ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಜಂಬೂ ಸವಾರಿ ದಿನ ಚಿನ್ನದ ಅಂಬಾರಿ ಹೊರುವ ಗಜಪಡೆ ಹಾಗೂ ಮೆರವಣಿಗೆಯಲ್ಲಿ ಭಾಗವಹಿಸುವ ಕುದುರೆಗಳಿಗೆ ಕುಶಾಲತೋಪುಗಳ ಶಬ್ದಕ್ಕೆ ಹೆದರದಂತೆ ತಾಲೀಮು ನೀಡಲಾಗುತ್ತಿದೆ. ಈ ಕುಶಾಲತೋಪು ತಾಲೀಮಿನ ಮೊದಲನೇ ದಿನದ ನಾಲ್ಕನೇ ಹಂತದ ವೇಳೆ ದಸರಾ ಗಜಪಡೆ ಏಕಲವ್ಯ ಹಾಗೂ ಹಿರಣ್ಯ ಆನೆಗಳು ಗಾಬರಿಗೊಂಡಿದ್ದು, ಅವುಗಳನ್ನು ಮಾವುತರು-ಕಾವಾಡಿಗಳು ಸಮಾಧಾನಪಡಿಸಿದರು.
ನಗರದ ವಸ್ತು ಪ್ರದರ್ಶನ ಆವರಣದ ಪಾರ್ಕಿಂಗ್ ಸ್ಥಳದಲ್ಲಿ ದಸರಾ ಗಜಪಡೆ ಹಾಗೂ ಅಶ್ವದಳಕ್ಕೆ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಯಿತು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಯನ್ನು ಅರಮನೆಯಿಂದ ಕರೆದುಕೊಂಡು ಹೋಗಿ, ಮೈದಾನದಲ್ಲಿ ಸಾಲಾಗಿ ನಿಲ್ಲಿಸಲಾಯಿತು. ಬಳಿಕ ಗಜಪಡೆಯ ಮುಂಭಾಗದಲ್ಲಿ ಕುಶಾಲತೋಪು ಹಾರಿಸುವ ಫಿರಂಗಿಗಳನ್ನು ಇಟ್ಟು ತಾಲೀಮು ನಡೆಸಲಾಯಿತು. ಇದಕ್ಕೂ ಮುನ್ನ ನಾಡದೇವತೆ ಪೂಜೆ ಸಲ್ಲಿಸಲಾಯಿತು. ತದನಂತರ, ಫಿರಂಗಿಗಳಿಂದ 21 ಸುತ್ತು ಕುಶಾಲತೋಪು ಸಿಡಿಸುವಿಕೆಯು ಮೊದಲ ದಿನದ ಅಭ್ಯಾಸದಲ್ಲಿ ನಡೆಯಿತು.
ಗಲಿಬಿಲಿಗೊಂಡ ಆನೆಗಳು: ಮೊದಲನೇ ದಿನದ ನಾಲ್ಕನೇ ಹಂತದ ಸಿಡಿಮದ್ದು ತಾಲೀಮಿನ ವೇಳೆ ಈ ಘಟನೆ ನಡೆಯಿತು. ಈ ವೇಳೆ ಸಿಡಿಮದ್ದು ತಾಲೀಮಿಗೆ ಏಕಲವ್ಯ ಹಾಗೂ ಹಿರಣ್ಯ ಆನೆಗಳು ಬೆಚ್ಚಿ ಗಲಿಬಿಲಿಗೊಂಡವು. ಆಗ ಆನೆಗಳ ಮಾವುತರು - ಕಾವಾಡಿಗಳು ಈ ಎರಡು ಆನೆಗಳನ್ನು ಹತೋಟಿಗೆ ತಂದರು. ಈ ಸಂದರ್ಭದಲ್ಲಿ ಅಭಿಮನ್ಯು ಶಬ್ಧಕ್ಕೆ ಹೆದರದೆ ಆರಾಮಾಗಿ ನಿಂತಿತ್ತು.
