ಚಿಕ್ಕೋಡಿ (ಬೆಳಗಾವಿ): ಹಣಕಾಸಿನ ವಿಚಾರಕ್ಕೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಕ್ಕಲವಾಡ ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಗ್ರಾ.ಪ ಸದಸ್ಯರಾದ ರಾಜೇಂದ್ರ ಪಾಟೀಲ್ ಎಂಬುವರು ಕರ್ತವ್ಯ ನಿರತ ಪಿಡಿಒ ಶಿವರಾಯ ಬಿರಾದಾರ್ ಎಂಬುವವರ ಮೇಲೆ ಸೋಮವಾರ ಏಕಾಏಕಿ ಬಂದು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಮಾಡಲಾಗಿದೆ.
ಈ ಹೊಡೆದಾಟದ ದೃಶ್ಯ ಗ್ರಾಮ ಪಂಚಾಯಿತಿಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ ರಾಜೇಂದ್ರ ಪಾಟೀಲ್, ಭೂಶನ್ ರಾಜೇಂದ್ರ ಪಾಟಿಲ್ ಮತ್ತು ಭುವನ್ ರಾಜೇಂದ್ರ ಪಾಟೀಲ್ ಎಂಬುವರ ವಿರುದ್ಧ ಪಿಡಿಒ ಖಡಕಲಾಟ ಅವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಇನ್ನು ಈ ಬಗ್ಗೆ ಪಿಡಿಒ ಶಿವರಾಯ ಬಿರಾದಾರ್ ಈ ಟಿವಿ ಭಾರತ ಜೊತೆ ದೂರವಾಣಿ ಮುಖಾಂತರ ಮಾತನಾಡಿ, ನಾನು ಎರಡು ವರ್ಷಗಳಿಂದ ಚಿಕ್ಕಲವಾಡ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಸೋಮವಾರ ಸಂಜೆ ಸದಸ್ಯ ರಾಜೇಂದ್ರ ಪಾಟೀಲ್ ಬಂದು ಹಲ್ಲೆ ಮಾಡಿದ್ದಾರೆ. ನನಗೆ ಆಗಾಗ ಖರ್ಚಿಗೆ ಹಣ ನೀಡುವಂತೆ ಒತ್ತಾಯ ಮಾಡುತ್ತಿದ್ದರು. ಹಿಂದೆಯೂ ಇದೇ ರೀತಿ ಎರಡು ಸಲ ದುಡ್ಡು ಕೇಳಿದಾಗ ನಾನು ಅವರಿಗೆ ಹಣ ನೀಡಿದೆ. ಆದರೆ, ಈ ಬಾರಿ ನಾನು ಹಣ ನೀಡಿರಲಿಲ್ಲ, ಹೀಗಾಗಿ ಅವರ ಕುಟುಂಬಸ್ಥರು ಬಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಇದನ್ನೂ ಓದಿ : ಬೆಂಗಳೂರು: ಹಾಡಿನ ಸೌಂಡ್ ಜಾಸ್ತಿ ಇಟ್ಟಿದ್ದಕ್ಕೆ ಅಂಗಡಿ ಮಾಲೀಕನ ಮೇಲೆ ಹಲ್ಲೆ: ಮೂವರ ಬಂಧನ