ಬೆಂಗಳೂರು: ಮುಡಾ ಪ್ರಕರಣ ಸಂಬಂಧ ಸಿಎಂ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಮತ್ತು ರಾಜಭವನದ ಮಧ್ಯೆ ತಿಕ್ಕಾಟ ಮುಂದುವರಿದಿದೆ. ಇದೀಗ ರಾಜ್ಯಪಾಲರು ಸರ್ಕಾರಿ ಅಧಿಕಾರಿಗಳ ವಿರುದ್ಧ ಅಭಿಯೋಜನೆಗೆ ಲೋಕಾಯುಕ್ತ ಸಂಸ್ಥೆ ಸರ್ಕಾರದ ಬಳಿ ಮಂಜೂರಾತಿ ಕೋರಿದ ಅರ್ಜಿಗಳ ಸ್ಥಿತಿಗತಿ ಏನಿದೆ ಎಂಬ ಬಗ್ಗೆ ಮುಖ್ಯ ಕಾರ್ಯದರ್ಶಿ ಅವರಿಗೆ ಮಾಹಿತಿ ಕೇಳಿದ್ದಾರೆ.
ರಾಜ್ಯಪಾಲರು ಎನ್ಡಿಎ ನಾಯಕರ ವಿರುದ್ಧದ ಪ್ರಕರಣಗಳ ಸಂಬಂಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿಲ್ಲ. ಆದರೆ ತರಾತುರಿಯಲ್ಲಿ ಸಿಎಂ ವಿರುದ್ಧದ ಮುಡಾ ಪ್ರಕರಣ ಸಂಬಂಧ ತನಿಖೆಗೆ ಪೂರ್ವಾನುಮತಿ ನೀಡಿರುವ ಬಗ್ಗೆ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಬಿಜೆಪಿ ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ವಿರುದ್ಧ ಪ್ರಾಸಿಕ್ಯೂಷನ್ಗೆ ತನಿಖಾ ಸಂಸ್ಥೆಗಳು ಅನುಮತಿ ಕೇಳಿದ್ದರೂ, ರಾಜ್ಯಪಾಲರು ಅದರ ಬಗ್ಗೆ ಕ್ರಮ ಕೈಗೊಳ್ಳದೇ ಸುಮ್ಮನೆ ಕೂತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಪ್ರತಿಭಟನೆ ಮಾಡಿದ್ದರು.
ಈ ಸಂಬಂಧ ರಾಜ್ಯಪಾಲರಿಗೂ ದೂರು ನೀಡಿದ್ದರು. ಜೊತೆಗೆ ಮುಡಾ ಪ್ರಕರಣ ಪೂರ್ವಾನುಮತಿ ಸಂಬಂಧ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುವಾಗಲೂ ಸಿಎಂ ಪರ ವಕೀಲರು ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಇದಕ್ಕೆ ಕೌಂಟರ್ ಆಗಿ ಇದೀಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್ಗೆ ಸರ್ಕಾರದಿಂದ ಮಂಜೂರಾತಿ ಕೋರಿ ಲೋಕಾಯುಕ್ತ ಸಂಸ್ಥೆ ಸಲ್ಲಿಸಿದ ಪ್ರಕರಣಗಳ ಸ್ಥಿತಿಗತಿಗಳ ಮಾಹಿತಿ ಕೇಳಿದ್ದಾರೆ.
ಸಿಎಸ್ ರಿಂದ ರಾಜ್ಯಪಾಲರು ಕೇಳಿದ್ದೇನು?: ಸೆ.5ಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿರುವ ರಾಜ್ಯಪಾಲರು, ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳಲ್ಲಿ ಲೋಕಾಯುಕ್ತ ಪ್ರಕರಣ ಸಂಬಂಧ ಸರ್ಕಾರದ ವಿವಿಧ ಅಧಿಕಾರಿಗಳ ವಿರುದ್ಧದ ಪ್ರಾಸಿಕ್ಯೂಷನ್ ಮಂಜೂರಾತಿ ಕೋರಿರುವ ಕುರಿತು ನಿರ್ಣಯ ಕೈಗೊಂಡಿರುವ ಬಗ್ಗೆ ಗಮನಿಸಿದ್ದೇನೆ. ಕೆಲ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ಲೋಕಾಯುಕ್ತ ಪ್ರಾಸಿಕ್ಯೂಷನ್ ಅನುಮತಿ ಪ್ರಾಸ್ತಾವನೆಗಳನ್ನು ತಿರಸ್ಕರಿಸಿರುವುದು ಕಂಡುಬಂದಿದೆ. ಕೆಲ ಪ್ರಕರಣಗಳ ಸಂಬಂಧ ಪ್ರಾಸಿಕ್ಯೂಷನ್ಗೆ ಮಂಜೂರಾತಿ ನೀಡಿರುವುದು ಕಂಡುಬಂದಿದೆ ಎಂದು ಉಲ್ಲೇಖಿಸಿದ್ದಾರೆ.
