ಬೆಳಗಾವಿ: ''ಚಿಕ್ಕೋಡಿಯಲ್ಲಿ ಪ್ರಿಯಾಂಕಾ ವರ್ಸಸ್ ಮೋದಿ ಇಲ್ಲ. ಅಲ್ಲಿ ಮೋದಿ ಪಾತ್ರ ಇಲ್ಲವೇ ಇಲ್ಲ. ಏನಿದ್ದರೂ ಜೊಲ್ಲೆ ವರ್ಸಸ್ ಪ್ರಿಯಾಂಕಾ ಮತ್ತು ಅಭಿವೃದ್ಧಿ ಮೇಲೆ ಚುನಾವಣೆ ನಡೆಯಲಿದೆ'' ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ''ಗ್ಯಾರಂಟಿ ವರ್ಕೌಟ್ ಆಗೋದಿಲ್ಲ ಎಂಬ ಅಣ್ಣಾಸಾಹೇಬ ಜೊಲ್ಲೆ ಹೇಳಿಕೆಗೆ ವರ್ಕೌಟ್ ಯಾಕೆ ಆಗೋದಿಲ್ಲ. ಒಂದು ಬಡ ಕುಟುಂಬಕ್ಕೆ ಪ್ರತಿ ತಿಂಗಳು 4 ಸಾವಿರ ರೂ. ಕೊಡುತ್ತೇವೆ. ಇದರಲ್ಲಿ ಅವರ ಜೀವನ ನಡೆಯುತ್ತದೆ. ಗಂಡ ತೀರಿ ಹೋಗಿರುತ್ತಾರೆ, ಮಕ್ಕಳು ಇರೋದಿಲ್ಲ, ಎಷ್ಟೋ ಕಡೆ ತಂದೆ- ತಾಯಿಯನ್ನು ಮಕ್ಕಳು ಹೊರಗೆ ಇಟ್ಟಿರುತ್ತಾರೆ. ಅಂಥವರಿಗೆ ಇದಕ್ಕಿಂತ ದೊಡ್ಡ ಸಹಾಯ ಮತ್ತೊಂದು ಯಾವುದಿದೆ. ಬಿಜೆಪಿಯವರು 10 ವರ್ಷಗಳಿಂದ ಸುಳ್ಳು ಹೇಳುತ್ತಾ ಬಂದಿದ್ದಾರೆ'' ಎಂದು ತಿರುಗೇಟು ಕೊಟ್ಟಿದ್ದಾರೆ.
''ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಚುನಾವಣೆಯಲ್ಲಿ ನಮಗೆ ಲಾಭವಾಗುತ್ತದೆ. ಮಹಿಳೆಯರು ಸಾಕಷ್ಟು ಉತ್ಸಾಹದಲ್ಲಿದ್ದಾರೆ. ಗ್ಯಾರಂಟಿ ಯೋಜನೆಯನ್ನು ಜನರು ನೆನಪು ಮಾಡಿಕೊಂಡು ಕಾಂಗ್ರೆಸ್ಗೆ ಮತ ಹಾಕುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ'' ಎಂದರು. ಬಿಜೆಪಿಯವರು ಕಾಂಗ್ರೆಸ್ಗೆ ಗ್ಯಾರಂಟಿ ಇದ್ದರೆ ನಮಗೆ ಮೋದಿ ಗ್ಯಾರಂಟಿ ಎಂದು ಪ್ರಚಾರ ನಡೆಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ''ಮೋದಿಯವರದ್ದು ಯಾವುದೇ ಯೋಜನೆ ಇಲ್ಲ. ಮೋದಿ ಅವರ ಗ್ಯಾರಂಟಿ ಜನರಿಗೆ ಅನುಕೂಲವಾಗುವ ಗ್ಯಾರಂಟಿ ಯಾವುದಾದರೂ ಇದೆಯಾ'' ಎಂದು ಪ್ರಶ್ನಿಸಿದರು.
