ಬೆಂಗಳೂರು: ಕಳೆದ 17 ವರ್ಷದಿಂದ ಬೆಂಗಳೂರು ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ಬರೀ ಕಾಗದದ ಮೇಲಿನ ಘೋಷಣೆಯಾಗಿಯೇ ಉಳಿದಿದೆ. ಯೋಜನೆ ಕಾರ್ಯರೂಪಕ್ಕೆ ಬರುವಲ್ಲಿ ಸರ್ಕಾರಗಳು ನಾನಾ ಕಸರತ್ತು ಮಾಡುತ್ತಲೇ ಇವೆ. ಇದೀಗ ರಾಜ್ಯ ಸರ್ಕಾರ 2013ರ ಭೂ ಸ್ವಾಧೀನ ಕಾಯ್ದೆಯಡಿ ಪರಿಹಾರ ನೀಡಲು ಮುಂದಾಗಿದೆ. ಸದ್ಯಕ್ಕೆ ಯೋಜನೆ ಯಾವ ಹಂತದಲ್ಲಿದೆ ಎಂಬ ವರದಿ ಇಲ್ಲಿದೆ.
ಬೆಂಗಳೂರು ಪೆರಿಫರೆಲ್ ರಿಂಗ್ ರಸ್ತೆಯ ಮೂಲಕ ನಗರದ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡುವ ಈ ಯೋಜನೆ 2006ರಲ್ಲೇ ಘೋಷಣೆಯಾಗಿತ್ತು. ಸುಮಾರು 27 ಸಾವಿರ ಕೋಟಿ ರೂ. ವೆಚ್ಚದ 73 ಕಿ.ಮೀ. ಉದ್ದದ ಯೋಜನೆ ಇದಾಗಿದೆ. 18 ವರ್ಷ ಕಳೆದರೂ ಪೆರಿಫರಲ್ ರಿಂಗ್ ರಸ್ತೆ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗಿಲ್ಲ. ಭೂ ಸ್ವಾಧೀನ ಪ್ರಕ್ರಿಯೆ, ಭೂ ಪರಿಹಾರ ಬಿಕ್ಕಟ್ಟು, ಪರಿಸರ ಇಲಾಖೆ ಅನುಮತಿ ವಿಳಂಬದಿಂದ ಬಹುನಿರೀಕ್ಷಿತ ಯೋಜನೆ ಕಾರ್ಯರೂಪಕ್ಕೆ ಬರಲು ಇನ್ನೂ ಸಾಧ್ಯವಾಗಿಲ್ಲ.
ಎಂಟು ಪಥಗಳ ಎಕ್ಸ್‌ಪ್ರೆಸ್ ವೇ ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಯನ್ನು ಸಂಪರ್ಕಿಸಲಿದ್ದು, ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆ ಮತ್ತು ಹಳೆ ವಿಮಾನ ನಿಲ್ದಾಣ ರಸ್ತೆ ಮೂಲಕ ಮತ್ತು ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ ಮತ್ತು ಆನೇಕಲ್ ತಾಲೂಕುಗಳ ಮೂಲಕ ಹಾದುಹೋಗಲಿದೆ. ನಗರದ ಸುತ್ತಲೂ ಅರ್ಧವೃತ್ತಾಕಾರದಲ್ಲಿ ನಿರ್ಮಾಣಗೊಳ್ಳಲಿರುವ ಯೋಜನೆ ಇದಾಗಿದೆ.
ಭೂಸ್ವಾಧೀನಕ್ಕೆ ಸುಮಾರು 21,000 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಕಾಮಗಾರಿಗಾಗಿ 6,000 ಕೋಟಿ ರೂ. ಅಂದಾಜಿಸಲಾಗಿದೆ. ಯೋಜನೆಗೆ ಒಟ್ಟು 2,596 ಎಕರೆ ಜಮೀನು ಬೇಕಾಗಿದೆ. ಈ ಪೈಕಿ ಕೇವಲ 220 ಎಕರೆ ಮಾತ್ರ ಸರ್ಕಾರದ ಜಮೀನಾಗಿದೆ. ಉಳಿದ ಜಮೀನು ಖಾಸಗಿಯವರದ್ದಾಗಿದೆ. ಭೂ ಪರಿಹಾರ ಸಂಬಂಧ ರೈತರ ಜೊತೆ ಸಂಘರ್ಷ ಉಂಟಾಗಿರುವುದರಿಂದ ಯೋಜನೆ ಕಾರ್ಯರೂಪಕ್ಕೆ ಬಾರದೇ ಬಾಕಿ ಉಳಿದುಕೊಂಡಿದೆ. ಪಿಆರ್‌ಆರ್ ವಿನ್ಯಾಸ ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ ಆಧಾರದ ಮೇಲೆ ಯೋಜನೆ ಕೈಗೊಳ್ಳಲು ನಿರ್ಧರಿಸಲಾಗಿದೆ.
