ಬೆಂಗಳೂರು: ತಪ್ಪಿತಸ್ಥ ನೌಕರನಿಗೆ ನೀಡುವ ಶಿಕ್ಷೆಯು ಆತ ಎಸಗಿದ ಅಪರಾಧಕ್ಕೆ ಅನುಗುಣವಾಗಿರಬೇಕು. ಆ ನೌಕರನ ಸುದೀರ್ಘವಾಗಿ ಕಳಂಕರಹಿತರಾಗಿ ಸೇವೆ ಸಲ್ಲಿಸಿದ ಅವಧಿ, ಆತ ಪಡೆದಿರುವ ಬಡ್ತಿ, ನಿವೃತ್ತಿಗೆ ಇರುವ ಸಮಯ ಮತ್ತಿತರ ಅಂಶಗಳನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.
ಸಿಂಡಿಕೇಟ್ ಬ್ಯಾಂಕ್‌ನ ಮಾಜಿ ಉದ್ಯೋಗಿ, ಬೆಂಗಳೂರಿನ ನಾಗರಭಾವಿಯ ವಾಸಿ ಎಂ.ಆರ್.ನಾಗರಾಜನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ್ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರು ಈಗಾಗಲೇ ನಿವೃತ್ತರಾಗಿರುವುದರಿಂದ ಈ ಹಂತದಲ್ಲಿ ವಜಾ ಆದೇಶ ರದ್ದುಗೊಳಿಸುವುದು ಮತ್ತು ಪುನಃ ಕೆಲಸಕ್ಕೆ ತೆಗೆದುಕೊಳ್ಳುವಂತೆ ಆದೇಶ ನೀಡಲಾಗದು ಎಂದು ಪೀಠ ತಿಳಿಸಿದೆ. ಅಲ್ಲದೆ, ಅರ್ಜಿದಾರರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಬ್ಯಾಂಕ್ ಒದಗಿಸಬೇಕಾಗಿತ್ತು. ಇಂತಹ ವಿಚಾರಗಳಲ್ಲಿ ಬ್ಯಾಂಕ್ ಆರೋಪಗಳ ಕುರಿತು ವರದಿಗಳನ್ನು ಮೇಲ್ಮನವಿದಾರರಿಗೆ ಒದಗಿಸಬೇಕಿತ್ತು. ಕನಿಷ್ಠ ತನಿಖಾ ದಾಖಲೆಗಳನ್ನು ಏಕ ಸದಸ್ಯಪೀಠದ ಮುಂದಾದರೂ ಸಲ್ಲಿಸಬಹುದಿತ್ತು. ಆದರೆ ಪ್ರಸ್ತುತದ ಪ್ರಕರಣದಲ್ಲಿ ಈ ಪ್ರಕ್ರಿಯೆ ನಡೆದಿಲ್ಲ ಎಂದು ಬ್ಯಾಂಕ್‌ನ ಅಧಿಕಾರಿಗಳ ಕ್ರಮಕ್ಕೆ ಪೀಠ ಬೇಸರ ವ್ಯಕ್ತ ಪಡಿಸಿದೆ.
ಮೇಲ್ಮನವಿದಾರರು ಸೇವಾ ಅವಧಿಯಲ್ಲಿ ಉತ್ತಮ ಸೇವೆಗಾಗಿ ಪ್ರಮಾಣ ಪತ್ರವನ್ನೂ ಪಡೆದಿದ್ದಾರೆ. ಹಾಗಾಗಿ ಈ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಆದರೆ ಸಂಪೂರ್ಣ ಕ್ಲೀನ್‌ಚಿಟ್ ನೀಡಲಾಗದು. ಬದಲಿಗೆ ಬ್ಯಾಂಕ್ ಸೇವೆಯಿಂದ ವಜಾಗೊಳಿಸುವ ಬದಲು ಕಡ್ಡಾಯ ನಿವೃತ್ತಿ ಶಿಕ್ಷೆಯನ್ನು ನೀಡಬಹುದಾಗಿದೆ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ಮೇಲ್ಮನವಿದಾರ ನಾಗರಾಜನ್ ಅವರು 1979ರಲ್ಲಿ ಬ್ಯಾಂಕ್‌ನಲ್ಲಿ ಗುಮಾಸ್ತರಾಗಿ ಸೇವೆಗೆ ಸೇರಿದ್ದರು. ಆನಂತರ 1996ರಲ್ಲಿ ಮೊದಲ ಬಡ್ತಿ ಪಡೆದು ಅಧಿಕಾರಿಯಾಗಿದ್ದರು. ಅದಾದ ಮರು ವರ್ಷವೇ ಮ್ಯಾನೇಜರ್ ಆಗಿ ಬಡ್ತಿ ಹೊಂದಿದ್ದಾರೆ ಮತ್ತು ಸ್ಟಾರ್ ಫರ್ಮಾಮರ್‌ಪ್ರಶಸ್ತಿ ಪಡೆದಿದ್ದಾರೆ. 400 ಕೋಟಿ ಸಾಲ ವಸೂಲು ಮಾಡಿ ಉತ್ತಮ ಉದ್ಯೋಗಿ ಎಂದು ಪ್ರಮಾಣಪತ್ರ ಪಡೆದಿದ್ದರು. ಆದರೆ, ನಿಷ್ಠರಲ್ಲದ ಸಾಲಗಾರರಿಗೆ ಮನ ಬಂದಂತೆ ಸಾಲ ಮಂಜೂರಾತಿ ಮಾಡಿರುವುದು ಮತ್ತು ಮರು ಪಾವತಿಗೆ ಪಡೆಯಬೇಕಿದ್ದ ಭದ್ರತೆಗಳಲ್ಲಿ ರಾಜಿ ಮಾಡಿಕೊಂಡಿರುವ ಆರೋಪವಿತ್ತು. ಇದೇ ಕಾರಣದಿಂದ ಬ್ಯಾಂಕ್ ಅವರನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿತ್ತು.
ಅರ್ಜಿದಾರರು, ತನಗೆ ತಾನು ಕೇಳಿದ್ದರೂ ಬ್ಯಾಂಕ್ ತನಗೆ ತನಿಖಾ ವರದಿಯ ಪ್ರತಿಯನ್ನು ನೀಡಿಲ್ಲ. ಹಾಗಾಗಿ ತಾನು ಯಾವ ರೀತಿ ರಕ್ಷಣೆ ಪಡೆಯಲು ಸಾಧ್ಯವಿಲ್ಲ. ಎರಡನೆಯದಾಗಿ, ತಮ್ಮ ವಿರುದ್ಧ ಆರೋಪಗಳನ್ನು ಪರಿಗಣಿಸುವಾಗ ಶಿಸ್ತು ಪ್ರಾಧಿಕಾರ ಮತ್ತು ಮೇಲ್ಮನವಿ ಪ್ರಾಧಿಕಾರ ಎರಡೂ ಸಹ ಯಾವುದೇ ಸಾಕ್ಷ್ಯಾಧಾರಗಳನ್ನು ಪರಿಗಣಿಸಿಲ್ಲ. ಹಾಗಾಗಿ ತಮ್ಮ ವಜಾ ಆದೇಶವನ್ನು ರದ್ದುಗೊಳಿಸಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.
ಆದರೆ ಈ ವಾದವನ್ನು ನಿರಾಕರಿಸಿದ್ದ ಬ್ಯಾಂಕ್, ಅಂತರ-ನ್ಯಾಯಾಲಯ ಮೇಲ್ಮನವಿ ವ್ಯಾಪ್ತಿ ಅತ್ಯಂತ ಸೀಮಿತವಾದುದು. ಶಿಸ್ತು ಪ್ರಾಧಿಕಾರ ಆರೋಪಗಳನ್ನು ದಾಖಲು ಮಾಡಿದೆ ಮತ್ತು ಅದನ್ನು ಮೇಲ್ಮನವಿ ಪ್ರಾಧಿಕಾರ ಒಪ್ಪಿದೆ. ಅದನ್ನು ರಿಟ್ ನ್ಯಾಯಾಲಯ ಪರಿಶೀಲನೆ ಮಾಡಲಾಗದು. ಸಹಜ ನ್ಯಾಯ ಸೇರಿದಂತೆ ಎಲ್ಲಾನಿಯಮಗಳನ್ನು ಪಾಲನೆ ಮಾಡಲಾಗಿದೆ ಎಂದು ಹೇಳಿತ್ತು.
ಇದನ್ನೂ ಓದಿ: ಭೂಸ್ವಾಧೀನ, ಡಿನೋಟಿಫೀಕೇಷನ್ ಮಾಹಿತಿಯನ್ನು ಗೆಜೆಟ್‌ನಲ್ಲಿ ಪ್ರಕಟಿಸಲು ಸಿಎಸ್‌ಗೆ ನಿರ್ದೇಶನ - High Court