ಮೈಸೂರು : ರಾಜಮನೆತನದ ಬಗ್ಗೆ ಸಿದ್ದರಾಮಯ್ಯ ದುರಹಂಕಾರದ ಮಾತುಗಳನ್ನ ಬಿಡಬೇಕು. ಮೈಸೂರಿಗೆ ಮಹಾರಾಜರ ಕೊಡುಗೆ ಅನನ್ಯವಾದುದು ಎಂದು ಮಾಜಿ ಸಚಿವ ಅಶ್ವತ್ಥ್ ನಾರಾಯಣ, ಸಿದ್ದರಾಮಯ್ಯ ಮಹಾರಾಜರ ಬಗ್ಗೆ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದರು. ಮೈಸೂರು ನಗರದ ಹೆಬ್ಬಾಲಿನಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದ್ದ ಮೈಸೂರು - ಕೊಡಗು ಚುನಾವಣಾ ಉಸ್ತುವಾರಿ ಹಾಗೂ ಮಾಜಿ ಸಚಿವ ಡಾ. ಅಶ್ವತ್ಥ್ ನಾರಾಯಣ ಶ್ರೀಗಳಾದ ಸೋಮನಾಥಸ್ವಾಮಿಜಿ ಅವರ ಆಶೀರ್ವಾದ ಪಡೆದ ಬಳಿಕ ಮಾಧ್ಯಮಗಳ ಜೊತೆ ಮಾತಾನಾಡಿದರು.
ಮೈಸೂರು - ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ಸರಿಯಲ್ಲ. ಮಹಾರಾಜರು ಮಾಡಿರುವ ಕೆಲಸ ಎಳ್ಳಷ್ಟೂ ಮಾಡಲು ಸಿದ್ದರಾಮಯ್ಯ ಅವರಿಗೆ ಆಗಿಲ್ಲ. ಮೈಸೂರಿಗೆ ಸಿದ್ದರಾಮಯ್ಯ ಕೊಡುಗೆ ಏನು? ಅವರು ರಾಜಮನೆತನ ಬಗ್ಗೆ ಗೌರವ ಇಟ್ಟುಕೊಂಡು ಮಾತನಾಡಲಿ ಎಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯ ನಾಯಕತ್ವವನ್ನು ಅವರ ಪಕ್ಷದಲ್ಲೇ ಪ್ರಶ್ನೆ ಮಾಡುತ್ತಿದ್ದಾರೆ ಹಾಗೂ ಮುಖ್ಯಮಂತ್ರಿ ಬದಲಾವಣೆ ಕುರಿತು ಪದೇ ಪದೆ ಹೇಳಿಕೆ ನೀಡುತ್ತಿದ್ದಾರೆ. ಅವರ ವಿರುದ್ಧ ಮುಖ್ಯಮಂತ್ರಿಗಳು ಯಾವ ಕ್ರಮ ಕೈಗೊಂಡಿದ್ದೀರಿ ಹಾಗೂ ಸಿದ್ದರಾಮಯ್ಯ ಅವರ ಮಾತನ್ನ ಅವರ ಸಚಿವರು ಹಾಗೂ ಶಾಸಕರೇ ಕೇಳುತ್ತಿಲ್ಲ. ನೀವು ವೀಕ್ ಸಿಎಂ ಎಂದರು.
ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ : ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ. ಜೆಡಿಎಸ್ ಅವರು ಮೂರು ಸೀಟ್ ಕೇಳಿದ್ದರು. ಎಲ್ಲವೂ ಹೈಕಮಾಂಡ್ ಹಂತದಲ್ಲಿ ತೀರ್ಮಾನವಾಗಿತ್ತು. ನಾವು ಅದರ ಬಗ್ಗೆ ಮಾತನಾಡುವುದು ಸರಿಯಲ್ಲ. ಹೆಚ್. ಡಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಸೇರಿದಂತೆ ಎಲ್ಲ ನಾಯಕರಿಗೆ ರಾಜ್ಯಾದ್ಯಂತ ಪ್ರವಾಸ ಮಾಡಲು ಆಹ್ವಾನ ಮಾಡುತ್ತೇವೆ ಎಂದರು.
