ಹಾವೇರಿ: ಇಲ್ಲಿನ ಅನಿಲ್ ಮತ್ತು ಸಂಗೀತಾ ಶೇಟ್ ದಂಪತಿಗೆ ಇಬ್ಬರು ಮಕ್ಕಳು. ಆದರೆ ಕಳೆದ ವರ್ಷ ಮಗ ಸಂದೇಶ ಅಪಘಾತದಲ್ಲಿ ಅಸುನೀಗಿದ್ದರು. ಇದರಿಂದ ತೀವ್ರ ದುಃಖಿತರಾದ ದಂಪತಿ, ಮಗನ ನೆನಪಿಗಾಗಿ ಆತನ ಜನ್ಮದಿನದಂದು 'ಸಂದೇಶ' ಎಂಬ ಗೋಶಾಲೆ ತೆರೆದಿದ್ದರು.
ಕಳೆದ ವರ್ಷ ಒಂದು ಹಸುವಿನಿಂದ ಆರಂಭವಾದ ಗೋಶಾಲೆಗೆ ಇದೀಗ ಒಂದು ವರ್ಷ. ಈಗ ಇಲ್ಲಿ 38 ಹಸುಗಳಿವೆ. ಹಾವೇರಿ ಸಮೀಪದ ಗಾಂಧಿಪುರ ಗ್ರಾಮದ ಹೊರವಲಯದಲ್ಲಿ ಸುಮಾರು ಒಂದೆಕರೆ ಜಮೀನು ಖರೀದಿಸಿ ವಿಶಾಲವಾದ ಗೋಶಾಲೆ ತೆರೆದಿದ್ದಾರೆ. ಅನಾಥ, ಗಾಯಗೊಂಡ ಹಸುಗಳನ್ನು ಇಲ್ಲಿ ಸಾಕಲಾಗುತ್ತಿದೆ. ದಿನದಿಂದ ದಿನಕ್ಕೆ ಹಸುಗಳ ಸಂಖ್ಯೆ ಹೆಚ್ಚುತ್ತಿದೆ. ನಿತ್ಯ ಗೋಶಾಲೆಗೆ ಬರುವ ದಂಪತಿ ಹಸುಗಳಿಗೆ ಮೇವು, ನೀರು ಕುಡಿಸುತ್ತಾರೆ.
ಸಂಗೀತಾ ಶೇಟ್ ಅವರು ಇಲ್ಲಿರುವ ಎಲ್ಲ ಹಸುಗಳಿಗೂ ನಾಮಕರಣ ಮಾಡಿದ್ದು, ಆ ಹೆಸರುಗಳಿಂದಲೇ ಅವುಗಳನ್ನು ಕರೆಯುತ್ತಾರೆ. ಸಂಗೀತಾ ಶೇಟ್ ಮತ್ತು ಅನಿಲ್ ಗೋಶಾಲೆಗೆ ಆಗಮಿಸುತ್ತಿದ್ದಂತೆ ಹಸುಗಳು ಎದ್ದು ನಿಲ್ಲುತ್ತವೆ. ಗೋಶಾಲೆ ತೆರೆದು ಬುಧವಾರಕ್ಕೆ ಒಂದು ವರ್ಷ. ಈ ಹಿನ್ನೆಲೆಯಲ್ಲಿ ನಿನ್ನೆ ದಂಪತಿ ತಮ್ಮ ಮಗನ 22ನೇ ಜನ್ಮದಿನ ಮತ್ತು ಗೋಶಾಲೆಯ ಮೊದಲ ವಾರ್ಷಿಕೋತ್ಸವ ಆಚರಿಸಿದರು.

ಗೋಶಾಲೆಗೆ ಹುಕ್ಕೇರಿ ಮಠದ ಸದಾಶಿವ ಶ್ರೀ, ಅಗಡಿ ಅಕ್ಕಿಮಠದ ಗುರುಲಿಂಗ ಶ್ರೀ ಮತ್ತು ಮಲ್ಲೇದೇವಪುರದ ಮಹಾಂತ ಬಸವಲಿಂಗ ಶ್ರೀಗಳನ್ನು ಕರೆದು ಕಾರ್ಯಕ್ರಮ ನಡೆಸಿ, ಅತಿಥಿಗಳನ್ನು ಸತ್ಕರಿಸಿದರು.

"ಯಾವಾಗ ಮುಂಜಾನೆ ಆಗುತ್ತೆ, ಯಾವಾಗ ಗೋಶಾಲೆಗೆ ಹೋಗುತ್ತೇನೆ, ಯಾವಾಗ ನನ್ನ ಮಗನನ್ನು ಕಾಣುತ್ತೇನೆ ಎನ್ನುವ ಕಾತುರತೆ ನನ್ನಲ್ಲಿ ಮನೆ ಮಾಡಿದೆ. ಗೋಶಾಲೆಯಲ್ಲೇ ನನ್ನ ಮಗನನ್ನು ನಾನು ಕಾಣುತ್ತಿದ್ದು, ಇದನ್ನು ಬಿಟ್ಟು ಮನೆಗೆ ಹೋಗಲು ಮನಸ್ಸೇ ಆಗದು. ಮಗ ಸಂದೇಶನ ತೊಟ್ಟಿಲಂತೆ ಈ ಗೋಶಾಲೆ ನನಗೆ ಭಾಸವಾಗುತ್ತಿದೆ. ಇಲ್ಲಿರುವ ಹಸುಗಳೆಲ್ಲವೂ ನನ್ನ ಮಕ್ಕಳಂತೆ" ಅಂತಾರೆ ಸಂಗೀತಾ.

ಇದನ್ನೂ ಓದಿ: ಕೇವಲ 3ಗಂಟೆಯಲ್ಲಿ ಬೆಳಗಾವಿಯಿಂದ ಬೆಂಗಳೂರು ತಲುಪಿದ ಯಕೃತ್!:ಸಾವಿನಲ್ಲೂ ಶ್ರೇಷ್ಠತೆ ಸಾರಿದ 16 ವರ್ಷದ ಬಾಲಕ