ಯೋಜನೆ ಟೆಂಡರ್ನಲ್ಲಿ ಗುತ್ತಿಗೆದಾರರ ನಿರಾಸಕ್ತಿ: ಮೇ 5, 2021ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಕಾಮಗಾರಿಗೆ ಭೂಸ್ವಾಧೀನ ವೆಚ್ಚ ಭರಿಸಿ ರಸ್ತೆ ನಿರ್ಮಾಣ ಮಾಡಲು Design Built Finance Operate & Transfer (DBFOT) ಮಾದರಿಯಲ್ಲಿ ಜಾಗತಿಕ ಟೆಂಡರ್ ಕರೆಯಲಾಗಿತ್ತು. ಯೋಜನೆಗೆ ವಿಸ್ತ್ರತ ಯೋಜನಾ ವರದಿ ಹಾಗೂ Model Concession Agreement ಸಿದ್ಧಪಡಿಸಿ 31.08.2021ರಂದು ಸರ್ಕಾರದ ಅನುಮೋದನೆಗಾಗಿ ಸಲ್ಲಿಸಲಾಗಿತ್ತು. ಬಿಡಿಎ ಮೂರು ಬಾರಿ ಯೋಜನೆ ಕಾಮಗಾರಿಗಾಗಿ ಟೆಂಡರ್ ಕರೆದಿತ್ತು. ಆದರೆ ಮೂರು ಬಾರಿನೂ ಯಾವ ಗುತ್ತಿಗೆದಾರನೂ ಬಿಡ್ ಹಾಕಲು ಮುಂದೆ ಬಂದಿಲ್ಲ. ಇದೀಗ ಬಿಡಿಎನೇ ಸಂಪನ್ಮೂಲ ಸಂಗ್ರಹಿಸಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ.
ಶೇ.75 ಸಾಲದ ಮೊರೆ ಹೋಗಲು ತೀರ್ಮಾನ: ಯೋಜನೆ ಅನುಷ್ಠಾನಗೊಳಿಸಲು ಶೇ.75ರಷ್ಟು ಸಾಲದ ಮೊರೆ ಹೋಗಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದೀಗ ಆರ್ಥಿಕ ಇಲಾಖೆಯ ಅಭಿಪ್ರಾಯದಂತೆ ಪೆರಿಫೆರಲ್ ರಸ್ತೆ / ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಗೆ ಅಗತ್ಯವಿರುವ ಹಣಕಾಸನ್ನು ವಿವಿಧ ಹಣಕಾಸು ಏಜೆನ್ಸಿಗಳ ಮೂಲಕ ಹಾಗೂ ಹೆಚ್ಚುವರಿ ಹಣಕಾಸು ಲಭ್ಯವಿರುವ ರಾಜ್ಯ ಸರ್ಕಾರದ ಉದ್ದಿಮೆಗಳಿಂದ ಬಂಡವಾಳ ರೂಪದಲ್ಲಿ ಪಡೆಯಲು ಒಪ್ಪಿಗೆ ಸೂಚಿಸಿದೆ.
ಹಣಕಾಸು ಸಂಸ್ಥೆಗಳಿಂದ ಪಡೆಯುವ ಸಾಲದ ಮೊತ್ತಕ್ಕೆ ರಾಜ್ಯ ಸರ್ಕಾರದ ವತಿಯಿಂದ ಗ್ಯಾರಂಟಿ ನೀಡಲು ಮತ್ತು ಆರ್ಥಿಕ ಇಲಾಖೆಯು ಅಭಿಪ್ರಾಯಿಸಿರುವಂತೆ ಬಡ್ಡಿ ಮೊತ್ತವನ್ನು ಬಿಡಿಎ ಮತ್ತು ರಾಜ್ಯ ಸರ್ಕಾರ ಭರಿಸಲಿದೆ. ಬಡ್ಡಿ ಮರುಪಾವತಿಯನ್ನು ಸರ್ಕಾರದ ಅನುದಾನದ ಮೂಲಕ ಪಾವತಿಸಲು ಆಯವ್ಯಯದಲ್ಲಿ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ. ಈ ಯೋಜನೆಗಾಗಿ ಪ್ರಾಧಿಕಾರ ಭೂಸ್ವಾಧೀನಪಡಿಸಿಕೊಂಡಿರುವ ಜಮೀನನ್ನು ಸಾಲ ನೀಡುವ ಹಣಕಾಸು ಸಂಸ್ಥೆಗೆ ಅಡಮಾನ ಮಾಡಬೇಕಾಗಿರುವುದರಿಂದ, ಅಡಮಾನ ಪ್ರಕ್ರಿಯೆಗೆ ವಿಧಿಸುವ ಮುದ್ರಾಂಕ ಶುಲ್ಕಕ್ಕೆ ಸಂಪೂರ್ಣ ವಿನಾಯಿತಿ ನೀಡಲು ಸಚಿವ ಸಂಪುಟ ತೀರ್ಮಾನಿಸಿದೆ.