''ಚಿಕ್ಕೋಡಿಯಲ್ಲಿ ಬಿಜೆಪಿ ಸಂಸದರ ವಿರುದ್ಧ ಅಸಮಾಧಾನ ಇದೆ. ನಾವು ಪ್ರಚಾರಕ್ಕೆ ಹೋದಾಗ ಜನರು ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿ ಸಂಸದರಾಗಿ ಕ್ಷೇತ್ರದ ಸಂಚಾರ ಮಾಡಿಲ್ಲ. ಕೇಂದ್ರ ಸರ್ಕಾರದ ಯೋಜನೆಯನ್ನು ನಾನು ಮಾಡಿದ್ದೇನೆ ಎಂದಿದ್ದಾರೆ. ಅದು ಬಿಟ್ಟರೆ ಅವರ ಕಾರ್ಯಕರ್ತರ ಜೊತೆಗೆ ಬಿಜೆಪಿ ಅಭ್ಯರ್ಥಿ ಸಂಪರ್ಕ ಕಡಿಮೆ ಇದೆ. ಆಡಳಿತ ವಿರೋಧಿ ಅಲೆ ಇರುವುದು ಮಾತ್ರ ಸತ್ಯ'' ಎಂದು ಜಾರಕಿಹೊಳಿ ಹೇಳಿದರು.
ಈ ಬಾರಿಯೂ ರಾಹು ಕಾಲದಲ್ಲಿ ನಾಮಪತ್ರ ಸಲ್ಲಿಸುತ್ತಿರಾ ಎಂಬ ಪ್ರಶ್ನೆಗೆ, ''ಒಳ್ಳೆಯ ಮತ್ತು ಕೆಟ್ಟ ಕಾಲ ಅಂತಾ ಎಲ್ಲಿಯೂ ಇರೋದಿಲ್ಲ. ಒಳ್ಳೆಯದು ಮಾಡಿದರೆ ಒಳ್ಳೆಯದು. ಕೆಟ್ಟದ್ದು ಮಾಡಿದರೆ ಕೆಟ್ಟದ್ದು. ಹಾಗಾಗಿ, ಎಲ್ಲ ಶಾಸಕರು ಯಾವಾಗ ಫ್ರೀ ಇರುತ್ತಾರೆ ಅನ್ನೋದನ್ನು ನೋಡಿಕೊಂಡು ತೀರ್ಮಾನ ಮಾಡಬೇಕಾಗುತ್ತದೆ. ಇನ್ನು ಬೇರೆ ಬೇರೆ ಕಡೆ ನಾಮಿನೇಶನ್ ಮಾಡಲು ಹೋಗಬೇಕಾಗುತ್ತದೆ'' ಎಂದರು.
ಪುಲ್ವಾಮಾ ದಾಳಿಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ ಅವರು, ''ಆ ಆರೋಪ ಇದ್ದೇ ಇದೆ. ಅದರ ಬಗ್ಗೆ ಬಹಳಷ್ಟು ಆರೋಪಗಳು ಕೇಳಿ ಬಂದಿವೆ. ಈ ಆರೋಪ ಹೀಗೆ ಮುಂದುವರಿಯಲಿದೆ. ಇಡಿ, ಐಟಿ ಅಧಿಕಾರಿಗಳ ಮೂಲಕ ವಿರೋಧ ಪಕ್ಷಗಳನ್ನು ಬಿಜೆಪಿ ಹೆದರಿಸುತ್ತಿದೆ ಎಂಬ ಪ್ರಶ್ನೆಗೆ ಇದೇನು ಹೊಸದಲ್ಲ. ಕಳೆದ ಐದು ವರ್ಷಗಳಿಂದ ಇದು ಹೆಚ್ಚಾಗಿದೆ. ಯಾರ್ಯಾರ ಮೇಲೆ ಅವರು ಆರೋಪ ಮಾಡಿದ್ದರು. ಅವರು ಬಿಜೆಪಿ ಸೇರಿದ ಮೇಲೆ ಅಷ್ಟಕ್ಕೆ ಸ್ಥಗಿತಗೊಳಿಸಲಾಗಿದ್ದು, ತನಿಖೆ ಮಾಡಿಲ್ಲ. ಯಾರು ಹೊಸಬರಿದ್ದಾರೆ, ಅವರ ಮೇಲೆ ತನಿಖೆ ಮುಂದುವರಿದಿದೆ'' ಎಂದು ಕಿಡಿಕಾರಿದರು.
ಯಾವ ವಿಚಾರ ಇಟ್ಟುಕೊಂಡು ಚುನಾವಣೆಗೆ ಹೋಗುತ್ತಿರಿ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸತೀಶ ಜಾರಕಿಹೊಳಿ, ''ನಮ್ಮ ಪಕ್ಷದ ಅಭಿವೃದ್ಧಿ, ಗ್ಯಾರಂಟಿ ಮತ್ತು ಕಳೆದ 30 ವರ್ಷಗಳಿಂದ ನಾವು ವೈಯಕ್ತಿಕವಾಗಿ ಮಾಡಿರುವ ಸೇವೆ ಮೇಲೆ ವೋಟ್ ಕೇಳುತ್ತೇವೆ. ಅದು ಬಿಟ್ಟು ಬಿಜೆಪಿ, ಮೋದಿ ಪ್ರಶ್ನೆ ಇಲ್ಲಿ ಬರೋದಿಲ್ಲ'' ಎಂದು ತಿಳಿಸಿದರು.
