ಗಂಗಾವತಿ: ಎಸ್ಎಸ್ಎಲ್ಸಿ ಪರೀಕ್ಷೆ-1 ಫಲಿತಾಂಶ ಪ್ರಕಟವಾಗಿದೆ. ಜಯನಗರದ ಬೈಪಾಸ್ ರಸ್ತೆಯಲ್ಲಿರುವ ಮಹಾನ್ ಕಿಡ್ಸ್ ಶಾಲೆಯ ರೇವಂತ್ ಕುಮಾರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಐದನೇ ಸ್ಥಾನ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಮೊದಲ ಸ್ಥಾನ ಗಳಿಸುವ ಮೂಲಕ ಸಾಧನೆಗೈದಿದ್ದಾರೆ.
ರೇವಂತ್ ಕುಮಾರ 625 ಅಂಕಕ್ಕೆ 621 ಅಂಕ ಗಳಿಸಿ ಐದನೇ ರ‍್ಯಾಂಕ್ ಗಳಿಸಿದ್ದಾರೆ. ಇಂಗ್ಲೀಷ್ನಲ್ಲಿ 123, ಕನ್ನಡ ಮತ್ತು ಸಾಮಾಜಿಕ ವಿಜ್ಞಾನದಲ್ಲಿ ತಲಾ 99, ಹಿಂದಿ, ಗಣಿತ ಮತ್ತು ವಿಜ್ಞಾನದಲ್ಲಿ ತಲಾ ನೂರಕ್ಕೆ 100 ಅಂಕ ಪಡೆದುಕೊಂಡಿದ್ದಾರೆ.
ಜಿಲ್ಲೆಯ ಐದೂ ಸ್ಥಾನಗಳು ಗಂಗಾವತಿಗೆ: ಗುರುವಾರ ಪ್ರಕಟವಾದ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಅತಿಹೆಚ್ಚು ಅಂಕ ಪಡೆದ ಕೊಪ್ಪಳ ಜಿಲ್ಲೆಯ ಐದು ಮಕ್ಕಳ ಪೈಕಿ ಐದೂ ಮಕ್ಕಳು ಗಂಗಾವತಿ ತಾಲೂಕಿನ ವಿವಿಧ ಶಾಲೆಗಳಿಗೆ ಸೇರಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಮಾಹಿತಿ ನೀಡಿದ್ದಾರೆ.
ರೇವಂತ್ ಕುಮಾರ 625ಕ್ಕೆ 621 ಅಂಕ ಪಡೆದು ಕೊಪ್ಪಳ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದರೆ, ಮಲಕನಮರಡಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಮಹಾಲಕ್ಷ್ಮಿ ಎಂಬ ವಿದ್ಯಾರ್ಥಿನಿ 613 ಅಂಕದೊಂದಿಗೆ ಎರಡನೇ ಸ್ಥಾನ, ಗಂಗಾವತಿಯ ಅಕ್ಷರ ಪಬ್ಲಿಕ್ ಶಾಲೆಯ ಸುಪ್ರಜಾ ಎಂಬ ವಿದ್ಯಾರ್ಥಿನಿ 612 ಅಂಕದೊಂದಿಗೆ ಜಿಲ್ಲೆಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಎಸ್ಎಸ್ಎಲ್ಸಿ ಫಲಿತಾಂಶ: 15 ರಿಂದ 23 ನೇ ಸ್ಥಾನಕ್ಕೆ ಇಳಿಕೆ ಕಂಡ ದಾವಣಗೆರೆ ಜಿಲ್ಲೆ - SSLC result
ಶ್ರೀರಾಮನಗರದ ದೊನ್ನೆಪೂಡಿ ಸರೋಜಿನಿ ದೇವಿ ಇಂಗ್ಲೀಷ್ ಮೀಡಿಯಂ ಶಾಲೆಯ ಯುವರಾಜ ಜೀರಾಳ ಮತ್ತು ಕಾರಟಗಿಯ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯ ಸಾಯಿ ಗಣೇಶ ಎಂಬ ವಿದ್ಯಾರ್ಥಿಗಳು ತಲಾ 611 ಅಂಕದೊಂದಿಗೆ ನಾಲ್ಕು ಮತ್ತು ಐದನೇ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಬಿಇಒ ತಿಳಿಸಿದ್ದಾರೆ.
ಇದನ್ನೂ ಓದಿ: ಸಿ.ಎಂ.ಇಬ್ರಾಹಿಂ ಉಚ್ಚಾಟನೆ: ದೇವೇಗೌಡ, ಕುಮಾರಸ್ವಾಮಿಗೆ ಹೈಕೋರ್ಟ್ ನೋಟಿಸ್ - CM Ibrahim Expel case
ಜಿಲ್ಲಾವಾರು ಫಲಿತಾಂಶದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಶೇ.61.16ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ಮೂಲಕ ಈ ಬಾರಿ ಜಿಲ್ಲೆ 32ನೇ ಸ್ಥಾನದಲ್ಲಿದೆ. ಕಳೆದ ಬಾರಿ 16ನೇ ಸ್ಥಾನದಲ್ಲಿತ್ತು.
ಇನ್ನು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊಣ್ಣೂರು 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ. ಹಾಗೆಯೇ 7 ವಿದ್ಯಾರ್ಥಿಗಳು 625ಕ್ಕೆ 624 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ.