ಹಾವೇರಿ: ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಈ ವಾರ ದಾಖಲೆ ಪ್ರಮಾಣದ ಮೆಣಸಿನಕಾಯಿ ಆವಕವಾಗಿದೆ. ಮಾರುಕಟ್ಟೆಗೆ ಒಂದೇ ದಿನ ಸುಮಾರು ನಾಲ್ಕು ಲಕ್ಷ ಚೀಲಗಳ ಆವಕವಾಗಿದ್ದು, ಮಾರುಕಟ್ಟೆಯಲ್ಲಿ ಜಾಗ ಸಾಲದೇ ಮೆಣಸಿನಕಾಯಿ ಚೀಲಗಳನ್ನು ಇಳಿಸಿಕೊಳ್ಳಲಾರದ ಪರಿಸ್ಥಿತಿ ಉಂಟಾಗಿದೆ.
ಸುಮಾರು 3 ಲಕ್ಷ ಮೂವತ್ತು ಸಾವಿರ ಚೀಲಗಳನ್ನು ಮಾರುಕಟ್ಟೆಯಲ್ಲಿ ಇಳಿಸಿಕೊಂಡರೆ, ಉಳಿದ 60 ಸಾವಿರಕ್ಕೂ ಅಧಿಕ ಮೆಣಸಿನಕಾಯಿ ಚೀಲಗಳನ್ನು ಬ್ಯಾಡಗಿ ತಾಲೂಕು ಕ್ರೀಡಾಂಗಣದಲ್ಲಿ ಇಳಿಸಿಕೊಳ್ಳಲಾಯಿತು. ಎರಡು ದಿನಗಳ ಕಾಲ ರೈತರ ಮೆಣಸಿನಕಾಯಿಗೆ ಲಾಟ್ ನಿರ್ಮಿಸಿ ದರ ನಿಗದಿ ಮಾಡಲಾಗಿತ್ತು.
ಮಾರುಕಟ್ಟೆ ವರ್ತಕ ರಾಜು ಮೊರಗೇರಿ ಈ ಕುರಿತು ಮಾತನಾಡಿ, 'ಇಷ್ಟು ಪ್ರಮಾಣದ ಆವಕವನ್ನು ಮಾರುಕಟ್ಟೆ ಆರಂಭವಾದಾಗಿನಿಂದ ನೋಡಿರಲಿಲ್ಲಾ. ಕಳೆದ ವರ್ಷ ಏಪ್ರಿಲ್ನಲ್ಲಿ 3 ಲಕ್ಷ 26 ಸಾವಿರ ಮೆಣಸಿನಕಾಯಿ ಚೀಲಗಳು ಆವಕವಾಗಿತ್ತು. ಆದರೆ ಈ ವರ್ಷ 3 ಲಕ್ಷ 36 ಸಾವಿರ ಚೀಲಗಳನ್ನು ಮಾರುಕಟ್ಟೆಯಲ್ಲಿ ಮತ್ತು ಉಳಿದ 60 ಸಾವಿರಕ್ಕೂ ಅಧಿಕ ಚೀಲಗಳನ್ನು ಕ್ರೀಡಾಂಗಣದಲ್ಲಿ ಇಳಿಸಿಕೊಂಡಿದ್ದೇವೆ. ಈ ರೀತಿ ನಾಲ್ಕು ಲಕ್ಷ ಮೆಣಸಿನಕಾಯಿ ಚೀಲಗಳು ಆವಕವಾಗಿದೆ. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಆರಂಭವಾದಾಗಿನಿಂದ ಇಷ್ಟು ನೋಡಿರಲಿಲ್ಲಾ. ಇದೊಂದು ದಾಖಲೆ'. ಇನ್ನು 'ಮೆಣಸಿನಕಾಯಿ ಈ ರೀತಿ ಅಧಿಕ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರಲು ಕಾರಣ ಮೆಣಸಿನಕಾಯಿ ಬೆಳೆಯುವ ರೈತರ ಸಂಖ್ಯೆ ಅಧಿಕವಾಗಿರುವುದು. ಅಲ್ಲದೆ ಮೆಣಸಿನಕಾಯಿ ಇಳುವರಿಯಲ್ಲಿ ಏರಿಕೆಯಾಗಿರುವುದು ಈ ರೀತಿಯ ಆವಕ ಏರಿಕೆಗೆ ಕಾರಣ' ಎಂದು ಹೇಳಿದ್ದಾರೆ.