ಸೆಪ್ಟಂಬರ್ 26ರ ಇಂದು ಮೊದಲ ಹಂತದ ತಾಲೀಮು ನಡೆದರೆ, ಸೆಪ್ಟಂಬರ್ 29ರಂದು 2ನೇ ಹಂತ ಹಾಗೂ ಅಕ್ಟೋಬರ್ 1ರಂದು 3ನೇ ಹಂತದ ಗಜಪಡೆಗೆ ಸಿಡಿಮದ್ದು ಸಿಡಿಸುವ ತಾಲೀಮು ನಡೆಯಲಿದೆ. ಆ ಮೂಲಕ ಗಜಪಡೆಯನ್ನು ದಸರಾ ಜಂಬೂ ಸವಾರಿಯ ದಿನ ಕುಶಾಲತೋಪು ಸಿಡಿಸುವ ಸಂದರ್ಭದಲ್ಲಿ ಸಿಡಿಮದ್ದು ಶಬ್ಧಕ್ಕೆ ಹೆದರದ ರೀತಿಯಲ್ಲಿ ತರಬೇತಿ ನೀಡಲಾಗುತ್ತಿದೆ.
ಶ್ರೀರಂಗಪಟ್ಟಣ ದಸರಾಗೆ ಗಜಪಡೆ ಆಯ್ಕೆ: ''ಈಗಾಗಲೇ ದಸರಾ ಗಜಪಡೆಗೆ 3 ಹಂತದ ತಾಲೀಮುಗಳನ್ನು ನಡೆಸಲಾಗಿದೆ. ಇಂದು 4ನೇ ಹಂತದ ತಾಲೀಮು ಸಿಡಿಮದ್ದು ಸಿಡಿಸುವ ತಾಲೀಮನ್ನು ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ಜೊತೆಗೂಡಿ ಗಜಪಡೆ ಹಾಗೂ ಅಶ್ವದಳಕ್ಕೆ ನಡೆಸಲಾಗಿದೆ. ಎಲ್ಲಾ ಆನೆಗಳು ಆರೋಗ್ಯವಾಗಿವೆ. ಈ ಬಾರಿಯ ಶ್ರೀರಂಗಪಟ್ಟಣ ದಸರಾಗೆ ಮಹೇಂದ್ರ, ಹಿರಣ್ಯ, ಲಕ್ಷ್ಮೀ ಆನೆಗಳನ್ನ ಆಯ್ಕೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಜೊತೆಗೆ ಮೈಸೂರಿನ ದಸರಾ ಜಂಬೂ ಸವಾರಿಯಲ್ಲಿನ ನಿಶಾನೆ ಆನೆ ಹಾಗೂ ನೌಪಥ್ ಆನೆ ಯಾವುದು ಎಂಬುದು ಇನ್ನೂ ಆಯ್ಕೆ ಆಗಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗುವುದು'' ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದರು.
ಕುಶಾಲತೋಪು ತಾಲೀಮಿನಲ್ಲಿ 35 ಕುದುರೆಗಳು ಭಾಗಿ: ''ದಸರಾ ಸಿದ್ಧತೆಗಳ ಬಗ್ಗೆ ಮಾಧ್ಯಮಗಳಿಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು. ಇಂದು ದಸರಾ ಗಜಪಡೆ ಹಾಗೂ ಪೊಲೀಸ್ ಅಶ್ವದಳಕ್ಕೆ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಗಿದೆ. ಜಂಬೂ ಸವಾರಿಯ ದಿನ ಪುಷ್ಪಾರ್ಚನೆ ಹಾಗೂ ಬನ್ನಿಮಂಟಪದ ಪಂಜಿನ ಕವಾಯತು ವೇಳೆ 21 ಕುಶಾಲತೋಪು ಸಿಡಿಸಲಾಗುತ್ತೆ. ಇಂದಿನ ಕುಶಾಲತೋಪು ತಾಲೀಮಿನಲ್ಲಿ ಪೊಲೀಸ್ ಇಲಾಖೆಯ 35 ಅಶ್ವದಳ ಭಾಗವಹಿಸಿತ್ತು'' ಎಂದು ಕಾನೂನು ಸುವ್ಯವಸ್ಥೆ ಡಿಸಿಪಿ ಮುತ್ತುರಾಜು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ : ಮೈಸೂರು ದಸರಾ: ಗಜಪಡೆ ಕ್ಯಾಂಪ್ನಲ್ಲಿ ಲಕ್ಷ್ಮೀ ಜೊತೆ ಭೀಮನ ತುಂಟಾಟ - DASARA ELEPHANTS PLAYING