ಮೈಸೂರು: ಜೀವನದ ಸಂಧ್ಯಾಕಾಲದಲ್ಲಿರುವ ನಮಗೆ ಇಂದಿನ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ಕಾಣಬೇಕು ಅನ್ನಿಸುತ್ತಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರನೇ ಅವಧಿಯಲ್ಲಿ ನೆರವೇರಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಸಿಎಂ ಎಸ್ ಎಂ ಕೃಷ್ಣ ಮನವಿ ಮಾಡಿದರು. ನಗರದ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಭಾನುವಾರ ನಡೆದ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರ ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಚುನಾವಣಾ ರಾಜಕೀಯದಲ್ಲಿ ಬದಲಾವಣೆ ಆಗಬೇಕು. ಚುನಾವಣೆಯಲ್ಲಿ ನೂರಾರು ಕೋಟಿ ಖರ್ಚು ಮಾಡುವವರು ಇದ್ದಾರೆ. ಆದರೆ ರಾಜಕೀಯದಲ್ಲಿ ಹಿಂದಿರುಗಿ ನೋಡಿದಾಗ ಸುಧಾರಣೆ ಆಗಬೇಕು ಅನ್ನಿಸುತ್ತದೆ. ಅಲ್ಲದೆ ಚುನಾವಣೆಯಲ್ಲಿ ಮೌಲ್ಯಗಳಿವೆಯಾ ಎಂಬ ಪ್ರಶ್ನೆ ಕಾಡುತ್ತದೆ. ನಾವು ಈಗ ಜೀವನದ ಸಂಧ್ಯಾಕಾಲದಲ್ಲಿದ್ದೇವೆ. ಎಲ್ಲಾ ಪದವಿ ಮತ್ತು ಸವಲತ್ತು ಹೊಂದಿದ್ದೇನೆ. ಆದರೆ ಈ ಸಂದರ್ಭದಲ್ಲಿ ನಾನು ಚುನಾವಣೆಗೆ ಸ್ಪರ್ಧಿಸಲು ಅನರ್ಹನಾಗುತ್ತಿದ್ದೆ. ಶೇಷನ್ ಎಂಬ ಚುನಾವಣಾ ಆಯುಕ್ತರು ಇದ್ದರು. ಅವರು ಬಂದರೆ ನಾವು ನಡುಗುತ್ತಿದ್ದೆವು. ಅಷ್ಟು ಹೆದರಿಕೆ, ಶಿಸ್ತು ಮೂಡಿಸಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಬಹಳ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಮೂರನೇ ಅವಧಿಗೆ ಅವರು ಮತ್ತೊಮ್ಮೆ ಪ್ರಧಾನಿ ಆಗುವುದು ನಿಶ್ಚಿತ. ಈ ವೇಳೆ ಹಣದ ಸುಳಿಯಿಂದ ಚುನಾವಣೆ ರಕ್ಷಿಸಲು ಅಗತ್ಯ ತಂತ್ರಗಾರಿಕೆ ಮಾಡಬೇಕು. ಇದಕ್ಕಾಗಿ ಈ ವೇದಿಕೆ ಬಳಸಿಕೊಳ್ಳುತ್ತಿದ್ದೇನೆ ಎಂದರು.
ಅಶೋಕಪುರಂನ ಪ್ರತಿ ಮನೆಯಲ್ಲೂ ಶ್ರೀನಿವಾಸ್ ಪ್ರಸಾದ್ ಅವರ ಬೆಂಬಲಿಗರು ಇದ್ದರು. ಅಯಸ್ಕಾಂತ ಶಕ್ತಿ ಹೊಂದಿದ್ದಾರೆ ಎಂದುರೆ ಅತಿಶಯೋಕ್ತಿ ಆಗದು. ಶ್ರೀನಿವಾಸ ಪ್ರಸಾದ್ ಅವರು ಹೊಂದಿರುವ ಮೌಲ್ಯವನ್ನು ಗಮನಿಸಬೇಕು. ಅವರು ಜನ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಳ್ಳುತ್ತಿದ್ದರು. ಎಲ್ಲರ ಜತೆಗೂಡಿ ಸ್ನೇಹದ ಸೇತುವೆ ನಿರ್ಮಿಸಿಕೊಂಡಿದ್ದಾರೆ. ನಾವೆಲ್ಲರೂ ಪ್ರಜಾಪ್ರಭುತ್ವವನ್ನು ಹಾಡಿ ಹೊಗಳುತ್ತೇವೆ. ಆದರೆ ಪ್ರಜಾಪ್ರಭುತ್ವ ಯಾವ ದಿಕ್ಕಿಗೆ ಹೋಗುತ್ತಿದೆ ಎಂಬುದನ್ನು ನೋಡಬೇಕಿದೆ ಎಂದು ಹೇಳಿದರು.
ಅಭಿನಂದನಾ ಸಮಿತಿ ಅಧ್ಯಕ್ಷ ಪಿ.ಜಿ.ಆರ್. ಸಿಂಧ್ಯ ಮಾತನಾಡಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರಸಾದ್ ಅವರು ಅಳವಡಿಸಿಕೊಂಡವರು, ಇತರೆ ರಾಜಕಾರಣಿಗಳಂತೆ ಅಲ್ಲ. ಎಲ್ಲರ ವಿಶ್ವಾಸ ಗಳಿಸಿದ ಅಜಾತ ಶತ್ರು. ಪ್ರಸಾದ್ ಅವರ ಮಾತು ಮಾರ್ಗದರ್ಶಕ. ಅವರು ಸಚ್ಚಾರಿತ್ರ್ಯ ಬೆಳೆಸಿಕೊಂಡವರು. ಪ್ರಸಾದ್ ಅವರ ಜೀವನ ತೆರೆದ ಕನ್ನಡಿ ಎಂದು ಬಣ್ಣಿಸಿದರು.
ಇದನ್ನೂ ಓದಿ: ಲೋಕಸಭಾ ಚುನಾವಣೆ 2024: ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ - ಪೊಲೀಸರಿಂದ ರೂಟ್ ಮಾರ್ಚ್