ಈಗಾಗಲೇ ಮೈಸೂರು - ಕೊಡಗು ಅಭ್ಯರ್ಥಿ ಯದುವೀರ್ ಪ್ರಚಾರ ಆರಂಭಿಸಿದ್ದಾರೆ. ಅವರು ಈಗಾಗಲೇ ಶಾಸಕ ಜಿ. ಟಿ ದೇವೇಗೌಡ ಅವರನ್ನ ಖುದ್ದು ಭೇಟಿಯಾಗಿ ಬೆಂಬಲ ಕೇಳಿದ್ದಾರೆ. ಒಟ್ಟಿಗೆ ಪ್ರಚಾರ ಮಾಡಲು ತೀರ್ಮಾನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ಜೆಡಿಎಸ್ ಮುಖಂಡರನ್ನು ಒಟ್ಟಿಗೆ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ ಮಾಡುತ್ತೇವೆ. ರಾಜಮನೆತನದ ಬಗ್ಗೆ ಜನರಿಗೆ ಗೌರವ ಇದೆ ಎಂದು ತಿಳಿಸಿದರು.
ನಮ್ಮ ಅಭ್ಯರ್ಥಿ ಯದುವೀರ್ ಗೆಲುವು ಸಾಧಿಸಲಿದ್ದಾರೆ ಎಂದ ಅಶ್ವತ್ಥ್ ನಾರಾಯಣ, ಪ್ರತಾಪ್ ಸಿಂಹ ಒಳ್ಳೆ ಕೆಲಸ ಮಾಡಿದ್ದಾರೆ. ಟಿಕೆಟ್ ತಪ್ಪಿರುವ ಕಾರಣ ಸಹಜವಾಗಿಯೇ ಬೇಸರ ಇರುತ್ತದೆ. ಎಲ್ಲವೂ ಕಾಲಾನಂತರ ಸರಿಯಾಗುತ್ತದೆ. ಮೋದಿ ಪರವಾಗಿ ಕೆಲಸ ಮಾಡುವುದಾಗಿ ಪ್ರತಾಪ್ ಸಿಂಹ ಈಗಾಗಲೇ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಪಡುವ ಅಗತ್ಯವಿಲ್ಲ ಎಂದರು.
ಒಕ್ಕಲಿಗ ಅವರಿಗೆ ರಾಜಮನೆತನದ ಬಗ್ಗೆ ಅಭಿಮಾನ ಇದೆ : ರಾಜವಂಶಸ್ಥರ ಜಾತಿ ನೋಡಬಾರದು. ಮೈಸೂರು ರಾಜಮನೆತನದ ಒಡೆಯರ್ ತಮ್ಮ ಒಡವೆಗಳನ್ನ ಅಡವಿಟ್ಟು ಕೆಆರ್ಎಸ್ ಡ್ಯಾಂ ಕಟ್ಟಿದ್ದರು. ಆ ಕಾರಣಕ್ಕೆ ಒಕ್ಕಲಿಗ ಸಮುದಾಯಕ್ಕೆ ರಾಜಮನೆತನದ ಬಗ್ಗೆ ಗೌರವ ಇದೆ. ಒಕ್ಕಲಿಗರು ಹಿಂದು ಮುಂದು ನೋಡದೇ ಯದುವೀರ್ಗೆ ವೋಟ್ ಹಾಕುತ್ತಾರೆ. ಮೈಸೂರು - ಕೊಡಗಿನಲ್ಲಿ ಬಿಜೆಪಿ-ಜೆಡಿಎಸ್ ನಾಯಕರು ಒಟ್ಟಾಗಿ ಕೆಲಸ ಮಾಡಿ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ. ದೇಶಕ್ಕೆ ಮೋದಿ, ಮೈಸೂರಿಗೆ ಯದುವೀರ್ ಎಂದು ಇದೇ ಸಂದರ್ಭದಲ್ಲಿ ಮಾಜಿ ಸಚಿವ ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದರು.
ಇದನ್ನೂ ಓದಿ : ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಾಮಾನ್ಯರೇ: ಯದುವೀರ್ ಒಡೆಯರ್