ಮೈಸೂರು: ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ಸೋಮವಾರ ರಾತ್ರಿ ಡಾ.ಬಿ.ಆರ್. ಅಂಬೇಡ್ಕರ್ ಅವರ ನಾಮಫಲಕ ಅಳವಡಿಸುವ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಎಫ್ಐಆರ್ ಮೂಲಕ 90 ಮಂದಿ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಪೊಲೀಸರು ಈಗಾಗಲೇ 39 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಗಲಭೆ ಪ್ರಕರಣ ನಡೆಯುತ್ತಿದ್ದಂತೆ ರಾತ್ರಿಯಿಂದಲೇ ಕಾರ್ಯಾಚರಣೆ ಕೈಗೊಂಡ ಪೊಲೀಸರು, ಒಂದು ಗುಂಪಿನ 27 ಮಂದಿ ಹಾಗೂ ಮತ್ತೊಂದು ಗುಂಪಿನ 12 ಮಂದಿ ಸೇರಿ ಎರಡು ಗುಂಪಿನ ಒಟ್ಟು 39 ಜನರನ್ನು ಬಂಧಿಸಿ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತರೆಲ್ಲರನ್ನೂ ಮೈಸೂರಿನ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಅಭಿಷೇಕ್ ಎಂಬವರು ನೀಡಿರುವ ದೂರಿನಲ್ಲಿ ಒಂದು ಗುಂಪಿನ 38 ಜನರ ಮೇಲೆ ದೂರು ದಾಖಲಿಸಲಾಗಿದೆ. "ನಾಮಫಲಕ ಅಳವಡಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಎದುರು ಗುಂಪಿನವರು ಏಕಾಏಕಿ ಮಾರಕಾಸ್ತ್ರಗಳಿಂದ ನಮ್ಮ ಬಡಾವಣೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಕಲ್ಲು ತೂರಾಟ ನಡೆಸಿ, ಹಲವು ಮನೆಗಳ ಹೆಂಚು, ಛಾವಣಿಯನ್ನು ಜಖಂಗೊಳಿಸಿದ್ದಾರೆ. ಅಲ್ಲದೆ ಮನೆ ಮುಂದೆ ನಿಂತಿದ್ದ ಬೈಕ್ ಹಾಗೂ ಶಾಲಾ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ" ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಭಿಷೇಕ್ ಅವರ ಗುಂಪು ಗ್ರಾಮದ ಬಸ್ ನಿಲ್ದಾಣ ಸಮೀಪದ ವೃತ್ತದಲ್ಲಿ ನಾಮಫಲಕವನ್ನು ಅಳವಡಿಸುತ್ತಿತ್ತು. ಈ ವೇಳೆ ಅಂಕ ನಾಯ್ಕ ಅವರ ಗುಂಪು ಸ್ಥಳಕ್ಕೆ ಬಂದು ನಾಮಫಲಕ ಅಳವಡಿಸಬೇಡಿ ಎಂದು ಹೇಳಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಅಂಕ ನಾಯ್ಕ 25 ಜನರ ವಿರುದ್ಧ ಪೊಲೀಸರಿಗೆ ಪ್ರತಿ ದೂರು ನೀಡಿದ್ದಾರೆ.
ಎಫ್‌ಐಆರ್ ದಾಖಲು: ಘರ್ಷಣೆ ವೇಳೆ ಪೊಲೀಸರ ಮೇಲೆಯೂ ಹಲ್ಲೆ ನಡೆದಿದ್ದು, ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಸಿ.ಜಗದೀಶ್ 27 ಜನರ ಮೇಲೆ ದೂರು ದಾಖಲಿಸಿದ್ದಾರೆ. ನಾಮಫಲಕ ಸಂಬಂಧ ಎರಡು ಗುಂಪಿನ ನಡುವೆ ಸಂಘರ್ಷ ಉಂಟಾದಾಗ ಸೋಮವಾರ ಸಂಜೆ ಅಧಿಕಾರಿಗಳು ಹಾಗೂ ಪೊಲೀಸರ ಸಮಕ್ಷಮದಲ್ಲಿ ಸಂಧಾನ ಸಭೆ ಏರ್ಪಡಿಸಲಾಗಿತ್ತು. ಈ ವೇಳೆ ಎರಡೂ ಗುಂಪಿನವರು ಸಂಧಾನಕ್ಕೆ ಒಪ್ಪದೇ ಪರಸ್ಪರ ವಾಗ್ವಾದಕ್ಕಿಳಿದು ಗಲಭೆ ಸೃಷ್ಟಿಸಿದ್ದರು. ಸ್ಥಳದಲ್ಲಿ ಹಾಜರಿದ್ದ ಪಿಎಸ್‌ಐ ಗೋಪಾಲಕೃಷ್ಣ ಕಾನ್ಸ್ಟೆಬಲ್ ನಾಗೇಶ್, ಕಿರಣ್ ಅವರ ಮೇಲೂ ಗುಂಪು ಹಲ್ಲೆ ನಡೆಸಿದ್ದು, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಜಗದೀಶ್ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಎಸ್ಪಿ ಸೀಮಾ ಲಾಟ್ಕರ್, "ಹಲ್ಲರೆ ಗ್ರಾಮದಲ್ಲಿ ನಡೆದ ಗಲಭೆಯನ್ನು ಸಂಪೂರ್ಣ ನಿಯಂತ್ರಿಸಲಾಗಿದೆ. ಶೀಘ್ರದಲ್ಲಿಯೇ ಗ್ರಾಮದಲ್ಲಿ ಶಾಂತಿ ಸಭೆ ನಡೆಸಲಾಗುವುದು" ಎಂದರು. ಹಲ್ಲರೆ, ಹುರ, ಹುಲ್ಲಹಳ್ಳಿ ಗ್ರಾಮಗಳ ಸುತ್ತಮುತ್ತ ಪೊಲೀಸರು ಪಥ ಸಂಚಲನ ನಡೆಸಿ, ಗ್ರಾಮಸ್ಥರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು. ಶಾಸಕ ದರ್ಶನ್ ಧ್ರುವನಾರಾಯಣ್ ಕೂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ: ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವು: ಪರಿಸ್ಥಿತಿ ಉದ್ವಿಗ್ನ; ಬಿಜೆಪಿ ಜೆಡಿಎಸ್ ನಾಯಕರು ವಶಕ್ಕೆ