಹೆಚ್ಡಿಕೆ, ನನ್ನ ಗೆಲುವು, ಸೋಲಿಗೆ ಜನರು ಉತ್ತರ ಕೊಡುತ್ತಾರೆ. ಮಂಡ್ಯದಲ್ಲಿ ಜನರು ಈ ಬಗ್ಗೆ ಯೋಚನೆ ಮಾಡಬೇಕು. ಮಂಡ್ಯ ರೈತರ ಬಗ್ಗೆ ಈ ಸರ್ಕಾರಕ್ಕೆ ಸ್ವಲ್ಪವೂ ಜವಾಬ್ದಾರಿ ಇಲ್ಲ. ಕೆಆರ್ಎಸ್ನಲ್ಲಿ ಇದ್ದ ನೀರನ್ನ ತಮಿಳುನಾಡಿಗೆ ಬಿಟ್ಟು, ಇಲ್ಲಿಯ ಜನರಿಗೆ ಹಾಗೂ ಜಾನುವಾರುಗಳಿಗೆ ನೀರು ಇಲ್ಲ ಎಂದು ಕೈ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.
ಜೆಡಿಎಸ್ ಎಲ್ಲಿದೆ ಎಂಬ ಡಿಕೆಶಿ ಪ್ರಶ್ನೆಗೆ ಹೆಚ್ಡಿಕೆ ತಿರುಗೇಟು : ರಾಜ್ಯದಲ್ಲಿ ಜೆಡಿಎಸ್ ಎಲ್ಲಿ ಇದೆ ಎಂಬ ಡಿ. ಕೆ ಶಿವಕುಮಾರ್ ಪ್ರಶ್ನೆಗೆ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ. ಮೊದಲು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ವ್ಯಕ್ತವಾಗಿರುವ ಪ್ರವಾಹ ತಡೆಯಿರಿ. ಮಂಜುನಾಥ್ ಜೆಡಿಎಸ್ನಿಂದ ಸ್ಪರ್ಧೆ ಮಾಡಿದರು ಅಥವಾ ಬಿಜೆಪಿಯಿಂದ ಸ್ಪರ್ಧೆ ಮಾಡಿದರು ಎಂಬುದು ಪ್ರಶ್ನೆ ಅಲ್ಲ. ಈಗ ಬಿಜೆಪಿ ಜೆಡಿಎಸ್ ಎರಡೂ ಒಂದೇ. ಎಲ್ಲಿ ನಿಂತರೆ ಏನು? ಸೋಲುವ ಭಯದಿಂದ ಈಗಾಗಲೇ ಕುಕ್ಕರ್ ಹಂಚಿ, ದುಡ್ಡು ಹಂಚುತ್ತಿದ್ದಾರೆ. ಸೋಲಿನ ಭಯ ಕಾಂಗ್ರೆಸ್ ಅವರಿಗೆ ಕಾಡುತ್ತಿದೆ ಎಂದು ತಿರುಗೇಟು ನೀಡಿದರು.
ಮೊದಲ ಜೆಡಿಎಸ್ ಬಿಜೆಪಿ ಕೋರ್ ಕಮಿಟಿ ಸಭೆ : ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ಜೆಡಿಎಸ್ನ ಮೊದಲ ಕೋರ್ ಕಮಿಟಿ ಸಭೆ ನಡೆದಿದೆ. ಈ ಸಭೆಯಲ್ಲಿ ಹೆಚ್. ಡಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ, ಶಾಸಕ ಜಿ ಟಿ ದೇವೇಗೌಡ, ಬಿಜೆಪಿ ಮಾಜಿ ಸಚಿವ ಅಶ್ವತ್ಥ್ ನಾರಾಯಣ, ಸಂಸದ ಪ್ರತಾಪ್ ಸಿಂಹ, ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಹಾಗೂ ಸ್ಥಳೀಯ ಶಾಸಕರು ಸೇರಿದಂತೆ ಎರಡು ಪಕ್ಷದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.