2013ರ ಕಾಯ್ದೆಗೆ ಸಮಾನಾಂತರ ಭೂ ಪರಿಹಾರ: ಇನ್ನು ಭೂ ಮಾಲೀಕರಿಗೆ ಪರಿಹಾರಾತ್ಮಕವಾಗಿ Right to Fair Compensation and Transparency in Land Acquisition, Rehabilitation and Resettlement Act, 2013 ರಡಿ ಲಭ್ಯವಾಗುವ ಪರಿಹಾರ ಮೊತ್ತಕ್ಕೆ ಸಾಮ್ಯವಿರುವಂತೆ ಪರಿಹಾರ ನೀಡಲು ಹಾಗೂ ಭೂ ಮಾಲೀಕರು ಸ್ವಇಚ್ಛೆಯಿಂದ ಭೂ ಪರಿಹಾರವನ್ನು ಟಿಡಿಆರ್ ರೂಪದಲ್ಲಿ ಪಡೆಯಲು ಬಯಸಿದಲ್ಲಿ ಟಿಡಿಆರ್ ನೀಡಲು ಅನುಮತಿಸಲಾಗಿದೆ. ರೈತರೂ 2013 ಭೂಸ್ವಾಧೀನ ಕಾಯ್ದೆಯಡಿ ಭೂ ಪರಿಹಾರ ನೀಡುವಂತೆ ಪಟ್ಟು ಹಿಡಿದಿದ್ದರು. ಅದರಂತೆ ರಾಜ್ಯ ಸರ್ಕಾರ ಪರಿಹಾರ ನೀಡಲು ತೀರ್ಮಾನಿಸಿದೆ.
ಪೆರಿಫೆರೆಲ್ ರಿಂಗ್ ರಸ್ತೆ ಯೋಜನೆ ಭಾಗ-1ಕ್ಕೆ 2007ರಲ್ಲಿ 1810 ಎಕರೆ 18.5 ಗುಂಟೆ ವಿಸ್ತೀರ್ಣದ ಜಮೀನಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಸದ್ಯ ಕಾಚಮಾರನಹಳ್ಳಿ ಗ್ರಾಮದ ಸರ್ವೆ ನಂ. 100ರಲ್ಲಿ 1.28 ಎಕರೆ ಜಮೀನಿಗೆ 21.27 ಲಕ್ಷ ರೂ.ಗೆ ಐತೀರ್ಪು ಅನುಮೋದನೆಯಾಗಿದ್ದು, 2011ರಲ್ಲಿ ಭೂಸ್ವಾಧೀನ ಪಡೆದು ಅಭಿಯಂತರರ ಶಾಖೆಗೆ ಹಸ್ತಾಂತರಿಸಲಾಗಿದೆ. ಆದೂರು ಗ್ರಾಮದ ಸರ್ವೆ ನಂ 25/6 ರಲ್ಲಿ 28 ಗುಂಟೆ ಜಮೀನಿಗೆ 8.15 ಲಕ್ಷ ರೂ.ಗೆ ಐತೀರ್ಪು ಅನುಮೋದನೆಯಾಗಿದ್ದು, 2011 ರಂದು ಭೂಸ್ವಾಧೀನ ಪಡೆದು ಅಭಿಯಂತರರ ಶಾಖೆಗೆ ಹಸ್ತಾಂತರಿಸಲಾಗಿದೆ. ಆದೂರು ಗ್ರಾಮದ ಸರ್ವೆ ನಂ.32/10 ರಲ್ಲಿ 1.04 ಎಕರೆ ಜಮೀನಿಗೆ 11.78 ಲಕ್ಷ ರೂ.ಗೆ ಐತೀರ್ಪು ಅನುಮೋದನೆಯಾಗಿದ್ದು, 2011ರಂದು ಭೂಸ್ವಾಧೀನ ಪಡೆದು ಅಭಿಯಂತರರ ಶಾಖೆಗೆ ಹಸ್ತಾಂತರಿಸಲಾಗಿದೆ.
750 ಎಕರೆ ಜಮೀನು ಸ್ವಾಧೀನಕ್ಕಾಗಿ ಬಿಡಿಎ 2020ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಇದೀಗ ಅಂತಿಮ ಅಧಿಸೂಚನೆ ಹೊರಡಿಸಲು ಬಿಡಿಎ ಮುಂದಾಗಿದೆ. 2013 ಕಾಯ್ದೆ ಸಮಾನಾಂತರವಾಗಿ ಪರಿಹಾರ ನೀಡಲು ನಿರ್ಧರಿಸಿರುವುದರಿಂದ ಸುಮಾರು 20,500 ಕೋಟಿ ರೂ.ಗೂ ಅಧಿಕ ವೆಚ್ಚ ಅಂದಾಜಿಸಲಾಗಿದೆ. ಪ್ರತಿ ಎಕರೆಗೆ ಸರಾಸರಿ 8 ಕೋಟಿ ರೂ. ಭೂ ಪರಿಹಾರ ನೀಡಬೇಕಾಗಬಹುದು.