ಬೆಂಗಳೂರು: ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್ಅನ್ನು ಈ ಬಾರಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ನೀಡಲಾಗಿದೆ. ಈ ಕ್ಷೇತ್ರದ ಸಂಸದರಾದ ಸದಾನಂದ ಗೌಡ ಅವರಿಗೆ ಟಿಕೆಟ್ ಕೈತಪ್ಪಿದೆ. ಈ ಬೆನ್ನಲ್ಲೇ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಸಾಮಾಜಿಕ ಜಾಲತಾಣದ ಮೂಲಕ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪುವುದು ಖಚಿತವಾದ ಹಿನ್ನೆಲೆ ಅವರು ಈ ರೀತಿಯಾಗಿ ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ.
''ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ನನ್ನೆಲ್ಲಾ ಪ್ರೀತಿಯ ಬಂಧುಗಳೇ, ನನಗೆ ಕಳೆದ ಹತ್ತು ವರ್ಷಗಳ ಕಾಲ ಈ ಕ್ಷೇತ್ರದ ಲೋಕಸಭಾ ಸದಸ್ಯನಾಗಿ, ನಿಮ್ಮ ಕೆಲಸ ಮಾಡುವ ಅವಕಾಶವನ್ನು ಮಾಡಿಕೊಟ್ಟು ಆಶೀರ್ವಾದವನ್ನು ಮಾಡಿದ್ದೀರಿ. ನಾನು ನನ್ನ ಶಕ್ತಿ ಮೀರಿ ನಿಮ್ಮ ಸೇವೆಯನ್ನು ಮಾಡುವ ಪ್ರಯತ್ನವನ್ನು ಮಾಡಿದ್ದೇನೆ. ನಿಮ್ಮ ಆಶೀರ್ವಾದದಿಂದ ಕೇಂದ್ರದಲ್ಲಿ ನಮ್ಮೆಲ್ಲರ ಪ್ರೀತಿಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜೊತೆಯಲ್ಲಿ 7 ವರ್ಷಗಳ ಕಾಲ ಕ್ಯಾಬಿನೆಟ್ ಮಂತ್ರಿಯಾಗಿ ಕೆಲಸ ಮಾಡುವ ಅವಕಾಶವನ್ನು ಕೂಡ ಕಲ್ಪಿಸಿದ್ದೀರಿ. ನಾನು ನಿಮ್ಮೆಲ್ಲರಿಗೂ ಚಿರಋಣಿ. ನಿಮ್ಮ ಜೊತೆಗೆ ಇನ್ನು ಮುಂದೆಯೂ ಇರುತ್ತೇನೆ. ಎಲ್ಲರಿಗೂ ನನ್ನ ಅಂತರಾಳದ ಹೃದಯ ತುಂಬಿದ ಧನ್ಯವಾದಗಳು'' ಎಂದು ಸದಾನಂದ ಗೌಡ ಬರೆದುಕೊಂಡಿದ್ದಾರೆ.
2023ರ ನವೆಂಬರ್ 8 ರಂದು ಹಾಸನ ಪ್ರವಾಸದಲ್ಲಿದ್ದ ಸದಾನಂದ ಗೌಡ ಅಚ್ಚರಿ ಬೆಳವಣಿಗೆಯಲ್ಲಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪಗೆ ಟಿಕೆಟ್ ನೀಡದಿರುವ ನಿರ್ಧಾರ ತಿಳಿಸಿ ಚುನಾವಣಾ ರಾಜಕೀಯ ನಿವೃತ್ತಿ ಪಡೆಯುವ ನಿರ್ದೇಶನ ನೀಡಿತ್ತು. ಅದರಂತೆ ಈಶ್ವರಪ್ಪ ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದರು. ಅದಾದ ಕೆಲ ತಿಂಗಳ ನಂತರ ಸದಾನಂದ ಗೌಡರಿಗೂ ಇದೇ ರೀತಿಯ ಸಂದೇಶ ಬಂದಿತ್ತು. ಆ ರೀತಿಯ ಚರ್ಚೆಗಳ ನಡುವೆಯೇ ಸದಾನಂದ ಗೌಡರು ಚುನಾವಣಾ ರಾಜಕೀಯ ನಿವೃತ್ತಿ ಪ್ರಕಟಿಸಿದ್ದರು.
ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಅಂತ ನೇರವಾಗಿ ವರಿಷ್ಠರು ಸದಾನಂದ ಗೌಡರಿಗೆ ಹೇಳಿದ್ದಾರೆ. ಹಾಗಾಗಿ ಅವರು ನಿವೃತ್ತಿ ಘೋಷಿಸಿದ್ದಾರೆ ಎಂದು ಈಗಾಗಲೇ ಚುನಾವಣಾ ರಾಜಕಾರಣದ ನಿವೃತ್ತಿ ಘೋಷಣೆ ಮಾಡಿದ್ದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದರು. ಇದಕ್ಕೆ ಸದಾನಂದ ಗೌಡರು ಅಸಮಾಧಾನ ವ್ಯಕ್ತಪಡಿಸಿದ್ದರು. ನನ್ನ ಮೇಲೆ ಯಾರೂ ಒತ್ತಡ ಹೇರಿಲ್ಲ, ಸ್ವಯಂ ನಾನೇ ಚುನಾವಣಾ ನಿವೃತ್ತಿ ಘೋಷಿಸಿದ್ದೇನೆ ಎಂದು ಸ್ಪಷ್ಟೀಕರಣ ನೀಡಿದ್ದರು.
ಆದರೆ 2024ರ ಜನವರ 3 ರಂದು ತಮ್ಮ ನಿರ್ಧಾರವನ್ನು ವಾಪಸ್ ಪಡೆದಿದ್ದ ಸದಾನಂದ ಗೌಡ ಈ ಬಾರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಆಕಾಂಕ್ಷಿ ಎನ್ನುವ ಹೇಳಿಕೆ ನೀಡಿದ್ದರು. ಸದಾನಂದ ಗೌಡ ಜಾಗಕ್ಕೆ ಶೋಭಾ ಕರಂದ್ಲಾಜೆ ಅವರನ್ನು ತರುವ ಚರ್ಚೆ ನಡೆಯುತ್ತಿದ್ದ ಹಿನ್ನೆಲೆ ಬೆಂಗಳೂರು ಬಿಜೆಪಿ ನಾಯಕರೆಲ್ಲಾ ಸೇರಿ ಸದಾನಂದ ಗೌಡರ ಮನವೊಲಿಕೆ ಮಾಡಿ ಸ್ಪರ್ಧೆಗೆ ಮುಂದಾಗುವಂತೆ ಒತ್ತಡ ಹೇರಿದ್ದರು ಎನ್ನಲಾಗಿತ್ತು.
ಆದರೂ ಸದಾನಂದ ಗೌಡರು ಒತ್ತಡಕ್ಕೋ ಅಥವಾ ಸ್ವಂತ ಇಚ್ಛೆಯಿಂದಲೋ ಸ್ಪರ್ಧೆಯ ಬಯಕೆ ವ್ಯಕ್ತಪಡಿಸಿದ್ದರು. ಈ ಬಾರಿಯ ಆಕಾಂಕ್ಷಿಗಳ ಹೆಸರಿನ ಚರ್ಚೆ ವೇಳೆ ಸದಾನಂದ ಗೌಡರ ಹೆಸರನ್ನೂ ಸೇರಿಸಿಕೊಂಡೇ ಚರ್ಚಿಸಲಾಗಿತ್ತು. ಆದರೆ ಇದೀಗ ದೆಹಲಿ ಮಟ್ಟದಲ್ಲಿ ಸದಾನಂದ ಗೌಡರಿಗೆ ಟಿಕೆಟ್ ಇಲ್ಲ ಎನ್ನುವ ಚರ್ಚೆಯಾಗಿತ್ತು ಎನ್ನುವ ಮಾಹಿತಿ ಸಿಕ್ಕಿದೆ. ಹಾಗಾಗಿ ಅವರು ಈ ರೀತಿ ಚುನಾವಣಾ ರಾಜಕೀಯಕ್ಕೆ ವಿದಾಯ ನೀಡುವ ರೀತಿಯಲ್ಲಿ ಎಲ್ಲರಿಗೂ ಧನ್ಯವಾದ ತಿಳಿಸಿ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂಓದಿ:ರಾಜಕೀಯ ಪ್ರವೇಶಕ್ಕೆ ಜಯದೇವ ಆಸ್ಪತ್ರೆ ಮಾಜಿ ನಿರ್ದೇಶಕ ಡಾ. ಮಂಜುನಾಥ್ ಒಪ್ಪಿಗೆ, ನಾಳೆ ಬಿಜೆಪಿ ಸೇರ್ಪಡೆ : ಆರ್ ಅಶೋಕ್