ಬೆಂಗಳೂರು: ಒಳಮೀಸಲಾತಿ ಹಂಚಿಕೆಯಾಗುವವರೆಗೆ ಕೆಎಎಸ್ ನೇಮಕಾತಿ ಪರೀಕ್ಷೆ ಅಧಿಸೂಚನೆಯನ್ನು ಹಿಂಪಡೆಯಬೇಕು ಎಂದು ಮಾಜಿ ಸಚಿವ ಹೆಚ್.ಆಂಜನೇಯ ಆಗ್ರಹಿಸಿದ್ದಾರೆ.
ಒಳಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ವಿಚಾರವಾಗಿ ವಿಧಾನಸೌಧದಲ್ಲಿಂದು ಜಂಟಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಒಳಮೀಸಲಾತಿ ನೀಡಲು ರಾಜ್ಯಗಳಿಗೆ ಸಂವಿಧಾನಾತ್ಮಕವಾಗಿ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪನ್ನು ನಾವು ಸ್ವಾಗತಿಸುತ್ತೇವೆ.
ಧೈರ್ಯವಾಗಿ ಯಾರೂ ಒಳ ಮೀಸಲಾತಿ ಬಗ್ಗೆ ಮಾತನಾಡಲು ತಯಾರಿದ್ದಿಲ್ಲ. ಸದಾಶಿವನಗರ ವರದಿ ಕೈಯ್ಯಲ್ಲಿದ್ದರೂ ಅದನ್ನು ಜಾರಿ ಮಾಡಲು ಸಾಧ್ಯವಾಗಿಲ್ಲ. ಕೆಲವರು ತಕರಾರು ತೆಗೆದರು. ಆಗ ಸಿದ್ದರಾಮಯ್ಯ ಒಳಮೀಸಲಾತಿ ಕೊಟ್ಟರೆ ನಿಮಗೆ ಏನು ಕಷ್ಟ ಎಂದು ಪ್ರಶ್ನಿಸಿದರು. ಒಳ ಮೀಸಲಾತಿಗೆ ನಾವು ಬದ್ಧರಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದರು.
ಸರ್ಕಾರ ಒಳಮೀಸಲಾತಿ ಬಗ್ಗೆ ಶೀಘ್ರ ಸುಗ್ರೀವಾಜ್ಞೆ ಹೊರಡಿಸಬೇಕು. ಕೆಪಿಎಸ್ಸಿ ಅವರು ಕೆಎಎಸ್ ಪರೀಕ್ಷೆಗೆ ಅಧಿಸೂಚನೆ ಹೊರಡಿಸಿದ್ದಾರೆ. ಆ ಅಧಿಸೂಚನೆಯನ್ನು ವಾಪಸ್ ಪಡೆಯಬೇಕು. ಒಳ ಮೀಸಲಾತಿ ಹಂಚಿಕೆಯಾಗುವವರೆಗೆ ಅಧಿಸೂಚನೆ ತಡೆಹಿಡಿಯಬೇಕು. ಒಳ ಮೀಸಲಾತಿ ಹಂಚಿಕೆಯಾಗುವವರೆಗೆ ಎಸ್ಸಿಪಿ ಟಿಎಸ್ಪಿ ಅನುದಾನವನ್ನು ತಡೆ ಹಿಡಿಯಬೇಕು. ಎಲ್ಲಾ ಯೋಜನೆಗಳನ್ನು ಒಳ ಮೀಸಲಾತಿ ಹಂಚಿಕೆಯಾಗುವವರೆಗೆ ತಡೆ ಹಿಡಿಯಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ಸಚಿವ ಕೆ.ಹೆಚ್.ಮುನಿಯಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಐತಿಹಾಸಿಕ ತೀರ್ಪನ್ನು ಸ್ವಾಗತಿಸಿದ್ದಾರೆ ಹಾಗೂ ಒಳಮೀಸಲಾತಿ ಕಲ್ಪಿಸುವ ಕುರಿತು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ಶಿಫಾರಸುಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ, ಇತ್ತೀಚಿನ ಬೆಳವಣಿಗೆಗಳನ್ನು ಪರಿಗಣನೆಗೆ ತೆಗೆದುಕೊಂಡು ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಕುರಿತು ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ, ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿ ಬಡವರ, ತುಳಿತಕ್ಕೆ ಒಳಗಾದವರ, ಅಸಹಕಾರ, ಧ್ವನಿ ಇಲ್ಲದವರ ಪರವಾಗಿ ತನ್ನ ಸಿದ್ಧಾಂತ ಮತ್ತು ಬದ್ಧತೆಯನ್ನು ಅನುಷ್ಠಾನ ಮಾಡುತ್ತಾ ಬಂದಿದೆ. ನಾವು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢವಾಗಿ ಬದುಕಲು ಅವಕಾಶ ಕಲ್ಪಿಸಿದ್ದೇವೆ. ಈ ವಿಷಯದ ಕುರಿತು ಬೇಗನೆ ಸಿಎಂ ಮತ್ತು ಉಪ ಮುಖ್ಯಮಂತ್ರಿಗಳ ಹಾಗೂ ಸಂಪುಟದ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ, ಶೀಘ್ರದಲ್ಲಿಯೇ ನಮ್ಮ ಸರ್ಕಾರ ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಒಳಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪಿನಂತೆ ಸೂಕ್ತ ಕ್ರಮ: ಸಿಎಂ ಸಿದ್ದರಾಮಯ್ಯ - CM Siddaramaiah