ಈ ಸಂಬಂಧ ಲೋಕಾಯುಕ್ತ ಪ್ರಕರಣಗಳ ಮಾಹಿತಿ ಬಯಸುತ್ತಿದ್ದೇನೆ. ಈ ಪ್ರಕರಣಗಳ ಮೇಲೆ ಯಾವ ಆಧಾರದಲ್ಲಿ ಸರ್ಕಾರ ತೀರ್ಮಾನಗಳನ್ನು ತೆಗೆದುಕೊಂಡಿದೆ ಎಂಬ ಬಗ್ಗೆನೂ ಗೊತ್ತಾಗಬೇಕಾಗಿದೆ. ಹೀಗಾಗಿ ಲೋಕಾಯುಕ್ತ ಸಂಸ್ಥೆ ಸರ್ಕಾರಿ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್ ಮಂಜೂರಾತಿ ಅನುಮತಿ ಕೋರಿ ಸರ್ಕಾರಕ್ಕೆ 20.05.2023ರಿಂದ ಈವರೆಗೆ ಸಲ್ಲಿಸಿದ ಪ್ರಕರಣಗಳ ಬಗ್ಗೆ ಮಾಹಿತಿ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.
ನಿಗದಿತ ಮಾದರಿಯಲ್ಲೇ ಮಾಹಿತಿ ನೀಡುವಂತೆ ರಾಜ್ಯಪಾಲರು ಕೋರಿದ್ದಾರೆ. ಅದರ ಪ್ರಕಾರ ಶಿಫಾರಸಿನ ಅಂಶಗಳು, ಲೋಕಾಯುಕ್ತ ಸಂಸ್ಥೆ ಪ್ರಸ್ತಾವನೆ ಸಲ್ಲಿಸಿರುವ ದಿನಾಂಕ, ಸಚಿವ ಸಂಪುಟ ಸಭೆ ತೆಗೆದುಕೊಂಡ ತೀರ್ಮಾನ, ಅದರಲ್ಲಿ ತಿರಸ್ಕರಿಸಿರುವುದು, ಸ್ವೀಕರಿಸಿದ್ದು ಎಷ್ಟು?, ಲೋಕಾಯುಕ್ತ ಸಂಸ್ಥೆ ಶಿಫಾರಸು ಸ್ವೀಕರಿಸಿದ್ದರೆ ಶಿಕ್ಷೆ ಪ್ರಮಾಣ ಏನು? ಮತ್ತು ಸಂಪುಟ ಸಭೆಯಲ್ಲಿ ಒಂದು ವೇಳೆ ತಿರಸ್ಕರಿಸಿದ್ದರೆ ಅದಕ್ಕೆ ಕಾರಣ ಏನು ಎಂಬ ಸಮಗ್ರ ಮಾಹಿತಿ ಕೇಳಿದ್ದಾರೆ.
ತುರ್ತಾಗಿ ಮಾಹಿತಿ ನೀಡಲು ಸಿಎಸ್ ಸೂಚನೆ: ರಾಜ್ಯಪಾಲರು ಬರೆದಿರುವ ಪತ್ರದ ಹಿನ್ನೆಲೆ ಒಂದು ವಾರದೊಳಗೆ ಮಾಹಿತಿ ನೀಡುವಂತೆ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಗೆ ಮುಖ್ಯ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ.
ಈ ವಿಚಾರವನ್ನು ತುರ್ತು ಎಂದು ಪರಿಗಣಿಸಿ, ರಾಜ್ಯಪಾಲರು ನಿರ್ದೇಶಿಸಿರುವಂತೆ 20.05.2023 ರಿಂದ ಇಂದಿನವರೆಗೆ ಸ್ವೀಕೃತವಾಗಿರುವ ಸರ್ಕಾರಿ ಅಧಿಕಾರಿ/ನೌಕರರುಗಳ ವಿರುದ್ಧದ ಲೋಕಾಯುಕ್ತ ಪ್ರಕರಣಗಳಲ್ಲಿನ ಅಭಿಯೋಜನಾ ಮಂಜೂರಾತಿ ಕುರಿತಾದ ಮಾಹಿತಿಯನ್ನು ಕೇಳಿದ ನಮೂನೆಯಲ್ಲಿ "ಕೂಡಲೇ ಒಂದು ವಾರದೊಳಗಾಗಿ" ಒದಗಿಸುವಂತೆ ಸೆ.10ರಂದು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಎಲ್ಲಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಕಾರ್ಯದರ್ಶಿಗಳಿಗೆ ಸೂಚನೆ ಕೊಟ್ಟಿದ್ದಾರೆ.