ಬೆಂಗಳೂರು : ಕನ್ನಡ ಮಾಧ್ಯಮ ಹಾಗೂ 'ಕನ್ನಡ' ಒಂದು ಭಾಷೆಯಾಗಿ ಎಸ್‌ಎಸ್‌ಎಲ್‌ಸಿವರೆಗೂ ಅಧ್ಯಯನ ಮಾಡಿದ ಸರ್ಕಾರಿ ನೌಕರರಿಗೆ ನೀಡಬೇಕಾದ ಒಂದು ಅವಧಿಯ ವೇತನ ಹೆಚ್ಚಳ (ಇಂಕ್ರಿಮೆಂಟ್) ನಿರಾಕರಿಸಿದ್ದ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪಿಂಚಣಿದಾರರನ್ನು ರಾಜ್ಯ ಸರ್ಕಾರ ಸಹಾನುಭೂತಿ ಮತ್ತು ನೋವಿಲ್ಲದಂತೆ ನಡೆಸಿಕೊಳ್ಳಬೇಕಾಗುತ್ತದೆ ಎಂದು ಸಲಹೆ ನೀಡಿದೆ.
ಅಲ್ಲದೇ, 2018ರ ಫೆಬ್ರವರಿಯಿಂದ ಜಾರಿಗೆ ಬರುವಂತೆ ಅರ್ಜಿದಾರರಿಗೆ ಮುಂದಿನ ಮೂರು ತಿಂಗಳ ಒಳಗಾಗಿ ಒಂದು ಬಾರಿ ವೇತನ ಹೆಚ್ಚಳ (ಇನ್ಕ್ರಿಮೆಂಟ್) ಮಂಜೂರು ಮಾಡುವಂತೆ ಮತ್ತು ಹೆಚ್ಚಳದ ಬಾಕಿ ಮೊತ್ತವನ್ನು ಪಾವತಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಕೋರ್ಟ್ ನಿರ್ದೇಶನ ನೀಡಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ಸೀತಾಲಕ್ಷ್ಮಿ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ಜಿ.ಬಸವರಾಜ ಅವರಿದ್ದ ವಿಭಾಗೀಯ ಪೀಠ, ಈ ಸೂಚನೆ ನೀಡಿದೆ. ಅಲ್ಲದೆ, ಈ ಆದೇಶ ಜಾರಿಯಲ್ಲಿ ವಿಫಲವಾದಲ್ಲಿ, ವಿಳಂಬವಾದ ಪ್ರತಿ ತಿಂಗಳಿಗೆ ಶೇ.2ರ ದರದಲ್ಲಿ ಬಡ್ಡಿ ಸೇರಿಸಿ ಪಾವತಿಸಬೇಕು. ಆ ಬಡ್ಡಿ ಮೊತ್ತವನ್ನು ತಕ್ಷಣಕ್ಕೆ ಸರ್ಕಾರ ಪಾವತಿ ಮಾಡಬೇಕು. ಬಳಿಕ ಇದಕ್ಕೆ ಕಾರಣವಾದ ಅಧಿಕಾರಿಯಿಂದ ಸರ್ಕಾರ ವಸೂಲಿ ಮಾಡಿಕೊಳ್ಳಬೇಕು ಎಂದು ನ್ಯಾಯಪೀಠ ಹೇಳಿದೆ.
ಅರ್ಜಿದಾರರು 1980ರ ಸೆಪ್ಟೆಂಬರ್ 24ರಿಂದ 2019ರ ಅಕ್ಟೋಬರ್ 31ರವರೆಗೆ ಕಳಂಕರಹಿತ ಸೇವಾ ಉದ್ಯೋಗಿಯಾಗಿ ಕೆಲಸ ಮಾಡಿದ್ದಾರೆ. ಸುಮಾರು ಮೂರು ದಶಕಗಳಿಂದ ಹೆಚ್ಚು ಆಕರ್ಷಕ ಸಂಬಳದಲ್ಲಿ ರಾಜ್ಯಕ್ಕೆ ಸೇವೆ ಸಲ್ಲಿಸಿದ ಬಡ ಮಹಿಳೆ ಎಂಬ ಅಂಶವನ್ನು ನಾವು ಮರೆಯಲು ಸಾಧ್ಯವಿಲ್ಲ. ಅವರು ಅದನ್ನು ಪ್ರಾಥಮಿಕ ಶಾಲಾ ಶಿಕ್ಷಕಿ ಎಂಬ ಅತ್ಯಂತ ವಿನಮ್ರ ಹುದ್ದೆಯಲ್ಲಿ ಸೇವೆ ಮಾಡಿದ್ದಾರೆ. ಬಹುಶಃ ಅವರು ಸರ್ಕಾರಿ ಶಾಲೆಯಲ್ಲಿ ಶಾಲೆಯ ತಾಯಿಯಾಗಿ ಅನೇಕ ಮಕ್ಕಳ ಭವಿಷ್ಯ ರೂಪಿಸಿದ್ದಾರೆ. ಇಷ್ಟಾದರೂ ಸೇವೆಯಿಂದ ನಿವೃತ್ತರಾಗಿದ್ದು, ಹೆಚ್ಚು ಪಿಂಚಣಿ ಪಡೆಯದಂತಾಗಿದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಜೀವನದ ಇಳಿ ಸಂಜೆ ವಯಸ್ಸಿನಲ್ಲಿ ಹಲವು ತೊಂದರೆಗಳನ್ನು ಉಂಟುಮಾಡುತ್ತದೆ. ಇದನ್ನು ಹಣದ ಸಹಾಯದಿಂದ ತಗ್ಗಿಸಬಹುದು. ಯಾವುದೇ ಪರಿಹಾರವನ್ನು ಸಂಪೂರ್ಣವಾಗಿ ನಿರಾಕರಿಸುವುದು ಪಿಂಚಣಿದಾರರಿಗೆ ದೊಡ್ಡ ಅನ್ಯಾಯವಾಗಲಿದೆ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸೀತಾಲಕ್ಷ್ಮಿ ಎಂಬವರು ಎಸ್ಎಸ್ಎಲ್ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಕನ್ನಡ ಪಠ್ಯಕ್ರಮದಲ್ಲಿ ಒಂದು ವಿಷಯವಾಗಿ ಅಧ್ಯಯನ ಮಾಡಿದ್ದರು. ಸುಮಾರು ಮೂರು ದಶಕಗಳ ಸೇವೆಯ ನಂತರ ಅವರು 2019ರ ಅಕ್ಟೋಬರ್ 31ರಂದು ಸೇವೆಯಿಂದ ನಿವೃತ್ತರಾಗಿದ್ದರು. ಅವರಿಗೆ ಕನ್ನಡ ಭಾಷೆಯಲ್ಲಿ ಅಧ್ಯಯನ ಮಾಡಿದ್ದ ಆಧಾರದಲ್ಲಿ ವೇತನದ ಹೆಚ್ಚಳ (ಇನ್ಕ್ರಿಮೆಂಟ್)ನ್ನು ಶಿಕ್ಷಣ ಇಲಾಖೆ ನೀಡಬೇಕು ಎಂಬ ನಿಯಮವಿತ್ತು. ಆದರೆ, ಇಲಾಖೆಯು ಅರ್ಜಿದಾರರು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿತ್ತು. ಬಳಿಕ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ್ದ ನ್ಯಾಯಮಂಡಳಿ ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಶೈಕ್ಷಣಿಕ ಅರ್ಹತೆ ಕಾರಣದಿಂದ ತಮ್ಮ ಕಕ್ಷಿದಾರರಿಗೆ ಒಂದು ಇನ್ಕ್ರಿಮೆಂಟ್ ನೀಡಬೇಕಾಗಿತ್ತು. ಮತ್ತು ಅಂತಹ ಸೌಲಭ್ಯವನ್ನು ನಿರಾಕರಿಸಿರುವುದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ವಾದ ಮಂಡಿಸಿದ್ದರು.
ಅಲ್ಲದೇ, ಸಂಬಳ ಮತ್ತು ವೇತನವಾಗಿ ಪಾವತಿಸಬೇಕಾದ ಹಣವು ಉದ್ಯೋಗಿಯ ಆಸ್ತಿಯಾಗಿರಲಿದೆ. ಆದ್ದರಿಂದ ಈ ಮೊತ್ತ ಪಾವತಿಸದಿರುವುದು ಸಂವಿಧಾನದ 300ನೇ ಎ ವಿಧಿಯಡಿ ಸಾಂವಿಧಾನಿಕ ಖಾತರಿಯ ಉಲ್ಲಂಘನೆಯಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರ ವಕೀಲರು, ಅರ್ಜಿದಾರರು ಸಾಕಷ್ಟು ವಿಳಂಬವಾಗಿ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ, ನ್ಯಾಯಮಂಡಳಿ ತೀರ್ಪು ಸರಿಯಾಗಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದ್ದರು.
ಇದನ್ನೂ ಓದಿ: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಸೇರಿದ ಜಾಗದಲ್ಲಿ ಕೊಳೆಗೇರಿಗಳಿಗೆ ಮನೆ ನಿರ್ಮಾಣ ಪ್ರಶ್ನಿಸಿದ್ದ ಅರ್ಜಿ ವಜಾ