ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ಕಲ್ಪಿಸಿದ ಸಂಬಂಧ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಸರ್ಕಾರ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರನ್ನ ನೇಮಿಸಿ ನಿರ್ದೇಶಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್, ಕೊಲೆ ಪ್ರಕರಣದ ಆರೋಪಿಯಾಗಿರುವ ವಿಲ್ಸನ್ ಗಾರ್ಡನ್ ನಾಗ ಸೇರಿದಂತೆ ಸಜಾ ಬಂಧಿಗಳ ಜೊತೆ ಜೈಲಿನಲ್ಲಿ ವಿಶೇಷ ಸೌಲಭ್ಯ ಕಲ್ಪಿಸಿದ ಸಂಬಂಧ ಜೈಲಿನ ಅಧೀಕ್ಷಕ, ಸೂಪರಿಡೆಂಟೆಂಟ್ ಸೇರಿ 9 ಮಂದಿ ಜೈಲು ಸಿಬ್ಬಂದಿಯನ್ನ ಸಸ್ಪೆಂಡ್ ಮಾಡಲಾಗಿತ್ತು. ಅಲ್ಲದೇ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎಲ್ಲ ಆರೋಪಿಗಳನ್ನ ರಾಜ್ಯದ ವಿವಿಧ ಕಾರಾಗೃಹಗಳಿಗೆ ಸ್ಥಳಾಂತರ ಮಾಡಲಾಗಿತ್ತು.
ವಿಶೇಷ ಆತಿಥ್ಯ ಕಲ್ಪಿಸಿರುವುದು ಜಗಜ್ಜಾಹೀರಾಗುತ್ತಿದ್ದಂತೆ ಪ್ರತ್ಯೇಕವಾಗಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣ ದಾಖಲಾಗಿತ್ತು. ಜೈಲಿನಲ್ಲಿ ದರ್ಶನ್ ವಿಡಿಯೋ ಕರೆ ಮಾಡಿ ಮಾತನಾಡಿರುವುದು, ಸಿಗರೇಟು ಸೇದಿರುವುದು ಹಾಗೂ ಜೈಲು ಸಿಬ್ಬಂದಿ ವಿರುದ್ಧ ದಾಖಲಾಗಿದ್ದ ಪ್ರಕರಣಗಳಲ್ಲಿ ಇಬ್ಬರು ಇನ್ಸ್ಪೆಕ್ಟರ್ ಹಾಗೂ ಎಸಿಪಿ ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಹಾಗೂ ಜೈಲು ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದರೂ ಸಿಗರೇಟು ಸೇರಿದಂತೆ ನಿಷೇಧಿತ ವಸ್ತುಗಳು ಹೇಗೆ ಸಾಗಾಟವಾಗಿವೆ ಎಂಬ ಹಲವು ಗುಮಾನಿಗಳನ್ನ ಹುಟ್ಟುಹಾಕುವಂತೆ ಮಾಡಿದೆ. ಸಿಬ್ಬಂದಿ ಕಣ್ತಪ್ಪಿಸಿ ನಿಷೇಧಿತ ವಸ್ತುಗಳು ಹೇಗೆ ಬಂದವು? ಇದರ ಹಿಂದೆ ಜೈಲು ಸಿಬ್ಬಂದಿ ಕೈವಾಡವಿದೆಯಾ? ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಸರ್ಕಾರ ಸೂಚಿಸಿದೆ.
ಇದನ್ನೂ ಓದಿ : ಬಳ್ಳಾರಿ: ದರ್ಶನ್ ಮನವಿ ಮೇರೆಗೆ ಜೈಲಿಗೆ ಬಂದ ಸರ್ಜಿಕಲ್ ಚೇರ್! - SURGICAL CHAIR TO DARSHAN