ಗಂಗಾವತಿ(ಕೊಪ್ಪಳ): ಇತ್ತೀಚೆಗೆ ತಮ್ಮ ನಿವಾಸದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ತಮ್ಮದೇ ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿ ಹರಿಹಾಯ್ದಿದ್ದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಇದೀಗ ಮತ್ತೊಮ್ಮೆ ವಾಗ್ದಾಳಿ ಮಾಡಿದ್ದಾರೆ. ಅನ್ಸಾರಿ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾಜಿ ಎಂಎಲ್ಸಿ ಹೆಚ್.ಆರ್.ಶ್ರೀನಾಥ್ ಅವರ ನಿವಾಸದಲ್ಲಿ ಏ.8 (ಸೋಮವಾರ)ರಂದು ಸಭೆ ಆಯೋಜಿಸಿದ್ದು, ಅಲ್ಲಿಗೆ ಕಾಂಗ್ರೆಸ್ ಪಕ್ಷದ ಯಾವೊಬ್ಬ ನಾಯಕ, ಕಾರ್ಯಕರ್ತರು, ನನ್ನ ಅಭಿಮಾನಿಗಳು ಹೋಗಕೂಡದು ಎಂದು ಅವರು ಕರೆ ನೀಡಿದ್ದಾರೆ.
ಆ ಸಭೆ ಕಾಂಗ್ರೆಸ್ ಪಕ್ಷದ್ದಲ್ಲ, ಕೆಆರ್ಪಿಪಿ ಪಕ್ಷದ್ದು. ಅಲ್ಲಿ ಸಭೆ ನಡೆಸುವವರು ಕಾಂಗ್ರೆಸ್ಸಿಗರಲ್ಲ. ಕೆಆರ್ಪಿಪಿ ನಾಯಕರು, ಅವರು ನನ್ನ ದುಷ್ಮನ್ಗಳು. ಅವರು ಎಂದೆಂದಿಗೂ ಕಾಂಗ್ರೆಸ್ ನಾಯಕರಲ್ಲ. ನನ್ನ ಜೀವ ಇರೋವರೆಗೂ ಶತ್ರುಗಳು ಎಂದು ಅನ್ಸಾರಿ ಕಿಡಿಕಾರಿದ್ದಾರೆ.
ಹೆಚ್.ಆರ್.ಶ್ರೀನಾಥ್, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಬ್ಲಾಕ್ ಅಧ್ಯಕ್ಷ ಶಾಮೀದ್ ಮನಿಯಾರ, ಯೂಥ್ ಕಾಂಗ್ರೆಸ್ ಅಧ್ಯಕ್ಷ ಆಸೀಫ್ ಕೌನೆ, ಮುಖಂಡರಾದ ಹನುಮಂತ ಅರಸನಕೆರಿ, ದೇವರಮನಿ ಮಲ್ಲೇಶ ಮೊದಲಾದವರ ಹೆಸರು ಉಲ್ಲೇಖಿಸಿ ಅನ್ಸಾರಿ ವಾಗ್ದಾಳಿ ಮಾಡಿದ್ದಾರೆ.
ನಾನೊಬ್ಬ ಸಾಬ (ಮುಸಲ್ಮಾನ) ಎಂಬ ಕಾರಣಕ್ಕೆ ಈ ಎಲ್ಲಾ ನಾಯಕರು ನನ್ನ ಮತ್ತು ನನ್ನ ಸಮುದಾಯದ ಏಳ್ಗೆ ಬಯಸದೇ ತುಳಿಯುವ ಉದ್ದೇಶಕ್ಕೆ ದ್ರೋಹ ಬಗೆದಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ವಿಶ್ವಾಸಘಾತುಕ ಕೆಲಸ ಮಾಡಿದ್ದಾರೆ ಎಂದರು.
ಮೇಲ್ನೋಟಕ್ಕೆ ಕಾಂಗ್ರೆಸ್ನಲ್ಲಿ ಇದ್ದಂತೆ ಕಂಡುಬಂದರೂ ಮಲ್ಲಿಕಾರ್ಜುನ ನಾಗಪ್ಪ, ಶ್ರೀನಾಥ್ ಇಬ್ಬರೂ ಒಳಗೊಳಗೆ ರೆಡ್ಡಿಯಿಂದ ಹಣ ಪಡೆದು ಕೆಆರ್ಪಿಪಿಗೆ ಕೆಲಸ ಮಾಡಿದ್ದಾರೆ. ಇವರು ಈ ಹಿಂದೆ, ಇಂದು ಮತ್ತು ಮುಂದೆ ಎಂದೆಂದಿಗೂ ಮುಸಲ್ಮಾನರ ವಿರೋಧಿಗಳು ಎಂದು ತಿಳಿಸಿದರು.
ಈ ಸಭೆಗೆ ಪಕ್ಷದ ಯಾವುದೇ ಮಾನ್ಯತೆ ಇಲ್ಲ. ಹೀಗಾಗಿ ಸಭೆಗೆ ನನ್ನ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಮುಖ್ಯವಾಗಿ ಯಾವೊಬ್ಬ ಮುಸಲ್ಮಾನ ಬಂಧುಗಳೂ ಹೋಗಬಾರದು. ಪವಿತ್ರ ರಂಜಾನ್ ಉಪವಾಸ ಮಾಸಾಚರಣೆಯ ಸಂದರ್ಭದಲ್ಲಿ ಈ ನಿರ್ಧಾರವನ್ನು ಪ್ರತಿಯೊಬ್ಬ ಮುಸಲ್ಮಾನನೂ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಸುಮಾರು ಏಳುವರೆ ನಿಮಿಷದ ಆಡಿಯೋ ಸಂಭಾಷಣೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಅನ್ಸಾರಿ, ಉರ್ದು ಶಬ್ದಗಳನ್ನೊಳಗೊಂಡ ಹಿಂದಿ ಮತ್ತು ಕನ್ನಡದಲ್ಲಿ ಪ್ರತ್ಯೇಕವಾಗಿ ಸಂಭಾಷಣೆಯನ್ನು ರವಾನಿಸಿದ್ದಾರೆ.
ಇದನ್ನೂ ಓದಿ: ಇಕ್ಬಾಲ್ ಅನ್ಸಾರಿಗೆ ಸೂಕ್ತ ಸ್ಥಾನಮಾನದ ಭರವಸೆ ನೀಡಿದ ಸಿಎಂ ಸಿದ್ಧರಾಮಯ್ಯ