ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಫೇಸ್‌ಬುಕ್ ಖಾತೆಯನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ. ಶೆಟ್ಟರ್ ಅವರ ಖಾತೆ ಬಳಸಿಕೊಂಡು ಖಾಸಗಿ ಉದ್ಯಮದ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ. ಯಾರೂ ಕೂಡ ಹಣ ಹಾಕಬಾರದು ಎಂದು ಜಗದೀಶ್ ಶೆಟ್ಟರ್ ಪುತ್ರ ಮನವಿ ಮಾಡಿದ್ದಾರೆ.
''ನನ್ನ ಖಾತೆಗೆ 7.50 ಲಕ್ಷ ಹಣ ಬಂದಿದ್ದು, ನಾನು ಮಾಡಿದ ವ್ಯವಹಾರದಲ್ಲಿ ಆರಂಭದಲ್ಲೇ ಲಾಭ ಬಂದಿದೆ. ನೀವು ಸಹ ವ್ಯವಹಾರ ನಡೆಸಿ ಲಾಭ ಮಾಡಿಕೊಳ್ಳಿ ಎಂದು ಪೋಸ್ಟ್ ಮಾಡಲಾಗಿದೆ. ಅಲ್ಲದೆ, ಕ್ರಿಸ್ಟಿನಾ ಪೆನಾಟೆ ಎಂಬುವರ ಸಲಹೆ ಪಡೆಯಬಹುದು'' ಎಂದು ಫೇಸ್‌ಬುಕ್ ಪೋಸ್ಟ್ನಲ್ಲಿ ಬರೆಯಲಾಗಿದೆ. ತಂದೆಯ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿರುವ ಮಾಹಿತಿ ನೀಡಿದ ಪುತ್ರ ಸಂಕಲ್ಪ ಶೆಟ್ಟರ್ ಮಾಹಿತಿ ಬಹಿರಂಗಪಡಿಸಿದ್ದು, ಯಾರೂ ಕೂಡ ಹಣ ಹಾಕಬಾರದು ಎಂದು ನೆಟ್ಟಿಗರಿಗೆ ಮನವಿ ಮಾಡಿದ್ದಾರೆ.
ಜಗದೀಶ್ ಶೆಟ್ಟರ್ ಅವರು ಇತ್ತೀಚಿಗೆ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಮರು ಸೇರ್ಪಡೆಯಾಗಿದ್ದಾರೆ. ವಿಧಾನಸಭೆ ಚುನಾವಣೆಗೂ ಮುನ್ನ ಸ್ವಾಭಿಮಾನಕ್ಕೆ ಧಕ್ಕೆಯಾಯ್ತು ಎಂದು ತತ್ವಸಿದ್ಧಾಂತಗಳನ್ನು ಬದಿಗಿಟ್ಟು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಕಾಂಗ್ರೆಸ್ನಿಂದ ಟಿಕೆಟ್ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿ ವಿರುದ್ಧವೇ ಸೋಲು ಅನುಭವಿಸಿದ್ದರು. ಬಳಿಕ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿ ಎಂಎಲ್ಸಿ ಆಗಿದ್ದರು.
ಇತ್ತೀಚಿನ ಪ್ರಕರಣ, ಮಧು ಬಂಗಾರಪ್ಪ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ: ಇತ್ತೀಚಿನ ದಿನಗಳಲ್ಲಿ ರಾಜಕೀಯ ನಾಯಕರು, ಸಿನಿಮಾ ತಾರೆಗಳು ಹಾಗೂ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ಸೃಷ್ಟಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಶಿಕ್ಷಣ ಹಾಗೂ ಸಾಕ್ಷರತಾ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆಯಲಾಗಿತ್ತು. ಈ ಬಗ್ಗೆ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ರಾಜ್ಯ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಸಂಚಾಲಕರಾದ ಜೆ.ಡಿ. ಮಂಜುನಾಥ್ ಎಂಬುವರು ಈ ಕುರಿತು ದೂರು ದಾಖಲಿಸಿದ್ದರು.
ರಾಜ್ಯಪಾಲರ ಹೆಸರಿನಲ್ಲಿ ಫೇಸ್‌ಬುಕ್ ನಕಲಿ ಖಾತೆ: ಸೈಬರ್ ಕಳ್ಳರು ರಾಜ್ಯಪಾಲರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಮಾಡಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ರ ಫೋಟೋ ಹಾಗೂ ಹೆಸರು ಬಳಸಿಕೊಂಡು ನಕಲಿ ಫೇಸ್‌ಬುಕ್ ಖಾತೆ ತೆರೆದಿರುವುದು ಬೆಳಕಿಗೆ ಬಂದಿತ್ತು. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ನೀಡಿರುವ ದೂರಿನನ್ವಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಕೆಪಿಸಿಸಿ ಹೆಸರಿನಲ್ಲೂ ನಕಲಿ ವೆಬ್‌ಸೈಟ್: ರಾಜ್ಯಪಾಲರಾದ ಥಾವರ್ ಚೆಂದ್ ಗೆಹ್ಲೋಟ್ ಅವರ ಹೆಸರಿನಲ್ಲಿ ಕೆಪಿಸಿಸಿ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಅನ್ನು ಮೂವರು ಇತ್ತೀಚೆಗೆ ಸೃಷ್ಟಿ ಮಾಡಿದ್ದರು. ಆ ಮೂವರು ಆರೋಪಿಗಳನ್ನು ಸೈಬರ್ ಕ್ರೈಮ್ ಪೊಲೀಸರು ಅರೆಸ್ಟ್ ಮಾಡಿದ್ದರು. ಬಂಧಿತರನ್ನು ವೆಂಕಟೇಶ್, ಧರಣೇಶ್ ಹಾಗೂ ಸಿದ್ದಾರ್ಥ್ ಎಂದು ಗುರುತಿಸಲಾಗಿತ್ತು. ಕೆಪಿಸಿಸಿ ಕಾನೂನು ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯ ಶತಭಾಷ್ ಶಿವಣ್ಣ ಅವರು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ: ಧಾರವಾಡ: ಹಣ ಪಡೆದು ಗ್ರಾಹಕರಿಗೆ ಸೈಟ್ ನೀಡದ ಡೆವಲಪರ್ಸ್ಗೆ ಗ್ರಾಹಕರ ಪರಿಹಾರ ಆಯೋಗದಿಂದ ದಂಡ