ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿರುವ ಸರ್ಕಾರಿ ಕಚೇರಿಗಳು 4,192.70 ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದು, ಜೊತೆಗೆ ಬಡ್ಡಿ ಕೂಡಾ ಏರುತ್ತಿದೆ. ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳು ಬಿಲ್ ಕಟ್ಟಲು ಮೀನಮೇಷ ಎಣಿಸುತ್ತಿರುವುದು ವಿದ್ಯುತ್ ಸರಬರಾಜು ಕಂಪನಿಯ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ.
ರಾಜ್ಯದ ಪ್ರತಿಯೊಂದು ಮನೆಗೂ 200 ಯುನಿಟ್‌ವರೆಗಿನ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದ್ದು, ಇದು ಸರ್ಕಾರಕ್ಕೆ ಹೊರೆಯಾಗುತ್ತಿದೆ. ಇದರ ಜೊತೆಗೆ ಸರ್ಕಾರಿ ಇಲಾಖೆಗಳೇ ವಿದ್ಯುತ್ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಂಡಿರುವುದು ವಿದ್ಯುತ್ ನಿಗಮಗಳ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಜನಸಾಮಾನ್ಯರು ಒಂದು ತಿಂಗಳಿನ ವಿದ್ಯುತ್ ಬಿಲ್ ಪಾವತಿಸದಿದ್ದರೆ ತಕ್ಷಣ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಆದರೆ ಸರ್ಕಾರದ ಇಲಾಖೆಗಳು ಬಾಕಿ ಉಳಿಸಿಕೊಂಡರೆ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬಿಬಿಎಂಪಿ, ಜಲಮಂಡಳಿ ಸೇರಿದಂತೆ ಇತರ ಸಾರ್ವಜನಿಕ ಸೇವೆಗಳ ಇಲಾಖೆಗಳೇ ಸುಮಾರು 2 ಸಾವಿರ ಕೋಟಿ ರೂ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ಇದು ಬೆಸ್ಕಾಂಗೆ ತೀವ್ರ ಸಂಕಷ್ಟವನ್ನು ಉಂಟುಮಾಡುತ್ತಿದೆ. ಇದು ನ್ಯಾಯವೇ ಎಂಬುದು ಸಾರ್ವಜನಿಕರ ಪ್ರಶ್ನೆ.
ಕೆಲವು ಇಲಾಖೆಗಳಿಗೆ ಆದ್ಯತೆಯ ಮೇರೆಗೆ ಸಾರ್ವಜನಿಕ ಹಿತಾಸಕ್ತಿಯ ಬಿಲ್ ಬಾಕಿ ವಸೂಲಿಯ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರಿ ಸಂಸ್ಥೆಗಳಾಗಿರುವುದರಿಂದ ಬಾಕಿ ಬಿಲ್ ಹಣ ಬಂದೇ ಬರುತ್ತದೆ. ಇದಕ್ಕೆ ಸರ್ಕಾರವೂ ಸೂಕ್ತ ಕ್ರಮಗಳನ್ನು ಜರುಗಿಸಲಿದೆ ಎಂದು ಹಿರಿಯ ಬೆಸ್ಕಾಂ ಅಧಿಕಾರಿ ರಾಮಾಂಜಿ ಹೇಳಿದ್ದಾರೆ.
ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಇಲಾಖೆಗಳ ವಿವರ:
- ಆರ್‌ಡಿಪಿಆರ್ - 369.96 ಕೋಟಿ ರೂ.
- ನಗರಾಭಿವೃದ್ಧಿ - 41.20 ಕೋಟಿ ರೂ.
- ಬಿಬಿಎಂಪಿ- 1091.59 ಕೋಟಿ ರೂ.
- ಜಲಮಂಡಳಿ- 566.12 ಕೋಟಿ ರೂ.
- ವಾಣಿಜ್ಯ ಕೈಗಾರಿಕಾ ಇಲಾಖೆ- 15.27 ಕೋಟಿ ರೂ.
- ಸಣ್ಣ ನೀರಾವರಿ ಇಲಾಖೆ - 0.22 ಕೋಟಿ ರೂ.
- ರಾಜ್ಯ ಸರ್ಕಾರದ ಇತರ ಇಲಾಖೆಗಳು- 54.34 ಕೋಟಿ ರೂ.
- ಕೇಂದ್ರ ಸರ್ಕಾರದ ಇಲಾಖೆಗಳು- 1.30 ಕೋಟಿ ರೂ.
ಇದನ್ನೂ ಓದಿ: ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಜೀವಗಳ ಬಲಿ : ಹೈಕೋರ್ಟ್ ತರಾಟೆ