ಬೆಂಗಳೂರು: ಅಂತಿಮ ದರ್ಶನಕ್ಕೆ ಬಂದಾಗ ನಡೆದ ಗಲಾಟೆಯಲ್ಲಿ ಸ್ನೇಹಿತನನ್ನ ಕೊಲೆಗೈದ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನ ಕಾಟನ್ ಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಶರತ್ (26), ನಿರಂಜನ್ (19), ದೀಪಕ್ (24) ಹಾಗೂ ಮನೋಜ್ ಕುಮಾರ್ (20) ಬಂಧಿತ ಆರೋಪಿಗಳು. ಆಗಸ್ಟ್ 22ರಂದು ಕಾಟನ್ ಪೇಟೆಯ ಅಂಜನಪ್ಪ ಗಾರ್ಡನ್ನಲ್ಲಿ ಶರತ್ ಎಂಬಾತನಿಗೆ ಚಾಕು ಇರಿದು ಹತ್ಯೆಗೈಯಲಾಗಿತ್ತು.
ಮೃತ ಶರತ್ ಹಾಗೂ ಆರೋಪಿಗಳು ಒಂದೇ ಏರಿಯಾದವರು. ಆಗಸ್ಟ್ 21ರಂದು ಪರಿಚಿತರೊಬ್ಬರ ಸಾವು ಸಂಭವಿಸಿದ್ದರಿಂದ ಶರತ್ ಹಾಗೂ ಆರೋಪಿಗಳು ಅಂತಿಮ ದರ್ಶನ ಪಡೆಯಲು ಅಂಜನಪ್ಪ ಗಾರ್ಡನ್ಗೆ ಬಂದಿದ್ದರು. ಬೆಳಗಿನಜಾವ ವಾಪಸ್ ತೆರಳುವಾಗ ಕೊಲೆಯಾದ ಶರತ್, ಆರೋಪಿ ಶರತ್ನ ಪತ್ನಿಗೆ ಅವಾಚ್ಯವಾಗಿ ನಿಂದಿಸಿದ್ದ. ಈ ವಿಚಾರವಾಗಿ ಶರತ್ ಹಾಗೂ ಆರೋಪಿಗಳ ನಡುವೆ ವಾಗ್ವಾದ ಆರಂಭವಾದಾಗ ಕೊಲೆಯಾದ ಶರತ್, ಆರೋಪಿ ಶರತ್ನ ಪತ್ನಿಯ ಕೂದಲು ಹಿಡಿದು ಎಳೆದಾಡಿದ್ದ. ಈ ವೇಳೆ ಸ್ಥಳದಲ್ಲಿದ್ದವರು ಜಗಳ ಬಿಡಿಸಿ ಕಳಿಸಿದ್ದರು.
ಅಂತಿಮ ವಿಧಿವಿಧಾನ ಮುಗಿಸಿದ ಬಳಿಕ ಆರೋಪಿಗಳು ಶರತ್ನ ಬಳಿ ಮತ್ತೆ ಜಗಳ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಗಲಾಟೆ ವಿಕೋಪಕ್ಕೆ ತಿರುಗಿದಾಗ ಆರೋಪಿಗಳಾದ ಶರತ್ ಹಾಗೂ ನಿರಂಜನ್, ಶರತ್ಗೆ ಚಾಕುವಿನಿಂದ ಇರಿದಿದ್ದರು. ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದ.
ಈ ಕುರಿತು ಪ್ರಕರಣ ದಾಖಲಿಕೊಂಡಿದ್ದ ಕಾಟನ್ ಪೇಟೆ ಠಾಣಾ ಪೊಲೀಸರು ಪ್ರಮುಖ ಆರೋಪಿಗಳಾದ ಶರತ್, ನಿರಂಜನ್ ಹಾಗೂ ಅವರಿಗೆ ಸಾಥ್ ನೀಡಿದ್ದ ದೀಪಕ್, ಮನೋರಂಜನ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: 5 ಸಾವಿರ ಹಣದ ವಿಚಾರಕ್ಕೆ ರೌಡಿಶೀಟರ್ ಮೇಲೆ ಮಾರಣಾಂತಿಕ ಹಲ್ಲೆ: 9 ಮಂದಿ ಬಂಧನ - assault on a rowdy sheeter