ಇನ್ನು ಆಂಧ್ರಪ್ರದೇಶದ ಗುಂಟೂರು ಮೆಣಸಿನಕಾಯಿ ಮಾರುಕಟ್ಟೆಗಿಂತ ಇಲ್ಲಿ ಅಧಿಕ ದರ ಸಿಗುವ ಕಾರಣ ಸುಮಾರು 600, 700 ಕೀಲೋಮೀಟರ್ ದೂರದಿಂದ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ರೈತರು ತಮ್ಮ ಉತ್ಪನ್ನ ತಂದು ಮಾರಾಟ ಮಾಡುತ್ತಾರೆ. ಮತ್ತೊಂದು ಪ್ರಮುಖ ಕಾರಣ ಎಂದರೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯ ಪಾರದರ್ಶಕತೆ ಮತ್ತು ಇ ಟೆಂಡರ್ ವ್ಯವಸ್ಥೆ. ಇಲ್ಲಿಯ ವರ್ತಕರು ಯಾವುದೇ ಕಾರಣಕ್ಕೂ ರೈತರಿಗೆ ಮೋಸವಾಗಲು ಬಿಡುವುದಿಲ್ಲಾ. ಅಲ್ಲದೆ ಯಾವುದೇ ರೀತಿಯ ವಂಚನೆಯನ್ನು ಇಲ್ಲಿ ವರ್ತಕರು ಸಹಿಸುವುದಿಲ್ಲಾ. ಈ ನಂಬಿಕೆಯಿಂದ ಈ ಮಾರುಕಟ್ಟೆಗೆ ವರ್ಷದಿಂದ ವರ್ಷಕ್ಕೆ ಮೆಣಸಿನಕಾಯಿ ಮಾರಾಟ ಮಾಡಲು ರೈತರು ಬರುತ್ತಿದ್ದಾರೆ ಎಂದು ವರ್ತಕ ಎಸ್.ಆರ್.ಪಾಟೀಲ್ ಹೇಳಿದ್ದಾರೆ.
ಈ ವರ್ಷ ಅಧಿಕ ಮಳೆಯಾಗದ ಕಾರಣ ಮೆಣಸಿನಕಾಯಿ ಬೆಳೆಗೆ ಫಂಗಸ್ ಸೇರಿದಂತೆ ಯಾವುದೇ ರೋಗಗಳು ಬಂದಿಲ್ಲಾ. ಅಲ್ಲದೆ ತುಂಗಭದ್ರಾ ಜಲಾಯಶ ಹಾಗೂ ಆಲಮಟ್ಟಿ ಡ್ಯಾಂ ನೀರು ಮೆಣಸಿನಕಾಯಿ ಬೆಳೆಯುವ ರೈತರಿಗೆ ಹೆಚ್ಚು ಉಪಯೋಗವಾಗಿದ್ದು ಇದರಿಂದ ಮೆಣಸಿನಕಾಯಿ ಬೆಳೆಯುವ ರೈತರಿಗೆ ಯಾವುದೇ ಬರಗಾಲದ ಬಿಸಿ ತಟ್ಟಲಿಲ್ಲಾ ಎಂದು ವರ್ತಕ ಎಸ್.ಆರ್.ಪಾಟೀಲ್ ತಿಳಿಸಿದ್ದಾರೆ.
ಉತ್ತರಕರ್ನಾಟಕದ ಪ್ರಮುಖ ಜಿಲ್ಲೆಗಳು ಮತ್ತು ಬಾದಾಮಿ ಬಾಗಲಕೋಟೆ ಮೆಣಸಿನಕಾಯಿ ಬೆಳೆಯು ಅಧಿಕವಾಗಿದ್ದರಿಂದ ಮಾರುಕಟ್ಟೆಗೆ ದಾಖಲೆ ಪ್ರಮಾಣದ ಮೆಣಸಿನಕಾಯಿ ಆವಕವಾಗಿದೆ. ಈ ವರ್ಷ ಮಳೆ ಇನ್ನು ಸ್ವಲ್ಪ ಬಂದಿದ್ದರೆ ಐದು ಲಕ್ಷ ಚೀಲದವರೆಗೆ ಹೋಗುತ್ತಿತ್ತು. ಮೆಣಸಿನಕಾಯಿ ಬೆಳೆಯಲ್ಲಿನ ಹೊಸ ಹೊಸ ತಳಿಗಳು ಪರಿಚಯವಾಗಿದ್ದು ಅಧಿಕ ಪ್ರಮಾಣದಲ್ಲಿ ಇಳುವರಿ ಬಿಡಲಾರಂಭಿಸಿದ್ದು, ಇದು ಸಹ ಮಾರುಕಟ್ಟೆಗೆ ಅಧಿಕ ಪ್ರಮಾಣದ ಆವಕಕ್ಕೆ ಕಾರಣ. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಪ್ರತಿವರ್ಷ ಎರಡು ಸಾವಿರ ಕೋಟಿ ರೂಪಾಯಿಗಿಂತ ಅಧಿಕ ಪ್ರಮಾಣದ ವಹಿವಾಟು ನಡೆಸುತ್ತಿದೆ. ಆದರೆ ಈ ವರ್ಷ ಮಾರುಕಟ್ಟೆಯ ವಹಿವಾಟು ಎರಡು ಸಾವಿರ 500 ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ ಎಂದು ಪಾಟೀಲ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನಾಲ್ಕು ಎಕರೆಯಲ್ಲಿ 40 ಕ್ವಿಂಟಾಲ್ ಬೆಳ್ಳುಳ್ಳಿ; ಬರದಲ್ಲೂ ಬಂಗಾರದ ಬೆಳೆ ಪಡೆದ ಹಾವೇರಿಯ ಸಾವಯವ ಕೃಷಿಕರು