ಮೈಸೂರು: "ನಮ್ಮ ಪಕ್ಷದ ಒಳಗೆ - ಹೊರಗೆ ಈಗ ಶತ್ರುಕಾಟ ಶುರುವಾಗಿದೆ. ಶತ್ರುಗಳ ಸಂಹಾರಕ್ಕೆ ಚಾಮುಂಡಿ ತಾಯಿಯಲ್ಲಿ ಪೂಜೆ ಸಲ್ಲಿಸಿದ್ದೇವೆ. ನಿಶ್ಚಿತವಾಗಿಯೂ ಶತ್ರು ನಾಶವಾಗುತ್ತದೆ" ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಯತ್ನಾಳ್ ಬೆಂಬಲಿಗರೇ ಇಲ್ಲದ ಒಬ್ಬ ನಾಯಕ. ಕಾಂಗ್ರೆಸ್ಗೆ ಬೈದರೆ ಪ್ರಚಾರ ಸಿಗುವುದಿಲ್ಲ ಎಂದು ಯಡಿಯೂರಪ್ಪ ಹಾಗೂ ಅವರ ಮಗನನ್ನು ಬೈಯುತ್ತಿದ್ದಾರೆ. ಆ ಮೂಲಕ ತಾನು ನಾಯಕನಾಗುತ್ತೇನೆ ಎಂದುಕೊಂಡಿದ್ದಾರೆ. ಎಲ್ಲವನ್ನು ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದೆ. ಯತ್ನಾಳ್ ಯಾತ್ರೆಯಲ್ಲಿ ಯಾವುದೇ ಬಿಜೆಪಿ ಕಾರ್ಯಕರ್ತರು ಭಾಗವಹಿಸುತ್ತಿಲ್ಲ. ಪಕ್ಷದ ಒಳಗೆ ಹೊರಗೆ ಇರುವ ಶತ್ರುಗಳ ಸಂಹಾರವನ್ನು ಪಕ್ಷ ಆದಷ್ಟು ಶೀಘ್ರ ಮಾಡಲಿ" ಎಂದು ಹೇಳಿದರು.
ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿ, "ನಮ್ಮ ಪಕ್ಷದಲ್ಲಿ ಇತ್ತೀಚೆಗೆ ಆಂತರಿಕ ಶತ್ರುಗಳ ಸಂಖ್ಯೆ ಜಾಸ್ತಿಯಾಗಿದೆ. ಶತ್ರುಗಳ ನಾಶವಾಗಲೇಬೇಕು. ಶತ್ರು ನಾಶಕ್ಕಾಗಿ ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ್ದೇವೆ. ಆದಷ್ಟು ಬೇಗ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುತ್ತಾರೆ" ಎಂದರು.
"ಬ್ಲ್ಯಾಕ್ಮೇಲ್ ರಾಜಕಾರಣ ನಡೆಯಲ್ಲ. ರಾಜ್ಯದ ಜನ ಇವರನ್ನು ಕ್ಷಮಿಸಲ್ಲ. ಹಿಂದುತ್ವದ ಮುಖವಾಡ ಹಾಕಿಕೊಂಡು ಬಂದಿದ್ದೀರಿ. ಪಕ್ಷದಿಂದ ನೀವೇ ಹೊರಗೆ ಹೋಗಿ. ನಿಮ್ಮ ಹರಕು ಬಾಯಿಯೇ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳ ಸೋಲಿಗೆ ಕಾರಣ. ಬಾಯಿ ಚಟಕ್ಕೋಸ್ಕರ ಮಾತನಾಡುತ್ತೀರಿ. ನಿಮ್ಮ ಶಕ್ತಿ ಏನೂ ಇಲ್ಲ" ಎಂದು ಯತ್ನಾಳ್ ವಿರುದ್ಧ ಗುಡುಗಿದರು.
"ಯತ್ನಾಳ್ ಅವರದ್ದು 4 ಜನರ ಗುಂಪು ಅಷ್ಟೇ. ಅದೊಂದು ತಂಡ ಅಲ್ಲ. ಕಾಂಗ್ರೆಸ್ನಿಂದ ಸುಪಾರಿ ತೆಗೆದುಕೊಂಡು ಪಕ್ಷದ ವಿರುದ್ಧ ಹೋರಾಟ ಮಾಡುತ್ತಿದ್ದೀರಿ. ಯಡಿಯೂರಪ್ಪ ಅವರು ಸೈಕಲ್ ತುಳಿದು ಪಕ್ಷ ಕಟ್ಟಿದ್ದಾರೆ. ಯಡಿಯೂರಪ್ಪ ಅಧ್ಯಕ್ಷರಾದಾಗ, ಸಿಎಂ ಆದಾಗಲೂ ತೊಂದರೆ ಕೊಟ್ಟವರು ನೀವು. ನೀವು, ಮುಡಾ ಪ್ರಕರಣ, ವಾಲ್ಮೀಕಿ ಹಗರಣದ ವಿರುದ್ಧ ಹೋರಾಟ ಮಾಡಬೇಕು. ಆದರೆ ನೀವು ಮಾಡುತ್ತಿರುವುದು ಏನು? ಲೋಕಾಸಭೆಯಲ್ಲಿ ಟಿಕೆಟ್ ವಂಚಿತರು ಹಾಗೂ ಸೋತವರನ್ನು ಸೇರಿಸಿಕೊಂಡು ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ" ಎಂದರು.
ಇದನ್ನೂ ಓದಿ: ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ: ಸುದ್ದಿಗೋಷ್ಠಿ ಸಭೆಯಲ್ಲಿ ಕಾರ್ಯಕರ್ತರ ಗಲಾಟೆ