ಗಂಗಾವತಿ (ಕೊಪ್ಪಳ): 'ತಾಯಿ, ಪಾಲಕರು, ಪೋಷಕರಿಗೆ ಬೇಡವಾದ ಮತ್ತು ಪರಿತ್ಯಕ್ತ ಮಕ್ಕಳನ್ನು ಸಂರಕ್ಷಣೆ ಮಾಡುವ ಉದ್ದೇಶಕ್ಕೆ ಮಮತೆಯ ತೊಟ್ಟಿಲು ಎಂಬ ಯೋಜನೆ ಜಾರಿ ಮಾಡಲಾಗಿದೆ. ಈ ಮಮತೆಯ ತೊಟ್ಟಿಲಿನ ನಾಲ್ಕು ಮಕ್ಕಳು ವಿದೇಶಕ್ಕೆ ಹಾರಿವೆ' ಎಂದು ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ತಿಳಿಸಿದರು.
ನಗರದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ವಿವಿಧ ಇಲಾಖೆಗಳ ಜಂಟಿ ಪ್ರಾಯೋಕತ್ವದಲ್ಲಿ ಸ್ಥಾಪಿಸಲಾದ 'ಮಮತೆಯ ತೊಟ್ಟಿಲು' ಕಾರ್ಯಕ್ರಮಕ್ಕೆ ಬುಧವಾರ ತೊಟ್ಟಿಲನ್ನು ತೂಗುವುದರ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ, "ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೂ ಪರಿತ್ಯಕ್ತ 19, ಪಾಲಕರೇ ಸ್ವಯಂ ಆಗಿ ಇಲಾಖೆಯ ಸುಪರ್ದಿಗೆ 23 ಮಕ್ಕಳನ್ನು ಒಪ್ಪಿಸಿದ್ದಾರೆ. ಒಟ್ಟು 42 ಮಕ್ಕಳಲ್ಲಿ ಏಳು ಮಕ್ಕಳು ಸಾವನ್ನಪ್ಪಿವೆ. ಮಿಕ್ಕ ಎಲ್ಲ ಮಕ್ಕಳನ್ನು ಸಂರಕ್ಷಣೆ ಮಾಡಲಾಗುತ್ತಿದೆ. ಈ ಪೈಕಿ ಸ್ಪೇನ್, ಸ್ವೀಡನ್ ದೇಶಕ್ಕೆ ತಲಾ ಒಂದು ಮಗು ಹಾಗೂ ಯುಎಸ್ಎ ದೇಶಕ್ಕೆ ಎರಡು ಮಕ್ಕಳನ್ನು ಅಲ್ಲಿನ ಪಾಲಕರು ದತ್ತು ಪಡೆದಿದ್ದಾರೆ. 38 ಮಕ್ಕಳು ಕೊಪ್ಪಳ ಜಿಲ್ಲೆ ಸೇರಿದಂತೆ ನಾನಾ ರಾಜ್ಯದ ವಿವಿಧ ಜಿಲ್ಲೆಗಳಿಗೆ 38 ಮಕ್ಕಳನ್ನು ದತ್ತು ನೀಡಲಾಗಿದೆ. ಹುಟ್ಟುವ ಪ್ರತಿ ಜೀವಿಗೂ ಬದುಕುವ ಹಕ್ಕಿರುತ್ತದೆ. ಹಾಗೆಯೇ ಜನಿಸುವ ಪ್ರತಿ ಮಗುವನ್ನು ಸಂರಕ್ಷಣೆ ಮಾಡಿ ಪೋಷಿಸುವ ಕೆಲಸ ಪಾಲಕರಿಂದ ಆಗಬೇಕು. ಬೇಡವಾದ ಮಗುವಿದ್ದರೆ ಈ ಮಮತೆಯ ತೊಟ್ಟಿಲಲ್ಲಿ ಹಾಕಿದರೆ ಆ ಮಗುವನ್ನು ಸಂರಕ್ಷಣೆ ಮಾಡಲಾಗುವುದು" ಎಂದು ತಿಳಿಸಿದರು.
ಬಳಿಕ ಗಂಗಾವತಿಯ ವಿವಿಧ ಶ್ರೇಣಿಯ ನ್ಯಾಯಾಲಯಗಳ ನ್ಯಾಯಾಧೀಶರಾದ ರಮೇಶ ಗಾಣಿಗೇರ, ಶ್ರೀದೇವಿ ದರಬಾರೆ, ನಾಗೇಶ ಪಾಟೀಲ್ ಮಾತನಾಡಿದರು. ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನಾಚರಣೆ; ಬಿಬಿಎಂಪಿಯಿಂದ ಜಾಗೃತಿ ಜಾಥಾ - International Plastic Bag Free Day