ಮೈಸೂರು: "ಮುಡಾ ಹಗರಣದಲ್ಲಿ ಸಿಎಂ ಕುಟುಂಬದ ಹೆಸರು ಕೇಳಿ ಬಂದಿದ್ದು, ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ. ಮುಡಾ ಹಗರಣದಲ್ಲಿ ದೊಡ್ಡ ದೊಡ್ಡ ಕೈಗಳಿವೆ. ಆದ್ದರಿಂದ ತನಿಖೆಯನ್ನು ಸಿಬಿಐಗೆ ನೀಡಲಿ" ಎಂದು ಜೆಡಿಎಸ್ ಶಾಸಕ ಹಾಗೂ ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷ ಜಿ.ಟಿ.ದೇವೇಗೌಡ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಟಿಡಿ, "ಜುಲೈ 15ರಿಂದ ವಿಧಾನಸಭೆ ಅಧಿವೇಶನ ಆರಂಭವಾಗುತ್ತದೆ. ಅಲ್ಲಿ ಸರ್ಕಾರಗಳ ವಿರುದ್ಧ ಹೋರಾಟ ಹೇಗಿರುತ್ತದೆ ಎಂಬುದನ್ನು ಕಾದು ನೋಡಿ. ಮುಡಾದಲ್ಲಿ ನಾನಾಗಲಿ, ಎಂಎಲ್ಸಿ ಮಂಜೇಗೌಡ ಅಥವಾ ಸಿಎಂ ಆಗಲೀ ಯಾರೇ ತಪ್ಪು ಮಾಡಿದ್ದರೂ ತಪ್ಪೇ" ಎಂದರು.
ಮುಂದುವರೆದು, "ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಮುಡಾದಲ್ಲಿ ಹೆಚ್ಚಿನ ಭ್ರಷ್ಟಾಚಾರಗಳಾಗಿವೆ. ಇದರ ಜೊತೆಗೆ ವಾಲ್ಮೀಕಿ ನಿಗಮದಲ್ಲಿ ಸಿಎಂ ಗಮನಕ್ಕೆ ಬಾರದೇ ಹಣ ವರ್ಗಾವಣೆ ಹೇಗಾಯಿತು?. ಹಣಕಾಸು ಇಲಾಖೆ ಸಿಎಂಗೆ ಸೇರಿದ ವಿಚಾರ. ಮುಖ್ಯಮಂತ್ರಿಗಳು ಸಮಾಜವಾದಿ ಹಿನ್ನೆಲೆಯಿಂದ ಬಂದವರು. ಹೀಗಾಗಿ ರಾಜೀನಾಣೆ ನೀಡಲಿ. ಕಳಂಕದಿಂದ ಹೊರಬಂದ ನಂತರ ಮತ್ತೆ ಸಿಎಂ ಆಗಲಿ" ಎಂದು ಹೇಳಿದರು.
"ಮುಡಾ ಮೀಟಿಂಗ್ಗೆ ಬರುವ ಪ್ರತಿ ಫೈಲ್ಗಳನ್ನೂ ನಾವೆಲ್ಲಾ ಪರಿಶೀಲನೆ ಮಾಡಲು ಸಾಧ್ಯವಿಲ್ಲ. ಅಧಿಕಾರಿಗಳು ಎಲ್ಲವನ್ನೂ ಪರಿಶೀಲಿಸಿ ನಂತರ ಎಲ್ಲಾ ಫೈಲ್ಗಳನ್ನು ಸಭೆಗೆ ತಂದಿಡುವುದು ಸಾಮಾನ್ಯ. ಆಗ ನಾವು ಸರಿಯೆಂದು ಒಪ್ಪಿಗೆ ಕೊಡುತ್ತೇವೆ. ಮುಡಾದಲ್ಲಿ ಅಧಿಕಾರಿಗಳ ಆಟ ಹಾಗೂ ಅಧಿಕಾರಿಗಳ ಎಡವಟ್ಟಿನಿಂದ ಎಲ್ಲವೂ ನಡೆಯುತ್ತಿದೆ" ಎಂದು ದೂರಿದರು.
ನನ್ನ ಬಳಿ ಒಂದೇ ಒಂದು ಸೈಟ್ ಇಲ್ಲ: ನಿಮ್ಮ ಬಳಿ ಮೈಸೂರಿನಲ್ಲಿ ನೂರು ಸೈಟ್ ಇದೆ ಎಂಬ ಮಾತು ಕೇಳಿ ಬರುತ್ತಿದೆಯಲ್ಲಾ ಎಂಬ ಪ್ರಶ್ನೆಗೆ, "ನನ್ನ ಬಳಿ ನೂರಲ್ಲ, ಒಂದೇ ಒಂದು ಸೈಟ್ ಸಹ ಇಲ್ಲ. ನನ್ನ ಹೆಸರಿನಲ್ಲಿ ಯಾವುದೇ ಹೋಟೆಲ್, ಆಸ್ತಿ, ಪೆಟ್ರೋಲ್ ಬಂಕ್ ಇಲ್ಲ. ನಾನೊಬ್ಬ ರೈತನ ಮಗ. ಸ್ವಾಭಿಮಾನ, ಮಾರ್ಯದೆ ಎಲ್ಲವನ್ನೂ ಉಳಿಸಿಕೊಂಡು ಪ್ರಾಮಾಣಿಕ ರಾಜಕಾರಣ ಮಾಡುತ್ತಿದ್ದೇನೆ" ಎಂದು ಹೇಳಿದರು.
ಇದನ್ನೂ ಓದಿ: ಮುಡಾ ಹಗರಣ ಆರೋಪ: ಸಿಎಂ ರಾಜೀನಾಮೆ ನೀಡಲಿ, ಸಿಬಿಐ ತನಿಖೆ ನಡೆಸಲಿ- ಬಿ.ವೈ.ವಿಜಯೇಂದ್ರ - MUDA Case