ಬೆಂಗಳೂರು: ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಸಂಪನ್ಮೂಲ ಕ್ರೋಢೀಕರಣ ಹಾಗೂ ರಾಜ್ಯಕ್ಕೆ ಹೆಚ್ಚು ಆದಾಯ ಬರುವ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುತ್ತಿದೆ. ಆಸ್ತಿಗಳ ನಗದೀಕರಣದ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಪರವಾಗಿ ಸಣ್ಣ ನೀರಾವರಿ ಸಚಿವ ಭೋಸರಾಜ್ ಅವರು ಸದನಕ್ಕೆ ಸ್ಪಷ್ಟಪಡಿಸಿದ್ದಾರೆ.
ವಿಧಾನಪರಿಷತ್ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಕೆ.ಎ. ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಉತ್ತರಿಸಿದ ಸಭಾನಾಯಕರೂ ಆದ ಸಚಿವ ಭೋಸರಾಜ್, ಆರ್ಥಿಕ ಇಲಾಖೆಯು ಮಾಹಿತಿಗಳನ್ನು ಸಂಗ್ರಹಿಸಲು ಆಸ್ತಿಗಳ ವಿವರಗಳನ್ನು ಪಡೆಯುತ್ತಿದ್ದು, ಇದು ನಿರಂತರ ಪ್ರಕ್ರಿಯೆಯಾಗಿದೆ ಎಂದರು.
ಆರ್ಥಿಕ ಇಲಾಖೆಯು ಮಾಹಿತಿಯ ಸಂಗ್ರಹಕ್ಕಾಗಿ ಸಂಬಂಧಿಸಿದ ಇಲಾಖೆಗಳು ಹಾಗೂ ಅವುಗಳ ಅಡಿಯಲ್ಲಿ ಬರುವ ನಿಗಮ ಪ್ರಾಧಿಕಾರ ಮತ್ತು ಮಂಡಳಿಗಳ ಆಸ್ತಿಗಳ ಸಮಗ್ರಪಟ್ಟಿಯನ್ನು ಸಿದ್ಧಪಡಿಸಲು ಅಂತರಿಕ ಸುತ್ತೋಲೆಯೊಂದನ್ನು ಕಳುಹಿಸಲಾಗುತ್ತದೆ ಎಂದು ಅವರು ಇದೇ ವೇಳೆ ಹೇಳಿದರು.
ಎಲ್ಲ ಸರ್ಕಾರದ ಅವಧಿಯಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ ಇದಾಗಿದೆ. ಒಂದು ವೇಳೆ ಆಸ್ತಿಗಳ ನಗದೀಕರಣ ಮಾಡುವುದಾದರೆ, ಅದನ್ನು ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಸಚಿವರು ಹೇಳಿದರು.
ಕರ್ನಾಟಕದ ಆರ್ಥಿಕ ಸ್ಥಿತಿ ಸದೃಢವಾಗಿದೆ: ರಾಜ್ಯದ ಆರ್ಥಿಕ ಪರಿಸ್ಥಿತಿಯು ಆರೋಗ್ಯಕರವಾಗಿದ್ದು, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಬಜೆಟ್ನಲ್ಲಿ ಅಗತ್ಯ ಅನುದಾನವನ್ನು ಒದಗಿಸಿ ಬಿಡುಗಡೆ ಮಾಡಲಾಗಿದೆ. ಸರ್ಕಾರ ಈ ಐದು ಗ್ಯಾರಂಟಿಗಳ ಜೊತೆಗೆ ಇತರ ಅಭಿವೃದ್ಧಿ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಮತ್ತು ಬಂಡವಾಳ ಕಾಮಗಾರಿಗಳನ್ನು ಸಹ ಅನುಷ್ಠಾನಗೊಳಿಸುತ್ತಿದ್ದು, ಈ ಎಲ್ಲಾ ಯೋಜನೆಗಳಿಗೆ ಮತ್ತು ಕಾರ್ಯಕ್ರಮಗಳಿಗೆ ರಾಜ್ಯದ ಬೊಕ್ಕಸದಿಂದ ಆಯವ್ಯಯದಲ್ಲಿ ಅಗತ್ಯ ಅನುದಾನವನ್ನು ಒದಗಿಸಲಾಗಿದೆ ಎಂದು ಮತ್ತೊಂದು ಪ್ರಶ್ನೆಗೆ ಸಚಿವ ಭೋಸರಾಜ್ ಉತ್ತರಿಸಿದರು.
2024-25ನೇ ಸಾಲಿನಲ್ಲಿ ಒದಗಿಸಿದ ಮತ್ತು ಖರ್ಚಾದ ಅನುದಾನ:
(ಗ್ಯಾರಂಟಿ ಯೋಜನೆಗೆ ಖರ್ಚಾದ ಹಣದ ಮಾಹಿತಿ)
- ಗೃಹ ಲಕ್ಷ್ಮಿ ಯೋಜನೆ - 28,60,8 6,133 ರೂಪಾಯಿ.
- ಗೃಹ ಜ್ಯೋತಿ ಯೋಜನೆ - 9,65,7 3,000 ರೂಪಾಯಿ.
- ಅನ್ನ ಭಾಗ್ಯ ಯೋಜನೆ - 8,07,91,327 ರೂಪಾಯಿ.
- ಯುವನಿಧಿ ಯೋಜನೆ - 65,038 ರೂಪಾಯಿ.
- ಶಕ್ತಿ ಯೋಜನೆ - 5,01,51,254 ರೂಪಾಯಿ.
- ಒಟ್ಟು - 5,20,09, 11,752 ರೂಪಾಯಿ.