ಮಹಾರಾಷ್ಟ್ರದಿಂದ ನೀರು ಬಿಡುವ ವಿಚಾರಕ್ಕೆ ಪ್ರಕ್ರಿಯಿಸಿ, ''ಅವರಿಗೆ ನೀರು ಇಲ್ಲ. ಹಾಗಾಗಿ, ಈ ಬಾರಿ ಅವರು ನೀರು ಕೊಡುವುದು ಕಷ್ಟ. ಅವರ ಜೊತೆಗೆ ನಾವೂ ಸಂಪರ್ಕದಲ್ಲಿದ್ದೇವೆ. ಹಿಡಕಲ್ ಜಲಾಶಯದಿಂದ ಕೃಷ್ಣಾ ನದಿಗೆ 1 ಟಿಎಂಸಿ ನೀರು ಬಿಡಲು ಪ್ಲಾನ್ ಮಾಡುತ್ತಿದ್ದೇವೆ. ಇದರಿಂದ ಕುಡಚಿ, ಮಾಂಜರಿ ಮತ್ತು ಅಥಣಿಗೆ ಅನುಕೂಲ ಆಗಲಿದೆ. ಇನ್ನು ಅಲ್ಲಲ್ಲಿ ನೀರು ಹಿಡಿದಿಟ್ಟುಕೊಳ್ಳಲಾಗಿದೆ. ಹಾಗಾಗಿ, ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ'' ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಾರಕಿಹೊಳಿ ಹೇಳಿದರು.
ಮೈಸೂರು ಸೋತರೆ ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎಂಬ ವಿಚಾರಕ್ಕೆ ಹಿಂದೆಯೂ ಸಾಕಷ್ಟು ಬಾರಿ ಸೋತಿದ್ದಾರೆ. ಆ ರೀತಿ ಹೇಳಲು ಆಗೋದಿಲ್ಲ. ಹಿಂದೆ ದೇವೇಗೌಡರು ಸೋತಿದ್ದಾರೆ. ಅಲ್ಲದೇ ಕುಮಾರಸ್ವಾಮಿ ಮುಖ್ಯಮಂತ್ರಿ ಇದ್ದಾಗಲೇ ಅವರ ಮಗ ಮಂಡ್ಯದಲ್ಲಿ ಸೋತರು. ಆಗ ಅಧಿಕಾರ ಬಿಟ್ಟರಾ? ಸಿದ್ದರಾಮಯ್ಯ ಸಿಎಂ ಇದ್ದಾಗಲೇ ಹಿಂದೆ ಮೈಸೂರು ಸೋತಿದ್ದರು. ಆದ್ದರಿಂದ ಅಧಿಕಾರ ಬಿಟ್ಟು ಕೊಡುವ ವಿಚಾರ ಅನವಶ್ಯಕ'' ಎಂದರು.
ಇಂಡಿಯಾ ಒಕ್ಕೂಟದ ಯಾವೆಲ್ಲಾ ನಾಯಕರು ಪ್ರಚಾರಕ್ಕೆ ಬರುತ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ, ''ಅದಕ್ಕೆ ಇನ್ನೂ ಸಮಯವಿದೆ. ಏ. 12ರ ನಂತರ ನಾಮಿನೇಶನ್ ಆರಂಭವಾಗಿ, 19ರ ವರೆಗೂ ಇರುತ್ತದೆ. ಅದಾದ ಬಳಿಕ ಯಾರ್ಯಾರು ಬರುತ್ತಾರೆ ಅನ್ನೋದನ್ನು ನೋಡಬೇಕು ಎಂದು ಉತ್ತರಿಸಿದರು.
ಈ ವೇಳೆ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ವಿನಯ ನಾವಲಗಟ್ಟಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮುಖಂಡ ರಾಜೇಂದ್ರ ಪಾಟೀಲ ಸೇರಿದಂತೆ ಮತ್ತಿತರರು ಇದ್ದರು.
ಇದನ್ನೂ ಓದಿ: ನಾನು ಮಾಡಿದ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ಕಾಂಗ್ರೆಸ್ ಅಭ್ಯರ್ಥಿಗೆ ಕಳಿಸಿಕೊಡುವೆ: ಪಿ.ಸಿ.ಗದ್ದಿಗೌಡರ - P C Gaddigoudar